
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬುಧವಾರ ಹಮ್ಮಿಕೊಂಡಿದ್ದ ‘ನಶಾ ಮುಕ್ತ ಕರ್ನಾಟಕ, ಅಂಗಾಂಗ ದಾನ ಅಭಿಯಾನ’ ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಗೃಹ ಸಚಿವ ಜಿ.ಪರಮೇಶ್ವರ, ಸಭಾಪತಿ ಬಸವರಾಜ ಹೊರಟ್ಟಿ ಸಮಾಲೋಚನೆಯಲ್ಲಿ ತೊಡಗಿದ್ದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಮಾದಕ ವಸ್ತು ಪ್ರಕರಣಗಳ ತಡೆಗೆ ಅಗತ್ಯ ಕ್ರಮ ಕೈಗೊಳ್ಳದ ಕಾಲೇಜುಗಳ ಮಾನ್ಯತೆ ರದ್ದತೆ ರದ್ದುಪಡಿಸುವ ಕುರಿತು ಚಿಂತನೆ ನಡೆಸಿದ್ದು, ಉನ್ನತ ಶಿಕ್ಷಣ ಸಚಿವರ ಜತೆಗೂ ಚರ್ಚಿಸಲಾಗಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ದಿಶಾಭೋದ್ ಫೌಂಡೇಶನ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ ಬುಧವಾರ ಆಯೋಜಿಸಿದ್ದ ನಶಾ ಮುಕ್ತ ಭಾರತ, ನಶಾ ಮುಕ್ತ ಕರ್ನಾಟಕ, ನಶಾ ಮುಕ್ತ ಕ್ಯಾಂಪಸ್, ಅಂಗಾಂಗ ದಾನ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯವನ್ನು ಸಂಪೂರ್ಣ ಮಾದಕದ್ರವ್ಯ ಮುಕ್ತಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಆಶಯ ಈಡೇರಲು ಮೊದಲು ಕಾಲೇಜು ಕ್ಯಾಂಪಸ್‌ಗಳು ನಶೆ ಮುಕ್ತವಾಗಬೇಕು. ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಕೈಗೊಂಡಿರುವ ಅಭಿಯಾನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಮಾದಕ ದ್ರವ್ಯದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದ, ಪ್ರಕರಣಗಳು ವರದಿಯಾಗುವ ಕಾಲೇಜುಗಳ ಮಾನ್ಯತೆ ರದ್ದು ಮಾಡಲಾಗುವುದು. ಅದಕ್ಕಾಗಿ ಪ್ರತಿ ಕಾಲೇಜಿನಲ್ಲೂ ಮಾದಕ ದ್ರವ್ಯ ವಿರೋಧಿ ಸಮಿತಿಗಳನ್ನು ರಚಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಮಾದಕ ದ್ರವ್ಯ ಜಾಲವು ಕರ್ನಾಟಕವನ್ನು ಮತ್ತೊಂದು ಉಡ್ತಾ ಪಂಜಾಬ್ ಮಾಡಲು ಹೊರಟಿದೆ. ಜನರು ಅದಕ್ಕೆ ಆಸ್ಪದ ನೀಡಬಾರದು. ಸರ್ಕಾರವೂ ನೀಡುವುದಿಲ್ಲ. ಮಾದಕದ್ರವ್ಯ ಮುಕ್ತ ಅಭಿಯಾನಕ್ಕೆ ಯುವಜನರು, ಪೋಷಕರು, ಅಧ್ಯಾಪಕರು, ಶಿಕ್ಷಣ ಸಂಸ್ಥೆಗಳ ಸಹಕಾರ ಅಗತ್ಯ. ಬೇರೆ ದೇಶ, ರಾಜ್ಯಗಳಿಂದ ಬರುವ ಮಾದಕ ಪದಾರ್ಥಗಳನ್ನು ತಡೆಯಲು ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಕೋಟ್ಯಂತರ ಮೌಲ್ಯದ ಮಾದಕ ದ್ರವ್ಯ ಪದಾರ್ಥಗಳನ್ನು ವಶಕ್ಕೆ ಪಡೆದು ಸುಟ್ಟು ಹಾಕಲಾಗಿದೆ ಎಂದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಶಾಸಕ ರಿಜ್ವಾನ್ ಅರ್ಷದ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಸುಜಾತಾ ರಾಥೋಡ್ ಉಪಸ್ಥಿತರಿದ್ದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಂಗಾಂಗ ಕಸಿ ಕೇಂದ್ರ ಅಂಗಾಂಗ ಶೇಖರಣಾ ಘಟಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅಂಗಾಂಗ ದಾನ ಪ್ರತಿಜ್ಞೆಯಲ್ಲಿ ಕರ್ನಾಟಕ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರು ಅಂಗಾಂಗ ದಾನದ ಬಗ್ಗೆ ತೀರ್ಮಾನ ಕೈಗೊಳ್ಳುವುದು ಬಹಳ ಸೂಕ್ಷ್ಮ ಸಂಗತಿ. ಅಂಗಾಂಗ ದಾನ ಮಾಡುವ ಕುಟುಂಬಗಳನ್ನು ಸರ್ಕಾರ ಸನ್ಮಾನಿಸಲಿದೆ ಎಂದರು. ಗೆಳೆಯರ ಒತ್ತಾಯ ಕುತೂಹಲಕ್ಕೆ ಆರಂಭವಾಗುವ ಹವ್ಯಾಸವು ನಂತರ ವ್ಯಸನವಾಗಿ ಬದಲಾಗುತ್ತದೆ. ಇದರಿಂದ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳು ಕಾಡುತ್ತವೆ. ಇಂತಹ ಜಾಲಗಳಿಂದ ವಿದ್ಯಾರ್ಥಿಗಳನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ ಎಂದು ಹೇಳಿದರು.
ಪ್ರತಿ ಮನೆಯೂ ಮೊದಲು ಧೂಮಪಾನ ಮದ್ಯಪಾನ ಮುಕ್ತವಾಗಬೇಕು. ಅದಕ್ಕೆ ಎಲ್ಲ ಕುಟುಂಬಗಳೂ ಪಣತೊಡಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಪೋಷಕರ ದುಶ್ಚಟಗಳನ್ನು ನೋಡಿ ಮಕ್ಕಳು ಕಲಿಯುತ್ತಾರೆ. ಮನೆಯಿಂದಲೇ ವ್ಯಸನಗಳು ಆರಂಭವಾಗುತ್ತವೆ. ನಂತರ ಸ್ನೇಹಿತರು ಸಹವಾಸಗಳು ಬೇರೆಯದೇ ದುಶ್ಚಟಗಳ ಮಾರ್ಗ ತೋರುತ್ತವೆ. ಹಾಗಾಗಿ ಮನೆಯ ಹಿರಿಯರ ನಡೆ ಮಾದರಿಯಾಗಿರಬೇಕು ಎಂದರು. ವಿದ್ಯಾರ್ಥಿಗಳ ಮೇಲೆ ನಿಗಾವಹಿಸಲು ಕ್ಯಾಂಪಸ್‌ಗಳನ್ನು ನಶಾ ಮುಕ್ತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲ ಕಾಲೇಜುಗಳಿಗೂ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.