ADVERTISEMENT

Karnataka Rains | ಕೆಲವೆಡೆ ಧಾರಾಕಾರ ಮಳೆ, ತಗ್ಗಿದ ತಾಪಮಾನ

ಸಿಡಿಲು ಬಡಿದು ಯುವಕ ಸಾವು l ಕೆರೆಯಂತಾದ ಬೀದರ್‌ನ ನೆಹರೂ ಕ್ರೀಡಾಂಗಣ

​ಪ್ರಜಾವಾಣಿ ವಾರ್ತೆ
Published 16 ಮೇ 2025, 0:30 IST
Last Updated 16 ಮೇ 2025, 0:30 IST
<div class="paragraphs"><p>ಸಂಡೂರು ತಾಲ್ಲೂಕಿನ ತೋರಣಗಲ್ಲು ಹೋಬಳಿಯ ತಿಮ್ಮಲಾಪುರ ಗ್ರಾಮದ ಬಳಿಯ ಚೆಕ್ ಡ್ಯಾಮ್ ಮಳೆಯ ನೀರಿನಿಂದ ತುಂಬಿ ಹರಿಯಿತು</p></div>

ಸಂಡೂರು ತಾಲ್ಲೂಕಿನ ತೋರಣಗಲ್ಲು ಹೋಬಳಿಯ ತಿಮ್ಮಲಾಪುರ ಗ್ರಾಮದ ಬಳಿಯ ಚೆಕ್ ಡ್ಯಾಮ್ ಮಳೆಯ ನೀರಿನಿಂದ ತುಂಬಿ ಹರಿಯಿತು

   

ಬೀದರ್‌/ ಹುಬ್ಬಳ್ಳಿ: ರಾಜ್ಯದ ವಿವಿಧೆಡೆ ಗುರುವಾರವೂ ಧಾರಾಕಾರ ಮಳೆಯಾಗಿದ್ದು ಬಿಸಿಲಿನ ಝಳ ಕಡಿಮೆ
ಆಗಿದೆ. ಬೀದರ್‌ ಸೇರಿದಂತೆ ಸುತ್ತಮುತ್ತ ಎರಡನೇ ದಿನವೂ ಉತ್ತಮ ಮಳೆಯಾಗಿದೆ.

ವಿಜಯಪುರ, ಬಳ್ಳಾರಿ, ಹಾವೇರಿ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ.ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ರೇವನೂರ ಗ್ರಾಮದಲ್ಲಿ ಸಿಡಿಲು ಬಡಿದು ಶ್ರೀನಾಥ ದತ್ತಪ್ಪ ಮೈನಾಳ (26)
ಮೃತಪಟ್ಟಿದ್ದಾರೆ.

ADVERTISEMENT

ಬಳ್ಳಾರಿ ಜಿಲ್ಲೆ ತೋರಣಗಲ್ಲು ಹೋಬಳಿಯ ತಿಮ್ಮಲಾಪುರ ಗ್ರಾಮದ ಬಳಿಯ ಚೆಕ್ ಡ್ಯಾಮ್, ಮಳೆ ನೀರಿನಿಂದ ತುಂಬಿ ಹರಿದಿದೆ. ವಿಠಲಾಪುರದ ಕೆರೆಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. 

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಹಾರಕನಾಳು ಬಳಿ ಬುಧವಾರ ರಾತ್ರಿ ಸಿಡಿಲು ಬಡಿದು 7 ಕುರಿ ಮೃತಪಟ್ಟಿವೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಮಳೆಯಾಗಿದೆ. ಹಾವೇರಿ ಜಿಲ್ಲೆಯ ಹಲವು ಕಡೆ ಮತ್ತು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಬಹುತೇಕ ಕಡೆ ಮಳೆ ಆಗಿದೆ.

ಬೀದರ್‌ನಲ್ಲಿ ನಸುಕಿನ ನಾಲ್ಕು ಗಂಟೆ ಸುಮಾರಿಗೆ ಗುಡುಗು ಸಹಿತ ಆರಂಭಗೊಂಡ ಮಳೆ ಮಧ್ಯಾಹ್ನ 12ರ ತನಕ ಎಡೆಬಿಡದೆ ಸುರಿದಿದೆ. ಬುಧವಾರ ಸಂಜೆಯೂ ಮಳೆಯಾಗಿತ್ತು. ಸತತ ಮಳೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದ್ದು, ಕೆರೆಯಂತಾಗಿದೆ. ಡಿಎಚ್‌ಒ ಕಚೇರಿ ಪ್ರಾಂಗಣ ಹಾಗೂ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಜನರ ಓಡಾಟಕ್ಕೆ ಸಮಸ್ಯೆ
ಆಯಿತು. ಬೀದರ್‌ ತಾಲ್ಲೂಕಿನ ಹಲವು ಭಾಗಗಳಲ್ಲಿ ಉತ್ತಮ ಮಳೆ ಬಿದ್ದಿದೆ.

