ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಇಂಧನ ಇಲಾಖೆಯಡಿಯಲ್ಲಿರುವ ಕೆಪಿಟಿಸಿಎಲ್ ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ (ಎಸ್ಕಾಂ) 15–20 ವರ್ಷಗಳಿಂದ ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 13 ಸಾವಿರಕ್ಕೂ ಹೆಚ್ಚು ನೌಕರರನ್ನು ಕಾಯಂ ಅಥವಾ ಒಳ ಗುತ್ತಿಗೆಯಡಿ ನೇಮಕಾತಿಗೆ ಸಿದ್ಧತೆ ನಡೆದಿದೆ.
‘ಹೊರಗುತ್ತಿಗೆ ಉದ್ಯೋಗಿಗಳನ್ನು ಶೋಷಣೆಗೆ ಒಳಪಡಿಸಬಾರದು. ಆರ್ಥಿಕ ದುಃಸ್ಥಿತಿ ಅಥವಾ ಹುದ್ದೆ ಖಾಲಿ ಇಲ್ಲ ಎಂಬ ಕಾರಣ ನೀಡಿ ದೀರ್ಘ ಅವಧಿಗೆ ಸಕ್ರಮಾತಿ ನಿರಾಕರಿಸಬಾರದು’ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಅದರ ಅನ್ವಯ, ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಲು ಅಥವಾ ಒಳ ಗುತ್ತಿಗೆಗೆ ಒಳಪಡಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಇಂಧನ, ಆರೋಗ್ಯ, ಗಣಿ ಮತ್ತು ಭೂ ವಿಜ್ಞಾನ ಸೇರಿದಂತೆ ಕೆಲವು ಇಲಾಖೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹೊರ ಗುತ್ತಿಗೆ ನೌಕರರಿದ್ದಾರೆ. ಮೊದಲ ಹಂತದಲ್ಲಿ ಕೆಪಿಟಿಸಿಎಲ್ ಮತ್ತು ವಿವಿಧ ಎಸ್ಕಾಂಗಳಲ್ಲಿರುವ ಸ್ಟೇಷನ್ ಆಪರೇಟರ್, ಸ್ಟೇಷನ್ ಸಹಾಯಕ, ಗ್ಯಾಂಗ್ ಮನ್, ಮೀಟರ್ ರೀಡರ್, ಚಾಲಕರಿಗೆ ಸೇವಾ ಭದ್ರತೆ ಒದಗಿಸುವ ಉದ್ದೇಶದಿಂದ ‘ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (ಹೊರಗುತ್ತಿಗೆ ಸಿಬ್ಬಂದಿಯ ಕ್ರಮಬದ್ಧಗೊಳಿಸುವಿಕೆ) ಆದೇಶ– 2025’ರ ಕರಡು ಸಿದ್ಧಗೊಂಡಿದೆ. ರಾಜ್ಯ ಸರ್ಕಾರ ಅನುಮೋದನೆ ನೀಡಿದ ಬಳಿಕ ಕೆಪಿಟಿಸಿಎಲ್ ನಿರ್ದೇಶಕರ ಮಂಡಳಿಯು ಈ ಆದೇಶವನ್ನು ಹೊರಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಕರಡು ಅಧಿಸೂಚನೆಯಲ್ಲಿ ಏನಿದೆ?: ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಅಪಾಯಕಾರಿ ಕೆಲಸಗಳನ್ನು ಮಾಡುತ್ತಿರುವ ಸ್ಟೇಷನ್ ಆಪರೇಟರ್, ಸ್ಟೇಷನ್ ಸಹಾಯಕ, ಗ್ಯಾಂಗ್ ಮನ್, ಮೀಟರ್ ರೀಡರ್ ಮತ್ತು ಚಾಲಕರು ಮತ್ತು ಕನಿಷ್ಠ ಐದು ವರ್ಷ ನಿರಂತರವಾಗಿ ಕೆಲಸದಲ್ಲಿದ್ದು ಏಕಾಏಕಿ ವಜಾಗೊಂಡವರನ್ನು ಕಾಯಂಗೊಳಿಸುವ ಪ್ರಸ್ತಾವ ಈ ಕರಡು ಅಧಿಸೂಚನೆಯಲ್ಲಿದೆ.
