ದೇವದುರ್ಗ: ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಬಸ್ ಸೀಟಿಗಾಗಿ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಹೆಡ್ ಕಾನ್‌ಸ್ಟೆಬಲ್ ಶ್ರೀನಿವಾಸ್, ಕಲ್ಲು ಎಸೆದು ಬಸ್ಸಿನ ಮುಂಭಾಗದ ಗಾಜು ಒಡೆದಿದ್ದಾರೆ.
ಪಟ್ಟಣದಿಂದ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಸ್ ದೇವದುರ್ಗದಿಂದ ರಾಯಚೂರಿಗೆ ಹೊರಟ್ಟಿತ್ತು. ಕರ್ತವ್ಯ ಮುಗಿಸಿಕೊಂಡು ರಾಯಚೂರಿಗೆ ತೆರಳುತ್ತಿದ್ದ ಹೆಡ್ ಕಾನ್‌ಸ್ಟೆಬಲ್ ಶ್ರೀನಿವಾಸ ಬಸ್ಸಿನ ಸೀಟ್ ಒಂದರಲ್ಲಿ ಕುಳಿತಿದ್ದ ವೃದ್ಧೆಯೊಬ್ಬರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಚಾಲಕ ಕಂ ನಿರ್ವಾಹಕ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶಬಾಬು ಮತ್ತು ಬಸ್ಸಿನಲ್ಲಿದ್ದ ಪ್ರಯಾಣಿಕರು ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ, ಪ್ರಯಾಣಿಕರ ಮೇಲೆಯೇ ರೇಗಾಡಿದ ಹೆಡ್‌ಕಾನ್‌ಸ್ಟೆಬಲ್ ಬಸ್‌ಗೆ ಕಲ್ಲೆಸೆದಿದ್ದಾರೆ. ಈ ಘಟನೆಯನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಗಾಜು ಒಡೆದ ಬೆನ್ನಲ್ಲೇ ಚಾಲಕ ಸುರೇಶಬಾಬು ಬಸ್ ಅನ್ನು ನೇರವಾಗಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಹೆಡ್‌ಕಾನ್‌ಸ್ಟೆಬಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸುರೇಶಬಾಬು ಹಾಗೂ ಪ್ರಯಾಣಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಬಸ್ ಚಾಲಕ ಹಾಗೂ ಪ್ರಯಾಣಿಕರಿಗೆ ಹೆಡ್‌ಕಾನ್‌ಸ್ಟೆಬಲ್ ಶ್ರೀನಿವಾಸ ಜೀವ ಬೆದರಿಕೆ ಹಾಕಿದ್ದಾರೆ. ಹೆಡ್‌ಕಾನ್‌ಸ್ಟೆಬಲ್ ವಿರುದ್ಧ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದ ಪೊಲೀಸರು ಸಂಧಾನಕ್ಕೂ ಯತ್ನಿಸಿದ್ದಾರೆ’ ಎಂಬ ಆರೋಪ ಕೇಳಿಬಂದಿದೆ.
ಹೆಡ್‌ಕಾನ್‌ಸ್ಟೆಬಲ್ ಶ್ರೀನಿವಾಸ ಈ ಹಿಂದೆ ಕರ್ತವ್ಯ ಲೋಪದಿಂದ ನಾಲ್ಕು ಬಾರಿ ಅಮಾನತುಗೊಂಡಿದ್ದರು ಎಂದು ಮೂಲಗಳು ಹೇಳಿವೆ.
ಘಟನೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ತಪ್ಪಿದೆ. ಕಾನೂನು ಸುವ್ಯವಸ್ಥೆ ಬಲ್ಲವರೇ ಈ ರೀತಿ ವರ್ತಿಸಿದ್ದು ಸರಿಯಲ್ಲ. ದೂರು ನೀಡುವಂತೆ ನಿರ್ವಾಹಕ ಕಂ ಚಾಲಕನಿಗೆ ತಿಳಿಸಿದ್ದೇನೆ-ರಾಮನಗೌಡ, ಬಸ್ ಡಿಪೊ ಮ್ಯಾನೇಜರ್
ಬಸ್ ಪ್ರಯಾಣಿಕರು ಕೆಕೆಆರ್‌ಟಿಸಿ ಸಿಬ್ಬಂದಿಯಿಂದ ಘಟನೆಯ ಕುರಿತು ಮಾಹಿತಿ ಪಡೆದು ದೂರು ದಾಖಲಿಸಿಕೊಳ್ಳಲಾಗುವುದು-ಮಂಜುನಾಥ ಎಸ್., ಇನ್‌ಸ್ಪೆಕ್ಟರ್ ದೇವದುರ್ಗ ಪೊಲೀಸ್ ಠಾಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.