ADVERTISEMENT

ವಸತಿ ಕಳೆದುಕೊಂಡವರಿಗೆ ಸಿಕ್ಕಿಲ್ಲ ಬಿಡಿಗಾಸು: ನೆರೆ ಸಂತ್ರಸ್ತರಿಗೆ ಬಯಲೇ ಆಲಯ

ರಾಜಕಾರಣಿಗಳ ಅನುಯಾಯಿಗಳಿಗೆ ಮಣೆ

ಚಂದ್ರಹಾಸ ಹಿರೇಮಳಲಿ
Published 5 ಡಿಸೆಂಬರ್ 2019, 20:15 IST
Last Updated 5 ಡಿಸೆಂಬರ್ 2019, 20:15 IST
ಶಿವಮೊಗ್ಗ ಬಾಪೂಜಿ ನಗರದ ಶಬ್ಬೀರ್ ಹುಸೇನ್ ಅವರ ಕುಟುಂಬದ ಮಹಿಳೆಯೊಬ್ಬರು ಕುಸಿದ ಮನೆಯಲ್ಲೇ ಅಡುಗೆ ಸಿದ್ಧಪಡಿಸಿದರು
ಶಿವಮೊಗ್ಗ ಬಾಪೂಜಿ ನಗರದ ಶಬ್ಬೀರ್ ಹುಸೇನ್ ಅವರ ಕುಟುಂಬದ ಮಹಿಳೆಯೊಬ್ಬರು ಕುಸಿದ ಮನೆಯಲ್ಲೇ ಅಡುಗೆ ಸಿದ್ಧಪಡಿಸಿದರು   

ಶಿವಮೊಗ್ಗ: ತುಂಗಾ ನದಿ ಪ್ರವಾಹದಿಂದ ಮನೆ ಕಳೆದುಕೊಂಡು ಸಂತ್ರಸ್ತರಾದ ಶಿವಮೊಗ್ಗ ನಗರದ ಸಾವಿರಕ್ಕೂ ಹೆಚ್ಚು ನಾಗರಿಕರು ನಾಲ್ಕು ತಿಂಗಳುಗಳಿಂದ ಬಯಲಲ್ಲೇ ನಿಕೃಷ್ಟ ಜೀವನಸಾಗಿಸುತ್ತಿದ್ದಾರೆ.

ಆರಂಭದಲ್ಲಿ ಕೈಕೊಟ್ಟಿದ್ದ ಮುಂಗಾರು ಆಗಸ್ಟ್‌ನಲ್ಲಿ ಆರ್ಭಟಿ ಸಿತ್ತು. ಉಕ್ಕಿ ಹರಿದ ತುಂಗಾ ತಡೆ ಗೋಡೆಯನ್ನೂ ಲೆಕ್ಕಿಸದೆ ನಗರದ ಹಲವು ಬಡಾವಣೆಗಳಿಗೆ ನುಗ್ಗಿತು. ಹಲವು ದಶಕಗಳ ನಂತರ ಸಂಭವಿಸಿದ ಇಂತಹ ಜಲಪ್ರಳಯಕ್ಕೆ ಸಾವಿರಾರು ಮನೆಗಳು ಧರೆಗುರುಳಿದ್ದವು. ಮಳೆಯ ಮಧ್ಯೆಯೇ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದ ಜಿಲ್ಲೆಯವರೇ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಭಾಗಶಃ ಮನೆ ಬಿದ್ದವರಿಗೆ ₹ 1 ಲಕ್ಷ, ಸಂಪೂರ್ಣ ಮನೆ ಕಳೆದುಕೊಂಡವರಿಗೆ ₹ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಆದರೆ, ಇದುವರೆಗೂ ಪರಿಹಾರ ಸಿಕ್ಕಿರುವುದು ಕೆಲವರಿಗೆ. ಬಹುತೇಕ ಬಡವರಿಗೆ, ನಿರ್ಗತಿಕರಿಗೆ ಬಿಡಿಗಾಸೂ ಸಿಕ್ಕಿಲ್ಲ.

ಶೌಚಾಲಯಕ್ಕೂ ಪರದಾಟ: ಮನೆಬಿದ್ದ ಜಾಗದಲ್ಲೇ ಅವಶೇಷವನ್ನು ಬದಿಗೆ ಸರಿಸಿ, ಅಲ್ಲೇ ಸಾಕಷ್ಟು ಜನರು ಬದುಕು ಮುಂದುವರಿಸಿದ್ದಾರೆ. ಚಳಿ, ಗಾಳಿಯ ಮಧ್ಯೆಯೇ ನಿತ್ಯದ ಬದುಕು ನಡೆಸುತ್ತಿದ್ದಾರೆ. ಮಹಿಳೆಯರು, ವೃದ್ಧರು ಶೌಚಾಲಯಕ್ಕೆ ರಾತ್ರಿ ವೇಳೆಬಹುದೂರ ದವರೆಗೆ ತೆರಳಬೇಕಿದೆ. ಸಮುದಾಯ ಶೌಚಾಲಯಗಳಿರುವ ಬಡಾವಣೆಗಳಲ್ಲಿ ಇಂತಹ ಸ್ಥಿತಿ ಸ್ವಲ್ಪ ಸುಧಾರಿಸಿದೆ.ಎಷ್ಟೋ ಮನೆಗಳಲ್ಲಿ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಬಹುತೇಕ ಸಂತ್ರಸ್ತರು ಬಯಲಲ್ಲೇ ಅಳಿದುಳಿದ ಸಾಮಗ್ರಿ ಗುಡ್ಡೆ ಹಾಕಿಕೊಂಡಿರುವ ಪರಿಣಾಮ ಕೆಲಸಕ್ಕೂ ಹೋಗದೇ ಕಾಯುತ್ತಾ ಕೂರುವುದು ಅನಿವಾರ್ಯವಾಗಿದೆ.

ADVERTISEMENT

‘ನಮ್ಮದು ಕೂಡು ಕುಟುಂಬ. 20X30 ಅಳತೆಯ ಪುಟ್ಟ ಮನೆಯಲ್ಲಿ ಮೂರು ಸಂಸಾರಗಳಿದ್ದವು. 15 ಜನ ವಾಸಿಸುತ್ತಿದ್ದೆವು. ಪ್ರವಾಹದ ನೀರು ನುಗ್ಗಿ ಮನೆ ಕುಸಿದು ಬಿತ್ತು. ಇಂದಿಗೂ ಪರಿಹಾರ ನೀಡಿಲ್ಲ. ಪರಿ ಹಾರಕ್ಕಾಗಿಅಲೆದು ಸಾಕಾಗಿದೆ. ಮೂರು ಕುಟುಂಬಗಳು ಬೀದಿಗೆ ಬಿದ್ದರೂ ಯಾರೂ ಸಹಾಯಕ್ಕೆ ಬಂದಿಲ್ಲ’ ಎಂದು ಅಳಲು ತೋಡಿಕೊಂಡರು ಬಾಪೂಜಿ ನಗರದ ಮಹಮದ್‌ ಇಸ್ಮಾಯಿಲ್.

ಪರಿಹಾರದಲ್ಲೂ ತಾರತಮ್ಯ: ಪೂರ್ಣ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನೀಡುವ ಪರಿಹಾರದಲ್ಲೂ ತಾರತಮ್ಯ ಮಾಡಲಾಗಿದೆ. ಬಾಪೂಜಿ ನಗರದಲ್ಲೇ ಕೆಲವರಿಗೆ ಪರಿಹಾರ ನೀಡಿ ದರೆ, ಕೆಲವರಿಗೆ ನೀಡಿಲ್ಲ. ಪಾಲಿಕೆ ಸದಸ್ಯರ ಅನುಯಾಯಿಗಳಿಗೆ, ಅವರ ಮತ ದಾರರಿಗೆ ಆದ್ಯತೆ ನೀಡಲಾಗಿದೆ. ಉಳಿ ದವರನ್ನು ಕಡೆಗಣಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿವೆ.

‘ನನಗೆ 6 ಹೆಣ್ಣುಮಕ್ಕಳು. ವೃದ್ಧಾಪ್ಯ ವೇತನದಲ್ಲೇ ಜೀವನ ಸಾಗಿಸುತ್ತಿದ್ದೇನೆ. ಮನೆ ಪೂರ್ತಿ ಬಿದ್ದು ಹೋಗಿದೆ. ಪಕ್ಕದ ಮನೆಯವರಿಗೆ ಪರಿಹಾರ ನೀಡಿದ್ದಾರೆ. ನಮಗೆ ನೀಡಿಲ್ಲ. ಇಂತಹ ಭೇದ ಏಕೆ’ ಎಂದು ಪ್ರಶ್ನಿಸುತ್ತಾರೆ ಶಬ್ಬೀರ್ ಹುಸೇನ್.

ಗೋಲ್‌ಮಾಲ್: ನಗರ ಪಾಲಿಕೆ, ಕಂದಾಯ ಇಲಾಖೆ ನಡೆಸಿದ ಸರ್ವೆಯಲ್ಲಿ ಇಲ್ಲದವರ ಹೆಸರುಗಳೂ ಸಂತ್ರಸ್ತರ ಪಟ್ಟಿಯಲ್ಲಿ ಸೇರಿವೆ.ರಾಜಕೀಯ ಪಕ್ಷಗಳ ಮುಖಂಡರ ಹಿಂಬಾಲಕರ ಖಾತೆಗಳಿಗೂತಕ್ಷಣದ ಪರಿಹಾರ ಜಮಾ ಮಾಡಲಾಗಿದೆ.

***

ಮನೆಗಳ ದಾಖಲೆ ಹೊಂದಿರುವ ಕುಟುಂಬಗಳಿಗೆ ಮೊದಲ ಕಂತು ₹ 1 ಲಕ್ಷ ನೀಡಲಾಗಿದೆ. ಅನಧಿಕೃತವಾಗಿ ಮನೆ ಕಟ್ಟಿಕೊಂಡಿದ್ದ ಕುಟುಂಬಗಳಿಗೆ ಅಫಿಡವಿಟ್‌ ಸಲ್ಲಿಸಲು ಸೂಚಿಸಲಾಗಿತ್ತು. ಹಣ ನೀಡಲಾಗಿದೆ ಎಂಬ ಕಾರಣಕ್ಕೆ ಜಾಗದ ಹಕ್ಕುದಾರಿಕೆ ಪ್ರತಿಪಾದಿಸಬಾರದು ಎಂಬ ಷರತ್ತಿನ ಮೇಲೆ ಹಣ ಬಿಡುಗಡೆಗೆ ಸರ್ಕಾರ ಸಮ್ಮತಿಸಿದೆ. ವಾರದ ಒಳಗೆ ಅವರಿಗೂ ಪರಿಹಾರ ವಿತರಿಸಲಾಗುವುದು.
-ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ, ಶಿವಮೊಗ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.