ADVERTISEMENT

ಐಎಂಎ ಪ್ರಕರಣ ಸಿಬಿಐಗೆ ಒಪ್ಪಿಸಲಿ: ಈಶ್ವರಪ್ಪ ಆಗ್ರಹ

ಜಿಂದಾಲ್‌ಗೆ ಜಮೀನು ಮಾರಾಟ ನಿರ್ಧಾರ ಕೈಬಿಡಲಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 9:53 IST
Last Updated 16 ಜೂನ್ 2019, 9:53 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ   

ಬಳ್ಳಾರಿ: ‘ಜಿಂದಾಲ್ ಸ್ಟೀಲ್ಸ್ ಕಂಪನಿಗೆ ಜಮೀನು ಮಾರಾಟ ಮತ್ತು ಐಎಂಎ ಪ್ರಕರಣವನ್ನು ರಾಜ್ಯ ಸರ್ಕಾರ ಕೂಡಲೇ ಸಿಬಿಐ ತನಿಖೆಗೆ ನೀಡಬೇಕು. ಆಗದಿದ್ದರೆ ಐಎಂಎ ಪ್ರಕರಣವನ್ನಾದರೂ ತನಿಖೆಗೆ ನೀಡಬೇಕು. ಜಿಂದಾಲ್‌ಗೆ ಭೂಮಿ ಮಾರಾಟ ಮಾಡುವುದನ್ನು ಕೈಬಿಡಬೇಕು’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಂದಾಲ್‌ಗೆ ಜಮೀನು ಮಾರುವ ವಿಚಾರದಲ್ಲಿ ಸರ್ಕಾರದ ಉನ್ನತ ಮಟ್ಟದ ರಾಜಕಾರಣಿಗಳೇ ಭಾಗಿಯಾಗಿದ್ದಾರೆ, ಜಮೀನು ನೀಡಬಾರದೆಂದು ಕಾಂಗ್ರೆಸ್ ಮುಖಂಡರಾದ ಎಚ್‌.ಕೆ.ಪಾಟೀಲ, ಎಸ್‌.ಆರ್‌.ಪಾಟೀಲ, ಆನಂದಸಿಂಗ್ ಹೇಳುತ್ತಿದ್ದಾರೆ, ಹೀಗಾಗಿ ಬಿಜೆಪಿ ಹೋರಾಟ ಮಾಡುತ್ತಿದೆಯೇ ಹೊರತು ರಾಜಕಾರಣ ಮಾಡುತ್ತಿಲ್ಲ’ ಎಂದು ಪ್ರತಿಪಾದಿಸಿದರು.

‘ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ ಕುಣಿದಿದ್ದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಜಿಂದಾಲ್‌ ವಿವಾದದ ಕುರಿತು ಮಾತನಾಡಲಿ. ಯಾರ್‍ಯಾರಿಗೆಲ್ಲಾ ಈ ಪ್ರಕರಣದಲ್ಲಿ ಕಿಕ್ ಬ್ಯಾಕ್ ಸಿಕ್ಕಿದೆ ಎಂಬುದನ್ನು ಬಹಿರಂಗಪಡಿಸಲಿ, ₨ 3 ಸಾವಿರ ಕೋಟಿ ಬೆಲೆ ಬಾಳುವ 3667 ಎಕರೆ ಭೂಮಿಯನ್ನು ₨ 30 ಕೋಟಿಗೆ ಮಾರುವಾಗ ಸಿದ್ದರಾಮಯ್ಯ ಯಾಕೆ ಸುಮ್ಮನಾಗಿದ್ದಾರೆ’ ಎಂದು ಪ್ರಶ್ನಿಸಿದರು.

ADVERTISEMENT

‘ವಿರೋಧ ಪಕ್ಷವಾಗಿ ಬಿಜೆಪಿ, ವಾಟಾಳ್‌ ನಾಗರಾಜ್‌, ಸಂಘಟನೆಗಳು ಪ್ರತಿಭಟನೆ ನಡೆಸಿದ್ದಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಕರಣವನ್ನು ಸಂಪುಟ ಉಪಸಮಿತಿಯ ಪರಿಶೀಲನೆಗೆ ಒಪ್ಪಿಸಿದ್ದಾರೆ. ಸರ್ಕಾರ ನಿರ್ಧರಿಸಿದರೆ ಯಾವ ಒಪ್ಪಂದವೂ ನಿಲ್ಲುವುದಿಲ್ಲ. ಆದರೆ ಸರ್ಕಾರದ ಎಲ್ಲರೂ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ಉಪಸಮಿತಿ ಸದಸ್ಯರಾಗಿದ್ದಾಗ ಜಿಂದಾಲ್‌ಗೆ ಭೂಮಿ ಕೊಡುವುದನ್ನು ವಿರೋಧಿಸಿದ್ದ ಕೆ.ಜೆ.ಜಾರ್ಜ್‌ ತಾವು ಕೈಗಾರಿಕೆ ಸಚಿವರಾದ ಕೂಡಲೇ, ಏಕೆ ಮಾರಾಟ ಮಾಡಬಾರದು ಎಂದು ಹೇಳಿ ವರಸೆ ಬದಲಿಸಿದ್ದಾರೆ’ ಎಂದರು.

‘ಐಎಂಎ ಹಗರಣದ ಆರೋಪಿಗೆ ₨ 600 ಕೋಟಿ ಸಾಲ ಕೊಡಿಸಲು ಸಚಿವರೊಬ್ಬರು ಪ್ರಯತ್ನಿಸಿದ್ದರು ಎಂದು ಹಿರಿಯ ಐಎಎಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ, ಆರೋಪಿ ಜೊತೆ ಗುರ್ತಿಸಿಕೊಂಡಿದ್ದ ಬಹಿರಂಗವಾದ ಬಳಿಕ ಕುಮಾರಸ್ವಾಮಿ, ಸಿದ್ದರಾಮಯ್ಯ, ಜಮೀರ್‌ ಅಹ್ಮದ್‌, ಆರೋಪಿ ಜೊತೆಗೂಡಿ ಊಟ ಮಾಡಬಾರದೇ ಎಂದು ಭಂಡತನದ ಮಾತಾಡುತ್ತಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.