ಹೊಸಕೋಟೆ ಪೊಲೀಸರು ವಶಪಡಿಸಿಕೊಂಡ ನಕಲಿ ಚಿನ್ನ ಮತ್ತು ನಗದು
ಹೊಸಕೋಟೆ: ನಕಲಿ ಚಿನ್ನ ಮಾರಾಟ ಮಾಡಿ ವಂಚಿಸುತ್ತಿದ್ದ ಅಂತರ ಜಿಲ್ಲಾ ವಂಚಕರ ತಂಡವನ್ನು ಹೊಸಕೋಟೆ ಪೊಲೀಸರು ಬಂಧಿಸಿ ಎಂಟು ಕೆ.ಜಿ. ನಕಲಿ ಚಿನ್ನ, ₹63 ಲಕ್ಷ ನಗದು
ವಶಪಡಿಸಿಕೊಂಡಿದ್ದಾರೆ.
ಜನರನ್ನು ಹೇಗೆ ವಂಚಿಸುತ್ತಿದ್ದರು?
ಆರೋಪಿಗಳು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫೋನ್ ನಂಬರ್ ಹುಡುಕಿ ಪಡೆಯುತ್ತಿದ್ದರು. ತೆಲುಗು ಮಾತನಾಡುವವರ ಜೊತೆ ಮೊದಲೇ ಪರಿಚಯವಿದ್ದವರಂತೆ ಆಪ್ತವಾಗಿ ಮಾತನಾಡಿ ಪರಿಚಯ ಮಾಡಿಕೊಳ್ಳುತ್ತಿದ್ದರು.
ಕೇರಳದ ಜಮೀನಿನಲ್ಲಿ ಭೂಮಿ ಅಗೆಯುವಾಗ ಮಹಾರಾಜರ ಕಾಲದ ಚಿನ್ನದ ಹಾರ ಸಿಕ್ಕಿದೆ. ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ಹೇಳುತ್ತಿದ್ದರು. ನಕಲಿ ಚಿನ್ನದ ಹಾರವನ್ನು ವಿಡಿಯೊ ಕಾಲ್‌ನಲ್ಲಿ ತೋರಿಸಿ ಮಹಾರಾಜರ ಕಾಲದ ಅಸಲಿ ಕಂಠಿಹಾರ ಎಂದು ನಂಬಿಸುತ್ತಿದ್ದರು.
ಸ್ಥಳವೊಂದಕ್ಕೆ ಕರೆಸಿಕೊಂಡು ಹಾರವನ್ನು ತೋರಿಸುತ್ತಿದ್ದರು. ಹಾಗೇ ತೋರಿಸುವಾಗ ಕೆಲವು ಅಸಲಿ ಚಿನ್ನದ ಗುಂಡುಗಳನ್ನು ಹಾರಕ್ಕೆ ಜೋಡಿಸಿರುತ್ತಿದ್ದರು. ಆ ಪೈಕಿ ಒಂದು ಚಿನ್ನದ ಗುಂಡು ನೀಡಿ ಅಸಲಿ ಎಂದು ಪರೀಕ್ಷಿಸಿ ಖಾತ್ರಿಯಾದ ನಂತರ ಹಣ ತರುವಂತೆ ಹೇಳುತ್ತಿದ್ದರು.
ಅಸಲಿ ಚಿನ್ನದ ಗುಂಡು ತನ್ನೊಂದಿಗೆ ಕೊಂಡೊಯ್ದ ವ್ಯಕ್ತಿಗಳು ಅದನ್ನು ಪರೀಕ್ಷಿಸಿ ಖಾತ್ರಿಯಾದ ನಂತರ ವ್ಯವಹಾರಕ್ಕೆ ಇಳಿಯುತ್ತಿದ್ದರು. ತಾವು ಹೇಳಿದ ಸ್ಥಳಕ್ಕೆ ಹಣ ತರುವಂತೆ ಆರೋಪಿಗಳು ಸೂಚಿಸುತ್ತಿದ್ದರು. ಆಗ ನಕಲಿ ಚಿನ್ನದ ಹಾರವನ್ನು ಕೊಟ್ಟು, ಹಣ ಪಡೆದು ತಕ್ಷಣ ವಾಹನದಲ್ಲಿ ಪರಾರಿಯಾಗುತ್ತಿದ್ದರು.
ಒಂದೇ ದಿನ ವಿವಿಧ ವ್ಯಕ್ತಿಗಳನ್ನು ಬೇರೆ, ಬೇರೆ ಸ್ಥಳಗಳಿಗೆ ಕರೆಸಿಕೊಳ್ಳುತ್ತಿದ್ದ ಆರೋಪಿಗಳು ಎಲ್ಲರಿಗೂ ನಕಲಿ ಹಾರ ನೀಡಿ ಹಣ ಪಡೆದು ಪಾರಾಗುತ್ತಿದ್ದರು.
ವಂಚನೆಗೆ ಆರೋಪಿಗಳು ಬೇರೆ, ಬೇರೆ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸುತ್ತಿದ್ದರು. ಪ್ರತಿಯೊಬ್ಬರಿಗೂ ಬೇರೆ, ಬೇರೆ ಸಿಮ್ ಬಳಸುತ್ತಿದ್ದರು. ಕೈಗೆ ಹಣ ಸೇರಿದ ನಂತರ ಸಿಮ್ ಮುರಿದು ಬಿಸಾಕಿ ಬೇರೆ ಕೃತ್ಯಕ್ಕೆ ಮತ್ತೆ ಹೊಸ ಸಿಮ್ ಕಾರ್ಡ ಖರೀದಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.