ಡಿ.ಕೆ ಶಿವಕುಮಾರ್, ಉಪಮುಖ್ಯಮಂತ್ರಿ
ಹಾಸನ: ‘ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನನಗೆ, ಡಿ.ಕೆ. ಸುರೇಶ್ ಅವರಿಗೆ ನೋಟಿಸ್ ಕೊಡುತ್ತಾರೆ ಎಂಬ ನಿರೀಕ್ಷೆ ಮಾಡಿರಲಿಲ್ಲ. ಈ ಮೂಲಕ ನನ್ನನ್ನು ಹೆದರಿಸಬಹುದು ಎಂದುಕೊಂಡಿದ್ದರೆ ಅದು ತಪ್ಪು. ನಮ್ಮ ಪಕ್ಷಕ್ಕೆ ದುಡ್ಡು ಕೊಡದೇ ಇನ್ಯಾರಿಗೆ ಕೊಡೋಣ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮನ್ನು ಅವರು ಕರೆಯಬಾರದಿತ್ತು. ಎಲ್ಲ ವಿವರವನ್ನು ಜಾರಿ ನಿರ್ದೇಶನಾಲಯಕ್ಕೆ ಕೊಟ್ಟಿದ್ದು, ಚಾರ್ಜ್‌ಶೀಟ್‌ನಲ್ಲಿ ನಮ್ಮ ಹೆಸರು ಸೇರಿಸಿಲ್ಲ. ನಮ್ಮ ಹೇಳಿಕೆ ತೆಗೆದುಕೊಂಡು ಬಿಟ್ಟಿದ್ದರು’ ಎಂದರು.
‘ಈ ಹಂತದಲ್ಲಿ ಏಕೆ ಕರೆದಿರುವುದು ನನಗೆ ಗೊತ್ತಿಲ್ಲ. ಆದರೆ ನಾನು ಹೋಗುತ್ತೇನೆ. ನೋಟಿಸ್ ಓದಿದ್ದೇನೆ. ನಮ್ಮ ವಕೀಲರ ಜೊತೆ ಮಾತನಾಡಿ ಅದಕ್ಕೆ ಏನು ಉತ್ತರ ಕೊಡಬೇಕೋ ಕೊಡುತ್ತೇನೆ’ ಎಂದರು.
ಕಾರ್ಟಿಯರ್ ವಾಚ್ ವಿಚಾರದ ಕುರಿತು ಪ್ರಸ್ತಾಪಿಸಿದ ಅವರು, ‘ಯಾರು ಯಾವ ಶರ್ಟ್ ಹಾಕ್ತಾರೆ? ಯಾವ ವಾಚ್ ಹಾಕ್ತಾರೆ? ಯಾವ ಕನ್ನಡಕ ಹಾಕ್ತಾರೆ? ಈ ಬಗ್ಗೆ ನಾನು ಯಾರನ್ನೂ ಪ್ರಶ್ನೆ ಮಾಡಲ್ಲ. ಇವೆಲ್ಲ ಅವರ ವೈಯುಕ್ತಿಕ ವಿಚಾರಗಳು. ನಾನು ₹ 1 ಸಾವಿರದ ವಾಚು ಕಟ್ಟುತ್ತೇನೋ, ₹ 10 ಲಕ್ಷದ ವಾಚು ಕಟ್ಟುತ್ತೇನೋ ಅದು ನನಗೆ ಬಿಟ್ಟಿದ್ದು. ಅದು ನನ್ನ ಆಸ್ತಿ, ನನ್ನ ಕಷ್ಟ, ನನ್ನ ಶ್ರಮ’ ಎಂದರು.
‘ಏನೋ ಪಾಪ ವಿರೋಧ ಪಕ್ಷದವರು ಗೊತ್ತಿಲ್ಲದೇ ಮಾತನಾಡಿದ್ದಾರೆ ಅಷ್ಟೇ. ಛಲವಾದಿ ನಾರಾಯಣ ಸ್ವಾಮಿಗೆ ಇನ್ನೂ ಅನುಭವ ಇಲ್ಲ. ಎಲೆಕ್ಷನ್‌ಗೆ ನಿಂತಿದ್ದಾರಾ ಇಲ್ಲ. ನನ್ನ ವ್ಯವಹಾರ ನನಗೆ ಗೊತ್ತಿದೆ. ನನ್ನ ವ್ಯವಹಾರ, ಬದುಕು ಏನು ಎಂಬುದು ಬಿಜೆಪಿಯ ಶೇ 90ರಷ್ಟು ಜನರಿಗೆ ಗೊತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.