
ಮಂಡ್ಯ: ‘ಬೆಂಕಿ ಹಚ್ಚಿಕೊಂಡು ಮೃತಪಟ್ಟ ರೈತ ಮಂಜೇಗೌಡ ಸಾವಿಗೆ ಕಾಂಗ್ರೆಸ್ ಸರ್ಕಾರ ನೇರ ಕಾರಣ. ಕಾಂಗ್ರೆಸ್ ಸರ್ಕಾರ ಬಂದ ನಂತರ ಎರಡು ವರ್ಷಗಳಲ್ಲಿ 2 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪ ಮಾಡಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಈ ಸರ್ಕಾರದ ಅವಧಿಯಲ್ಲಿ ರೈತರಿಗೆ ವಿಶ್ವಾಸ ಕುಂದಿದೆ. ಅನ್ನದಾತರ ಪರ ಯಾವುದೇ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸುತ್ತಿಲ್ಲ ಎಂದು ಆರೋಪಿಸಿದರು.
‘ಮಂಜೇಗೌಡರು ₹ 11 ಲಕ್ಷ ಸಾಲ ಮಾಡಿದ್ದರು. ಮನೆಯಲ್ಲಿದ್ದ ಎಲ್ಲ ಚಿನ್ನಾಭರಣವನ್ನು ₹4.5 ಲಕ್ಷಕ್ಕೆ ಅಡವಿಟ್ಟಿದ್ದರು. ಬಗರ್ ಹುಕುಂ ಸಾಗುವಳಿಯಲ್ಲಿ 16 ವರ್ಷದಿಂದ ಉಳುಮೆ ಮಾಡುತ್ತಿದ್ದಾರೆ. ಅರಣ್ಯ ಇಲಾಖೆಯವರು ಈಗ ತಕರಾರು ತೆಗೆದಿದ್ದಾರೆ. ಅರ್ಜಿ ಕೊಟ್ಟರೂ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇದರಿಂದಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಕಬ್ಬು ಬೆಳೆಗಾರರು ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ. ಚಾಮರಾಜನಗರದಲ್ಲಿ ಕೆರೆ ತುಂಬಿಸಿ ಎರಡು ವರ್ಷ ಕಳೆದಿದೆ. ಮಾನವ–ವನ್ಯಜೀವಿ ಸಂಘರ್ಷ ಪ್ರಕರಣಗಳು ಹೆಚ್ಚಾಗುತ್ತಿವೆ. ಅರಣ್ಯದಂಚಿನ ಗ್ರಾಮಗಳಿಗೆ ಸೌಲಭ್ಯ ಕೊಡಬೇಕು. ಅಧಿಕಾರಿಗಳು, ಮಂತ್ರಿಗಳು ಜನರಿಗೆ ಸ್ಪಂದಿಸುತ್ತಿಲ್ಲ. ಸಿಎಂ ಸ್ಥಾನಕ್ಕಾಗಿ ‘ಮ್ಯೂಸಿಕಲ್ ಛೇರ್’ ನಡೆಯುತ್ತಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಮನೆಗೆ ಹೋಗುವುದು ನಿಶ್ಚಿತ:
‘ತುಪ್ಪದ ಬೆಲೆ ಏರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಸಾಲ ಮಾಡಿ ತುಪ್ಪ ತಿನ್ನು ಎನ್ನುತ್ತಾರೆ. ಆದರೆ ಕಾಂಗ್ರೆಸ್ ಸರ್ಕಾರ ಸಾಲ ಮಾಡಿಯೂ ತುಪ್ಪ ತಿನ್ನದ ಹಾಗೇ ಮಾಡಿದೆ. ರಾಜ್ಯ ಸರ್ಕಾರ ಲೂಟಿ ಹೊಡೆಯಲು ಬೆಲೆ ಏರಿಕೆ ಮಾಡುತ್ತಿದೆ. ನವೆಂಬರ್ ಕ್ರಾಂತಿ ಪಕ್ಕಾ, ಸಿದ್ದರಾಮಯ್ಯ ಮನೆಗೆ ಹೋಗುವುದು ಪಕ್ಕಾ. ಸಿಎಂ ಖುರ್ಚಿ ಫೈಟ್‌ನಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗುವಂತೆ ಮಾಡಿದೆ. ನವೆಂಬರ್ ಕ್ರಾಂತಿ, ಕಾಂಗ್ರೆಸ್ ವಾಂತಿ ಪಕ್ಕಾ’ ಎಂದು ವ್ಯಂಗ್ಯವಾಡಿದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಯುವ ನಾಯಕ ಇಂಡುವಾಳು ಸಚ್ಚಿದಾನಂದ, ಅಶೋಕ್, ವಸಂತ್‌ಕುಮಾರ್ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.