ADVERTISEMENT

ಹಿಂದಿ| ರಾಜ್ಯದ ಜನತೆಯ ಕ್ಷಮೆಯಾಚಿಸಿದ ದೊಡ್ಡರಂಗೇಗೌಡ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 19:55 IST
Last Updated 27 ಜನವರಿ 2021, 19:55 IST
ದೊಡ್ಡರಂಗೇಗೌಡ
ದೊಡ್ಡರಂಗೇಗೌಡ   

ಬೆಂಗಳೂರು: ‘ಕನ್ನಡಿಗರ ಮೇಲೆ ಹಿಂದಿ ಹಾಗೂ ಇಂಗ್ಲಿಷ್ ಭಾಷೆ ಹೇರಿಕೆಯ ರೀತಿ ನೀತಿಗಳನ್ನು ಸಹಿಸುವುದಿಲ್ಲ. ನನ್ನ ಮಾತುಗಳು ಕನ್ನಡಿಗರ ಮನಸ್ಸನ್ನು ನೋಯಿಸಿದ್ದರೆ ಕ್ಷಮೆಯಾಚಿಸುತ್ತೇನೆ’ ಎಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ದೊಡ್ಡರಂಗೇಗೌಡ ತಿಳಿಸಿದ್ದಾರೆ.

ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ‘ಹಿಂದಿ ಭಾಷೆಯ ತಿರಸ್ಕಾರ ಏಕೆ’ ಎಂದು ಪ್ರಶ್ನಿಸಿದ್ದರು. ಅದೇ ರೀತಿ, ‘ಪ್ರಜಾವಾಣಿ ಫೇಸ್‌ ಬುಕ್‌ ಸಂವಾದ’ದಲ್ಲಿ ‘250 ವರ್ಷಗಳ ಗುಲಾಮಗಿರಿಯ ಸಂಕೇತವಾಗಿರುವ ಇಂಗ್ಲಿಷನ್ನು ಒಪ್ಪುತ್ತೀರಾದರೇ, ದೇಸಿ ಭಾಷೆಯ ಬಗ್ಗೆ ವಿರೋಧ ಏಕೆ ಎಂಬುದು ನನಗೆ ಅರ್ಥವಾಗದ ಸಂಗತಿ. ಎಷ್ಟೇ ವಿರೋಧ ವ್ಯಕ್ತವಾದರೂ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲೂ ಇದೇ ನಿಲುವು ಇರುತ್ತದೆ’ ಎಂದು ಪ್ರತಿಪಾದಿಸಿದ್ದರು.

ಹಿಂದಿ ಭಾಷೆಯ ಬಗೆಗಿನ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಟೀಕೆಗೂ ಗುರಿಯಾಗಿತ್ತು. ಅವರು ತಮ್ಮ ಹೇಳಿಕೆ ವಾಪಸ್ ಪಡೆದು, ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಬರಗೂರು ರಾಮಚಂದ್ರಪ್ಪ, ಎಸ್.ಜಿ. ಸಿದ್ಧರಾಮಯ್ಯ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವರು ಗೌಡರ ಹೇಳಿಕೆ ಖಂಡಿಸಿದ್ದರು.

ADVERTISEMENT

‘ಯಾವುದೇ ಭಾಷೆಯನ್ನು ನನ್ನ ತಲೆಯ ಮೇಲೆ ಹೊತ್ತು ಮೆರೆಸುತ್ತಿಲ್ಲ. ನಾನು ಭಕ್ತಿ ಪೂರ್ವಕವಾಗಿ ನನ್ನ ಅಂತರಾಳದಿಂದ ಕನ್ನಡವನ್ನು ಆರಾಧಿಸುತ್ತೇನೆ. ಕನ್ನಡವನ್ನೇ ನನ್ನ ತಲೆಯ ಮೇಲೆ ಹೊತ್ತು ಮೇರೆಸುತ್ತೇನೆ’ ಎಂದು ದೊಡ್ಡರಂಗೇಗೌಡ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.