ADVERTISEMENT

ಜ.31ರಿಂದ ಹಂಪಿ ಮೋಟಾರ್‌ ರೇಸ್‌ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 12:03 IST
Last Updated 28 ಜನವರಿ 2021, 12:03 IST
ರೇಸ್‌ ಸ್ಪರ್ಧೆಗೆ ಅಣಿಯಾಗಿರುವ ಜೀಪ್‌
ರೇಸ್‌ ಸ್ಪರ್ಧೆಗೆ ಅಣಿಯಾಗಿರುವ ಜೀಪ್‌   

ಹೊಸಪೇಟೆ: ಇಲ್ಲಿನ ‘ಮೋಟಾರ್‌ಸ್ಪೋರ್ಟ್ಸ್‌ ಅಕಾಡೆಮಿ ಆಫ್‌ ವಿಜಯನಗರ’ ಸಂಸ್ಥೆಯು ತಾಲ್ಲೂಕಿನ ನಾಲ್ಕು ಕಡೆಗಳಲ್ಲಿ ‘ಹಂಪಿ ಮೋಟಾರ್‌ ಸ್ಪೋರ್ಟ್ಸ್‌ ರೇಸ್‌’ ಸ್ಪರ್ಧೆ ಆಯೋಜಿಸಿದೆ.

‘ದಿ ಫೆಡರೇಶನ್ ಆಫ್‌ ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ ಆಫ್‌ ಇಂಡಿಯಾ’ (ಎಫ್‌ಎಂಎಸ್‌ಸಿಐ) ಸಹಭಾಗಿತ್ವದಲ್ಲಿ ಜ. 31, ಫೆ. 6 ಹಾಗೂ 7ರಂದು ತಾಲ್ಲೂಕಿನ ರಾಜಪುರ, ಜಂಬುನಾಥಹಳ್ಳಿ, ಧರ್ಮಸಾಗರ ಹಾಗೂ ಕಾರಿಗನೂರು ಬಳಿ ಸ್ಪರ್ಧೆ ಏರ್ಪಡಿಸಿದೆ’ ಎಂದು ಮೋಟಾರ್‌ ಸ್ಪೋರ್ಟ್ಸ್‌ ಅಕಾಡೆಮಿ ಆಫ್‌ ವಿಜಯನಗರ ಅಧ್ಯಕ್ಷ ಸಂತೋಷ್‌ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮಂಗಳೂರು, ಬೆಂಗಳೂರು, ಕೊಯಮತ್ತೂರಿನಲ್ಲಿ ಈಗಾಗಲೇ ಮೂರು ಹಂತದ ಸ್ಪರ್ಧೆಗಳು ನಡೆದಿವೆ. ನಾಲ್ಕನೇ ಹಂತದ ರಾಷ್ಟ್ರೀಯ ಸ್ಪರ್ಧೆ ಹಂಪಿಯಲ್ಲಿ ನಡೆಯುತ್ತಿರುವುದು ವಿಶೇಷ. 31ರಂದು ಬೆಳಿಗ್ಗೆ 8ಕ್ಕೆ ಜಂಬುನಾಥಹಳ್ಳಿಯಲ್ಲಿ ಬೈಕ್‌ ರೇಸ್‌ ಸ್ಪರ್ಧೆ ನಡೆಯಲಿದೆ. ಫೆ. 6ರಂದು ಆಟೊ ಕ್ರಾಸ್‌ ಕಾರ್‌ ರೇಸ್‌ ಸ್ಪರ್ಧೆ ಜರುಗಲಿದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ₹1 ಲಕ್ಷ ನಗದು ಬಹುಮಾನ, ‘ಡರ್ಟ್‌ ಕಿಂಗ್‌ ಆಫ್‌ ಹಂಪಿ’ ಪ್ರಶಸ್ತಿ ನೀಡಲಾಗುವುದು. ಫೆ. 7ರಂದು ನಾಲ್ಕು ಚಕ್ರಗಳ ವಾಹನಗಳ ರೇಸ್‌ ನಡೆಯಲಿದೆ. ಈ ಸ್ಪರ್ಧೆಗಳು ಕ್ರಮವಾಗಿ ರಾಜಪುರ, ಧರ್ಮಸಾಗರ ಹಾಗೂ ಕಾರಿಗನೂರಿನಲ್ಲಿ ನಡೆಯಲಿವೆ’ ಎಂದು ವಿವರಿಸಿದರು.

ADVERTISEMENT

‘ಆಟೊ ಕ್ರಾಸ್‌ನಲ್ಲಿ 75 ಜನ, ಬೈಕ್‌ ರೇಸ್‌ನಲ್ಲಿ 50, ನಾಲ್ಕು ಚಕ್ರದ ವಾಹನ ಹಾಗೂ ಜೀಪ್‌ ರೇಸ್‌ ಸ್ಪರ್ಧೆಗೆ ತಲಾ 30 ಜನ ಈಗಾಗಲೇ ಹೆಸರು ನೋಂದಣಿ ಮಾಡಿಸಿದ್ದಾರೆ. ಬೈಕ್‌ ರೇಸ್‌ ಸ್ಪರ್ಧೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಐಶ್ವರ್ಯ ಪಿಸೆ ಸೇರಿದಂತೆ ಇತರೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಹೆಸರು ಮಾಡಿದವರು ಪಾಲ್ಗೊಳ್ಳುತ್ತಿರುವುದು ಈ ಸಲದ ವಿಶೇಷ’ ಎಂದು ಮಾಹಿತಿ ನೀಡಿದರು.

ಅಕಾಡೆಮಿಯ ದರ್ಪನ್‌ ಗೌಡ ಮಾತನಾಡಿ, ‘ಮೊದಲ ಬಾರಿಗೆ ಹಂಪಿ ಸುತ್ತಮುತ್ತಲಿನ ಸ್ಥಳದಲ್ಲಿ 4X4 ಆಫ್‌ ರೋಡ್‌ ಸ್ಪರ್ಧೆ ಆಯೋಜಿಸಲಾಗಿದೆ. ದೇಶದಲ್ಲಿ ಈ ಹಿಂದೆ ಅರುಣಾಚಾಲ ಪ್ರದೇಶ, ಗೋವಾದಲ್ಲಷ್ಟೇ ಈ ಸ್ಪರ್ಧೆ ನಡೆದಿವೆ. 2019ರಲ್ಲಿ ಹಂಪಿಯಲ್ಲಿ ಮೊದಲ ಸಲ ಸ್ಪರ್ಧೆ ಏರ್ಪಡಿಸಿದ್ದಾಗ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈ ಸಲ ಅದಕ್ಕಿಂತಲೂ ಉತ್ತಮ ಪ್ರತಿಕ್ರಿಯೆ ಸಿಗುವ ಭರವಸೆ ಇದೆ. ಇಂತಹ ಸ್ಪರ್ಧೆಗಳಿಗೆ ಹಂಪಿ ಹೇಳಿ ಮಾಡಿಸಿದ ಸ್ಥಳವಾಗಿದೆ. ಸ್ಥಳೀಯ ಪ್ರವಾಸೋದ್ಯಮ ಬೆಳವಣಿಗೆಗೂ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಸಂಘಟಕರಾದ ಸಿ.ಕೆ. ಚಿನ್ನಪ್ಪ, ರೋಹಿತ್‌ ಗೌಡ, ಶ್ಯಾಮ, ಗಿರಿಜಾ ಶಂಕರ್‌, ಬೈಕ್‌ ರೇಸ್‌ ಸ್ಪರ್ಧಿ ಐಶ್ವರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.