ಇಂಧನ ಇಲಾಖೆ, ಕಾನೂನು ಇಲಾಖೆ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಯನ್ನು ಒಳಗೊಂಡ ಪರಿಶೀಲನಾ ಸಮಿತಿಯನ್ನು ರಚಿಸುವ ಪ್ರಸ್ತಾವವಿದ್ದು, ಈ ಸಮಿತಿಯು ವಿವಿಧ ವರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿಯ ಜನ್ಮ ದಿನದ ದಾಖಲೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹುದ್ದೆಯ ವರ್ಗ, ಆ ಹುದ್ದೆಗೆ ನಿರ್ದಿಷ್ಟಪಡಿಸಿದ ಶೈಕ್ಷಣಿಕ ಅರ್ಹತೆಗಳ ಪ್ರಮಾಣಪತ್ರಗಳು, ಜಾತಿ ಪ್ರಮಾಣಪತ್ರ, ಉದ್ಯೋಗ ನೋಂದಣಿ ಕಾರ್ಡ್ (ಯಾವುದಾದರೂ ಇದ್ದರೆ), ಉದ್ಯೋಗಿ ಭವಿಷ್ಯ ನಿಧಿ ಖಾತೆ ಸಂಖ್ಯೆ, ದೈಹಿಕ ಸದೃಢತೆಯ ಪ್ರಮಾಣಪತ್ರ ಸೇರಿದಂತೆ ಅಗತ್ಯವಿರುವ ವಿವರಗಳನ್ನು ಪಡೆದು ಪರಿಶೀಲಿಸಲಿದೆ.
ನಂತರ ಸಮಿತಿಯು, ವಿವಿಧ ವರ್ಗಗಳ ಹುದ್ದೆಗಳ ಅಡಿಯಲ್ಲಿ ತಮ್ಮ ವಿವರಗಳನ್ನು ಸಲ್ಲಿಸಿದ ಹೊರಗುತ್ತಿಗೆ ಸಿಬ್ಬಂದಿಯ ಹೆಸರುಗಳನ್ನು ಹಾಲಿ ಇರುವ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಪಟ್ಟಿ ಮಾಡಿ ನೇಮಕಾತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಸಮಿತಿಯು ಸಲ್ಲಿಸಿದ ಪಟ್ಟಿಯಲ್ಲಿರುವ ವಿವರಗಳು ತೃಪ್ತಿಕರವೆನಿಸಿದರೆ ನೇಮಕಾತಿ ಪ್ರಾಧಿಕಾರವು ನೌಕರರನ್ನು ಕ್ರಮಬದ್ಧಗೊಳಿಸುವ ಆದೇಶ ಹೊರಡಿಸಬಹುದು ಎಂದು ಕರಡು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ಹೊರಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಲು ಕೆಲವು ಷರತ್ತುಗಳನ್ನು ಕೂಡಾ ಕರಡು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿದೆ. ಕಾಯಂಗೊಳಿಸಲು ಪರಿಗಣಿಸುವ ಹೊರಗುತ್ತಿಗೆ ಸಿಬ್ಬಂದಿಯ ವಯಸ್ಸು 58 ವರ್ಷ ಮೀರಬಾರದು. ಅಂತಹ ಸಿಬ್ಬಂದಿ ನೇಮಕಾತಿ ಪ್ರಾಧಿಕಾರದ ಅಡಿಯಲ್ಲಿ ನಿರಂತರ ಅವಧಿಯಿಂದ ಉದ್ಯೋಗದಲ್ಲಿರಬೇಕು. ಹುದ್ದೆಗಳ ವರ್ಗಗಳು, ಶೈಕ್ಷಣಿಕ ಅರ್ಹತೆ ಮತ್ತು ವೇತನ ಶ್ರೇಣಿಯನ್ನು ನಿಗಮ ಅಥವಾ ಸಂಬಂಧಿತ ಕಂಪನಿಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದಂತೆ ಸಂದರ್ಭಾನುಸಾರ ಕಾಲಕಾಲಕ್ಕೆ ಪರಿಷ್ಕರಿಸಲಾಗುವುದು. ಅಂತಹ ಸಿಬ್ಬಂದಿಯನ್ನು ಅವರು ಈಗಿರುವ ಸ್ಥಳದಲ್ಲಿಯೇ ‘ಇರುವಂತೆಯೇ’ ಕಾಯಂಗೊಳಿಸಲಾಗುವುದು ಎಂದೂ ಕರಡಿನಲ್ಲಿದೆ
ಹೀಗೆ ಕಾಯಂಗೊಂಡ ಹೊರಗುತ್ತಿಗೆ ಸಿಬ್ಬಂದಿಗೆ ಕಾಲಕ್ಕೆ ಕಾಲಕ್ಕೆ ಹೊರಡಿಸುವ ಆದೇಶಗಳ ಪ್ರಕಾರ ರಜೆ ಮತ್ತು ಇತರ ಸೇವಾ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದರೆ, ಕಾಯಂಗೊಳಿಸುವ ಮೊದಲು ಹೊರಗುತ್ತಿಗೆ ಆಧಾರದಲ್ಲಿ ಮಾಡಿದ ಕೆಲಸಕ್ಕೆ ಯಾವುದೇ ಪ್ರಯೋಜನಗಳನ್ನು ಪಡೆಯಲು ಅವಕಾಶ ಇಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.
‘ಸೇವಾ ಭದ್ರತೆಗೆ ಕ್ರಮ’
ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿ ಹಲವು ವರ್ಷಗಳಿಂದ ತಳಹಂತದಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸುವ ವಿಷಯದ ಕುರಿತಂತೆ ಅಧ್ಯಯನ ಮಾಡಲು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ 2022ರ ಡಿ. 3ರಂದು ಸಮಿತಿ ರಚಿಸಲಾಗಿತ್ತು. ಈ ಸಮಿತಿಯು 2023ರ ಆಗಸ್ಟ್ 24ರಂದು ಮೊದಲ ಸಭೆ ನಡೆಸಿ, ವಿಷಯ ಕುರಿತಂತೆ ಕೆಪಿಟಿಸಿಲ್ ಮತ್ತು ಎಸ್ಕಾಂಗಳಿಗೆ ಹಲವು ಸೂಚನೆಗಳನ್ನು ನೀಡಿತ್ತು. ಆದರೆ, ಸೇವಾ ಭದ್ರತೆ ಒದಗಿಸುವ ವಿಚಾರವು ನನೆಗುದಿಗೆ ಬಿದ್ದಿತ್ತು. ಅಪಾಯಕಾರಿ ಕೆಲಸಗಳಿಗೆ ಹೊರಗುತ್ತಿಗೆಯಡಿ ನೇಮಕಗೊಳ್ಳುವ ಕೆಲಸಗಾರರಿಗೆ ಅಪಘಾತ ಸಂಭವಿಸಿದರೆ ವಿಮಾ ಸೌಲಭ್ಯವನ್ನು ಒದಗಿಸುವ ಬಗ್ಗೆ ಹೊರ ಗುತ್ತಿಗೆ ಸೇವೆ ಒದಗಿಸುವ ಏಜೆನ್ಸಿದಾರರಿಗೆ ಷರತ್ತು ವಿಧಿಸಲಾಗಿದೆ. ಆದರೆ, ಈ ಏಜೆನ್ಸಿಗಳು ಇದನ್ನು ಪಾಲಿಸುತ್ತಿಲ್ಲ ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.