
ಡಿ.ಕೆ. ಶಿವಕುಮಾರ್
ಬೆಂಗಳೂರು: ಆದಾಯ ಮೀರಿದ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ, ‘ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ಸಚಿವ ಸಂಪುಟದ ನಿರ್ಧಾರವನ್ನು ನ್ಯಾಯಾಲಯಕ್ಕೆ ತಿಳಿಸುತ್ತೇವೆ. ಮುಂದೆ ಸಿಬಿಐ, ನ್ಯಾಯಾಲಯ ಏನು ಮಾಡುತ್ತದೆ ಎಂಬುದು ಕಾದು ನೋಡಬೇಕಿದೆ. ವಿರೋಧ ಪಕ್ಷಗಳ ನಾಯಕರ (ಬಿಜೆಪಿ -ಜೆಡಿಎಸ್) ವ್ಯಾಖ್ಯಾನ ಅವರಿಗೆ ಬಿಟ್ಟಿದ್ದು’ ಎಂದು ತಿಳಿಸಿದ್ದಾರೆ.
ಡಿಕೆಶಿ ಹೇಳಿದ್ದೇನು?
‘ನನ್ನ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿರುವ ಕುರಿತು ಪತ್ರಿಕೆಗಳಲ್ಲಿ ನೋಡಿದ್ದೇನೆ. ಎರಡು ದಿನಗಳ ಚುನಾವಣಾ ಪ್ರಚಾರಕ್ಕಾಗಿ ನಾನು ತೆಲಂಗಾಣಕ್ಕೆ ಹೋಗಿದ್ದೆ. ಹಾಗಾಗಿ ನಿನ್ನೆ (ಗುರುವಾರ) ಸಚಿವ ಸಂಪುಟ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ’ ಎಂದು ಹೇಳಿದ್ದಾರೆ.
ಉಪ ಮುಖ್ಯಮಂತ್ರಿಯೂ ಆಗಿರುವ ಶಿವಕುಮಾರ್ ಅನುಪಸ್ಥಿತಿಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಲು ತೀರ್ಮಾನ ಕೈಗೊಂಡಿತ್ತು. ಈ ಪ್ರಕರಣದ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಸಂಪುಟ ಸಭೆಯಲ್ಲಿ ಉಪಸ್ಥಿತರಿದ್ದು ತೀರ್ಮಾನದಲ್ಲಿ ಭಾಗಿಯಾದರೆ, ಹಿತಾಸಕ್ತಿ ಸಂಘರ್ಷದ ಪ್ರಶ್ನೆಯನ್ನು ಸಿಬಿಐಯು ಕೋರ್ಟ್ ಮುಂದಿಡಬಹುದು ಎಂಬ ಕಾರಣಕ್ಕೆ ಅವರು ದೂರ ಉಳಿದಿದ್ದರು ಎಂದು ಹೇಳಲಾಗಿದೆ.
ಯಡಿಯೂರಪ್ಪ ನೇತೃತ್ವದ ಸರ್ಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿ ಶಿವಕುಮಾರ್ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ಇದೇ 29ರಂದು ಹೈಕೋರ್ಟ್‌ನಲ್ಲಿ ನಡೆಯಲಿದೆ. ಅಂದು ನಡೆಯುವ ವಿಚಾರಣೆ ವೇಳೆ ಸಚಿವ ಸಂಪುಟದ ತೀರ್ಮಾನವನ್ನು ಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.