ADVERTISEMENT

ಕರೆಂಟ್ ಕದ್ದರೂ HDK ಪ್ರಾಮಾಣಿಕತೆ ಮೆಚ್ಚಲೇಬೇಕು: ಪೋಸ್ಟರ್ ಅಂಟಿಸಿದ ಕಿಡಿಗೇಡಿಗಳು

ಪಿಟಿಐ
Published 15 ನವೆಂಬರ್ 2023, 10:00 IST
Last Updated 15 ನವೆಂಬರ್ 2023, 10:00 IST
<div class="paragraphs"><p>ಎಚ್.ಡಿ.ಕುಮಾರಸ್ವಾಮಿ ಅವರ ನಿವಾಸದ ಬಳಿ ಅಂಟಿಸಿರುವ ಪೋಸ್ಟರ್‌ಗಳು</p></div>

ಎಚ್.ಡಿ.ಕುಮಾರಸ್ವಾಮಿ ಅವರ ನಿವಾಸದ ಬಳಿ ಅಂಟಿಸಿರುವ ಪೋಸ್ಟರ್‌ಗಳು

   

ಬೆಂಗಳೂರು: ವಿದ್ಯುತ್ ಕಳ್ಳತನ ಆರೋಪಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು (ಬೆಸ್ಕಾಂ) ವಿದ್ಯುತ್ ಕಳ್ಳತನ ಪ್ರಕರಣ ದಾಖಲಿಸಿದೆ.

ಇದರ ಬೆನ್ನಲ್ಲೇ ಎಚ್‌ಡಿಕೆ ನಿವಾಸದ ಬಳಿ ‘ಕರೆಂಟ್ ಕದ್ದರೂ ಎಚ್‌ಡಿಕೆ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕು', ‘ವಿದ್ಯುತ್ ಕಳ್ಳ ಎಚ್.ಡಿ.ಕುಮಾರಸ್ವಾಮಿ’ ಎಂದು ಬರೆಯಲಾದ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಈ ಪೋಸ್ಟರ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ಘಟನೆ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪೋಸ್ಟರ್‌ಗಳನ್ನು ತೆರವುಗೊಳಿಸಿದ್ದಾರೆ.

ಏನಿದು ಪ್ರಕರಣ?: ಬೆಂಗಳೂರಿನ ಜೆ.ಪಿ ನಗರದಲ್ಲಿರುವ ನಿವಾಸಕ್ಕೆ ದೀಪಾವಳಿ ಅಲಂಕಾರಕ್ಕೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದು ಮಂಗಳವಾರ ಕಾಂಗ್ರೆಸ್‌ ಆರೋಪಿಸಿತ್ತು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿದ್ದ ರಾಜ್ಯ ಕಾಂಗ್ರೆಸ್‌ ಘಟಕ, ಒಬ್ಬ ಮಾಜಿ ಸಿಎಂ ಆಗಿ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ. ಇಷ್ಟೊಂದು ದಾರಿದ್ರ್ಯ ಬಂದಿದ್ದರೆ ಗೃಹ ಜ್ಯೋತಿಗೆ ಅರ್ಜಿ ಹಾಕಬಹುದಿತ್ತು ಎಂದು ಟೀಕಿಸಿತ್ತು.

ದಂಡ ಕಟ್ಟುವೆ, ಯಾವುದೇ ಕ್ರಮಕ್ಕೆ ಸಿದ್ಧ: ಕುಮಾರಸ್ವಾಮಿ

ವಿದ್ಯುತ್ ಕಳ್ಳತನ ಮಾಡಿದ್ದಾರೆ ಎನ್ನುವ ಕಾಂಗ್ರೆಸ್‌ ಆರೋಪಕ್ಕೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಇದು ಅಚಾತುರ್ಯದಿಂದ ಆದ ಘಟನೆ. ದಂಡ ಕಟ್ಟುತ್ತೇನೆ ಎಂದು ಹೇಳಿದ್ದಾರೆ.

‘ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ. ಆಗ ನಾನು ಬಿಡದಿಯ ತೋಟದಲ್ಲಿದ್ದೆ. ನಿನ್ನೆ ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ ಮನೆಯ ಮೀಟರ್ ಬೋರ್ಡ್‌ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾಡಿದ್ದೇನೆ. ಇದು ವಾಸ್ತವ ಸ್ಥಿತಿ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.