ಪ್ರಿಯಾಂಕ್ ಖರ್ಗೆ
ಬೆಂಗಳೂರು: ‘ಗ್ರಾಮೀಣಾಭಿವೃದ್ಧಿ ಇಲಾಖೆಯ ಕೆಲವು ಸಿಬ್ಬಂದಿ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ವರದಿ ಪಡೆದು, ಅಂಥವರನ್ನು ಅಮಾನತು ಮಾಡಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸರ್ಕಾರಿ ನೌಕರರು ಕೆಲಸ ಮಾಡುತ್ತಾರೆ ಅಂದುಕೊಂಡಿದ್ದರೆ, ಅವರು ನಮಗಿಂತಲೂ ಹೆಚ್ಚು ರಾಜಕೀಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸರ್ಕಾರಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಷಣ ಮಾಡುವುದಲ್ಲದೆ, ಬೇರೆ ರೀತಿಯಲ್ಲೂ ಪಾಲ್ಗೊಂಡಿದ್ದಾರೆ. ಇದರಲ್ಲಿ ನಮ್ಮ ಇಲಾಖೆಯ ಕೆಲವರಿದ್ದಾರೆ’ ಎಂದರು.
‘2013ರಲ್ಲಿ ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಸಬಾರದು ಎಂದು ಸುತ್ತೋಲೆ ಹೊರಡಿಸಲಾಗಿತ್ತು’ ಎಂದರು. ಆ ಆದೇಶದ ಪ್ರತಿಯನ್ನು ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಿಯಾಂಕ್, ‘ಈ ದೇಶದ ಸಂವಿಧಾನ, ಕಾನೂನು, ನೀತಿ ನಿಯಮಗಳಿಗೆ ಆರ್‌ಎಸ್‌ಎಸ್ ಸಂಘಟನೆ ಅತೀತವಾಗಿದೆ ಎಂದು ಬಿಜೆಪಿ ಭಾವಿಸಿದೆಯೇ? ಈ ಆದೇಶ ಜಾರಿಯಲ್ಲಿದ್ದರೂ ಆರ್‌ಎಸ್‌ಎಸ್ ಸಂಘಟನೆಯು ಯಾವುದೇ ಅಂಜಿಕೆ ಇಲ್ಲದೆ, ಶಾಲೆಗಳು ಹೆಡಗೇವಾರ್ ಅವರ ವಂಶಸ್ಥರ ಆಸ್ತಿ ಎಂಬಂಥ ಧೋರಣೆಯಲ್ಲಿ ತನ್ನ ಚಟುವಟಿಕೆ ನಡೆಸುತ್ತಿದೆ. ಕೂಗುಮಾರಿಗಳಂತೆ ಕೂಗುತ್ತಿರುವ ಬಿಜೆಪಿಯವರು ತಮ್ಮ ಸರ್ಕಾರದ ಆದೇಶವನ್ನು ಒಮ್ಮೆ ಅವಲೋಕಿಸಿ, ನಂತರ ತಾವೇನು ಮಾತಾಡಬೇಕು ಎಂದು ನಿರ್ಧರಿಸಲಿ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.