ADVERTISEMENT

ಎಸಿಬಿ ರದ್ದತಿ ವಿರುದ್ಧ ಸುಪ್ರೀಂ ಮೊರೆ ಹೋಗಲು ಚುನಾವಣೆ ಭಯ: ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 10:59 IST
Last Updated 12 ಆಗಸ್ಟ್ 2022, 10:59 IST
   

ಮೈಸೂರು: ‘ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಗೊಳಿಸಿ ಹೈಕೋರ್ಟ್‌ ನೀಡಿರುವ ತೀರ್ಪನ್ನು ಪ್ರಮುಖ ಮೂರು ಪಕ್ಷಗಳವರೂ ವಿರೋಧಿಸಬಹುದು’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಲೋಕಾಯುಕ್ತದಿಂದ ಸಾಕಷ್ಟು ಪ್ರಕರಣಗಳಲ್ಲಿ ಶಿಕ್ಷೆ ಆಗಿತ್ತು. ಎಸಿಬಿ ಬಂದ ಬಳಿಕ ಯಾವೊಬ್ಬ ರಾಜಕಾರಣಿ ಅಥವಾ ಅಧಿಕಾರಿಯ ಮೇಲೆ ಕ್ರಮ ಜರುಗಿಸಿಲ್ಲ’ ಎಂದು ದೂರಿದರು.

‘ಹೈಕೋರ್ಟ್‌ ತೀರ್ಪಿನಿಂದಾಗಿ, ಲೋಕಾಯುಕ್ತಕ್ಕೆ ಮತ್ತೆ ಬಲ ಬಂದಿದೆ. ಭ್ರಷ್ಟಾಚಾರಿಗಳಿಗೆ ನಡುಕ ಹುಟ್ಟಿದೆ’ ಎಂದು ವಿಶ್ಲೇಷಿಸಿದರು.

‘ಮೂರು ಪಕ್ಷಗಳಲ್ಲೂ ಭ್ರಷ್ಟಾಚಾರಿಗಳಿದ್ದಾರೆ. ಅವರೆಲ್ಲರೂ ಲೋಕಾಯುಕ್ತದ ವಿರೋಧಿಗಳು. ಮುಂಬರುವ ಚುನಾವಣೆಯ ಕಾರಣದಿಂದ ಗಿಮಿಕ್ ಮಾಡುತ್ತಿದ್ದಾರೆ. ಒಂದು ವೇಳೆ ಸುಪ್ರೀಂ ಕೋರ್ಟ್ ಮೊರೆ ಹೋದರೆ ಅಧಿಕಾರ ಕಳೆದುಕೊಳ್ಳುವ ಭೀತಿ ಇದೆ. ಚುನಾವಣೆ ಸಮಿಪಿಸುತ್ತಿರುವುದರಿಂದ ನೇರವಾಗಿ ಅಪೀಲು ಹೋಗುತ್ತಿಲ್ಲ. ಹಿಂಬಾಲಕರು ಸುಪ್ರೀಂ ಕೋರ್ಟ್‌ ಮೊರೆ ಹೋಗಬಹುದು; ಅದಕ್ಕೆ ಅವಕಾಶವಿದೆ. ಚುನಾವಣೆ ಕಾರಣದಿಂದ ಸದ್ಯಕ್ಕೆ ಸುಮ್ಮನಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಲೋಕಾಯುಕ್ತಕ್ಕೆ ಸ್ವತಂತ್ರ ಅಧಿಕಾರ ಹಾಗೂ ಸವಲತ್ತು ನೀಡಿ ಬಲಪಡಿಸಬೇಕು’ ಎಂದು ಒತ್ತಾಯಿಸಿದರು.

‘ಎಸಿಬಿಯಲ್ಲಿ ಈವರಗೆ ಸಾವಿರಾರು ಪ್ರಕರಣಗಳು ದಾಖಲಾಗಿವೆ. ಆದರೆ, ಯಾರಿಗೂ ಶಿಕ್ಷೆ ಆಗಿಲ್ಲ ಎಂಬುದೇ ಬೇಸರ. ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಶಿಕ್ಷಯೇ ಆಗಿಲ್ಲ. ಸಚಿವರನ್ನು ಬಿಡಿ, ಒಬ್ಬ ಶಾಸಕನನ್ನೂ ಎಸಿಬಿ ವಿಚಾರಣೆಗೆ ಒಳಪಡಿಸಿಲ್ಲ. ನಮ್ಮ–ನಿಮ್ಮಂತವರು ತಪ್ಪು ಮಾಡಿದರೆ ಹೀಗೆ ನಡೆದುಕೊಳ್ಳುತ್ತಿದ್ದಾರಾ’ ಎಂದು ಪ್ರಶ್ನಿಸಿದರು.

‘ಸರ್ಕಾರಿ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲು ಸರ್ಕಾರದ ಅನುಮತಿ ಕೇಳುತ್ತಾರೆ. ಇದು ಬ್ರಿಟಿಷ್ ಆಡಳಿತದ ಕಾನೂನು. ಈಗ ನಮ್ಮದೇ ಸರ್ಕಾರವಿದ್ದರೂ ಅನುಮತಿ ಏಕೆ ಬೇಕು?. ಸಾಮಾನ್ಯ ಜನರನ್ನು ನೇರವಾಗಿ ತನಿಖೆ ಮಾಡುತ್ತಾರೆ’ ಎಂದು ಟೀಕಿಸಿದರು.

‘ಜೈಲಿಗೆ ಹೋಗಿ ಬಂದವರಿಗೆ ಸೇಬಿನ ಹಾರ ಹಾಕುತ್ತಾರೆ. ಭ್ರಷ್ಟಾಚಾರಿಗೆ ಜೈಕಾರ ಹಾಕುತ್ತಾರೆ. ಸದ್ಯ ನಮ್ಮ ಜನರ ಮನಸ್ಥಿತಿಯು ಹಣ–ಅಧಿಕಾರದ ಹಿಂದೆ ಸಾಗಿದೆ. ಅದಕ್ಕಾಗಿ ಹಂಬಲಿಸುತ್ತಾರೆ; ಹಾತೊರೆಯುತ್ತಾರೆ. ಭ್ರಷ್ಟರಿಗೆ ಮಣೆ ಹಾಕುತ್ತಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಪ್ರವಾಹ, ಅತಿವೃಷ್ಟಿಯಿಂದ ಸಾವಿರಾರು ಕೋಟಿ ರೂಪಾಯಿ ಹಾನಿ ಸಂಭವಿಸಿದೆ. ಸಮರ್ಪಕ ಪರಿಹಾರ ನೀಡುತ್ತಿಲ್ಲ. ಶೇ 40ರಷ್ಟು ಕಮಿಷನ್ ಆಸೆಗಾಗಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸುಮ್ಮನಿದ್ದಾರೆ’ ಎಂದು ಆರೋಪಿಸಿದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.