ಬೆಂಗಳೂರು: ಎಂಜಿನಿಯರಿಂಗ್ ಪದವಿಯಲ್ಲಿ ಕಂಪ್ಯೂಟರ್ ಸೈನ್ಸ್ ಸೇರಿದಂತೆ ಬಹುಬೇಡಿಕೆ ಇರುವ ಕೋರ್ಸ್‌ಗಳ ಸೀಟು ಹೆಚ್ಚಳಕ್ಕೆ ಕಡಿವಾಣ ಹಾಕಲು ಸರ್ಕಾರ ಚಿಂತನೆ ನಡೆಸಿದೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಸೀಟು ಹೆಚ್ಚಳದ ಮೇಲಿನ ಮಿತಿಯನ್ನು ತೆಗೆದುಹಾಕಿದ ನಂತರ ಬಹುತೇಕ ಎಂಜಿನಿಯರಿಂಗ್ ಕಾಲೇಜುಗಳು ಬೇಡಿಕೆ ಇರುವ ಕೋರ್ಸ್‌ಗಳ ಸೀಟು ಹೆಚ್ಚಳ ಮಾಡಿಕೊಂಡು, ಬೇಡಿಕೆ ಇಲ್ಲದ ಕೋರ್ಸ್‌ಗಳನ್ನು ಮುಚ್ಚುತ್ತಿವೆ. ಇದರಿಂದ ವಿವಿಧ ವಿಭಾಗಗಳ ನಡುವೆ ಅಸಮತೋನ ಸೃಷ್ಟಿಯಾಗಿದೆ. ಹಾಗಾಗಿ, ಯಾವುದೇ ಕೋರ್ಸ್‌ಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
ತೆಲಂಗಾಣ ಸರ್ಕಾರ 2024-25ನೇ ಸಾಲಿನ ಪ್ರವೇಶದಲ್ಲಿ ಬೇಡಿಕೆ ಇರುವ ಕೋರ್ಸ್‌ಗಳ ಸೀಟು ಹೆಚ್ಚಳದ ಮೇಲೆ ನಿರ್ಬಂಧ ಹೇರಿತ್ತು. ಕೆಲವು ಎಂಜಿನಿಯರಿಂಗ್ ಕಾಲೇಜುಗಳು ನಿರ್ಧಾರ ಪ್ರಶ್ನಿಸಿ, ಕೋರ್ಟ್ ಮೊರೆ ಹೋಗಿದ್ದವು. ವಿಚಾರಣೆ ನಡೆಸಿದ ಕೋರ್ಟ್ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿದೆ.
‘ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ತೆಲಂಗಾಣ ಪ್ರಕರಣದ ತೀರ್ಪಿನ ವಿವರಗಳನ್ನು ಪಡೆಯಲಾಗುತ್ತಿದೆ. ಸಮಾಜ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಕೋರ್ಸ್‌ಗಳ ಮಧ್ಯೆ ಸಮತೋಲನ ಕಾಯ್ದುಕೊಳ್ಳುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.