ADVERTISEMENT

ಶಿರಾಡಿ ಘಾಟ್‌ನಲ್ಲಿ ಉರುಳಿ ಬಿದ್ದ ಅನಿಲ ಟ್ಯಾಂಕರ್‌: ಸಂಚಾರ ಸ್ಥಗಿತ

ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಶಿರಾಡಿಘಾಟ್ ಬಳಿ ಬುಧವಾರ ಬೆಳಿಗ್ಗೆ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿದೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 8:57 IST
Last Updated 13 ಮಾರ್ಚ್ 2024, 8:57 IST
   

ಹಾಸನ: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಶಿರಾಡಿಘಾಟ್ ಬಳಿ ಬುಧವಾರ ಬೆಳಿಗ್ಗೆ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿದ್ದು, ಎಲ್‌ಪಿಜಿ ಸೋರಿಕೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿ ಬಂದ್ ಮಾಡಲಾಗಿದೆ.

ಟ್ಯಾಂಕ‌ರ್‌ನಿಂದ ಆಗುತ್ತಿರುವ ಅನಿಲ ಸೋರಿಕೆಯಿಂದ ಅಗ್ನಿ ಅನಾಹುತ ಸಂಭವಿಸುವುದನ್ನು ತಪ‍್ಪಿಸಲು ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಸಕಲೇಶಪುರ ತಾಲ್ಲೂಕಿನ, ಶಿರಾಡಿಘಾಟ್ ರಸ್ತೆಯ ಡಬಲ್ ಟರ್ನ್ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ಉರುಳಿ ಬಿದ್ದಿದೆ. ಪೊಲೀಸರು ಸಂಚಾರ ಬಂದ್ ಮಾಡಿದ್ದು, ಚಾಲಕರು ಮಾರ್ಗಮಧ್ಯೆ ವಾಹನಗಳನ್ನು ನಿಲ್ಲಿಸಿಕೊಂಡಿದ್ದಾರೆ.

ADVERTISEMENT

ಬೆಂಗಳೂರು-ಹಾಸನ-ಮಂಗಳೂರು, ಮಂಗಳೂರು-ಹಾಸನ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು‌ ಪೊಲೀಸರು ಬದಲಿ ಮಾರ್ಗದಲ್ಲಿ ಕಳುಹಿಸುತ್ತಿದ್ದಾರೆ.

ರಾತ್ರಿ 12 ರವರೆಗೆ ಸಂಚಾರ ಸ್ಥಗಿತ: ರಾಷ್ಟ್ರೀಯ ಹೆದ್ದಾರಿ –75 ರಲ್ಲಿ ಬುಧವಾರ ಮಧ್ಯರಾತ್ರಿ 12 ಗಂಟೆಯವರೆಗೆ ವಾಹನಗಳ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸಕಲೇಶಪುರದಿಂದ ಮಂಗಳೂರಿಗೆ ತೆರಳುವ ವಾಹನಗಳು ಸಕಲೇಶಪುರ–ಹಾನಬಾಳು–ಮೂಡಿಗೆರೆ ಮಾರ್ಗವಾಗಿ ಮಂಗಳೂರಿಗೆ ಸಂಚರಿಸಬೇಕು. ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ವಾಹನಗಳು ಹಾಸನ–ಬೂವನಹಳ್ಳಿ ಕ್ರಾಸ್‌–ಬೇಲೂರು ಮೂಲಕ ಸಂಚರಿಸಬೇಕು. ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ವಾಹನಗಳು ಸುಳ್ಯ–ಸಂಪಾಜೆ ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.