ಸಿಡಿಲಿಗೆ ಕಮಲನಗರದಲ್ಲಿ ಆಕಳು ಮೃತಪಟ್ಟಿದೆ. ಔರಾದ್‌ನಲ್ಲೂ ಮಳೆಯಾಗಿದೆ. ಎರಡು ದಿನ ಮಳೆ ಸುರಿದ ಪರಿಣಾಮ ತಾಪಮಾನ ತಗ್ಗಿದೆ.

ಕಲಬುರಗಿ ನಗರ ಸೇರಿ ಜೇವರ್ಗಿ, ಕಾಳಗಿ, ಅಫಜಲಪುರ ತಾಲ್ಲೂಕಿನಲ್ಲಿ ಸಂಜೆ ಮಳೆ ಸುರಿದಿದೆ.

ಬೀದರ್‌ನಲ್ಲಿ ಗುರುವಾರ ಸುರಿದ ಮಳೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಅಪಾರ ನೀರು ಸಂಗ್ರಹಗೊಂಡಿದ್ದು, ಕೆರೆಯಂತಾಗಿದೆ ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ

ಮೈಸೂರು ವರದಿ:

ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿ ಮತ್ತು ಗುರುವಾರ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಬಾಳೆ ಬೆಳೆಗೆ ಹಾನಿಯಾಗಿದೆ. ಕೆಲವೆಡೆ ಮನೆಯ ಚಾವಣಿ ಹಾರಿಹೋಗಿದೆ. ಆಸ್ಪತ್ರೆ ಮತ್ತು ಅಲ್ಲಿನ ಸಿಬ್ಬಂದಿ ವಸತಿಗೃಹದ ಆವರಣಕ್ಕೆ ನೀರು ನುಗ್ಗಿದೆ.

ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾದರೂ, ವಡಗೆರೆ ಗ್ರಾಮದಲ್ಲಿ ಗಾಳಿಯ ಅಬ್ಬರಕ್ಕೆ ಆಲದ ಮರದ ಕೊಂಬೆ ಬಿದ್ದು ಯುವಕ ಸಾಗರ್ ಕಾಲಿನ ಮೂಳೆ ಮುರಿದಿದೆ.

ಮೈಸೂರು ಜಿಲ್ಲೆ ಎಚ್‌.ಡಿ. ಕೋಟೆ ತಾಲ್ಲೂಕಿನಲ್ಲಿ ಗುರುವಾರ ಒಂದು ತಾಸು ಮಳೆಯಾಗಿದ್ದು, ಪಟ್ಟಣದ ತಾಯಿ ಮಕ್ಕಳ ಆಸ್ಪತ್ರೆ, ಆಯುರ್ವೇದಿಕ್ ಆಸ್ಪತ್ರೆ, ಸಿಬ್ಬಂದಿ ವಸತಿಗೃಹದ ಆವರಣಕ್ಕೆ ಮಳೆ ನೀರು ನುಗ್ಗಿತ್ತು. ರೋಗಿಗಳು ಆಸ್ಪತ್ರೆಗೆ ತೆರಳಲು ಪರದಾಡಿದರು.

ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ಹೊಸೂರು ಗೇಟ್ ಗ್ರಾಮದ ಗೋವಿಂದಯ್ಯ ಎಂಬುವರ ಹೆಂಚಿನ ಮನೆಗೆ ಭಾಗಶಃ ಹಾನಿಯಾಗಿದೆ. ಯಶೋಧಪುರದಲ್ಲಿ ನಾಗಮ್ಮ ಎಂಬುವರ ಮನೆಯ ಚಾವಣಿ ಹಾರಿ ಹೋಗಿದ್ದು, ಪಡಿತರ ಮತ್ತಿತರ ಪದಾರ್ಥಗಳು ನಾಶವಾಗಿವೆ. 

ಕಸಬಾ ಹೋಬಳಿಯ ಆಸ್ಪತ್ರೆ ಕಾವಲ್ ಗ್ರಾಮದ ಪ್ರಗತಿಪರ ರೈತ ವಿಠಲ್ ರಾವ್ ಕರಾಡೆ ಅವರ ಒಂದು ಎಕರೆ ಬಾಳೆ ತೋಟ ಸಂಪೂರ್ಣ ನೆಲಕಚ್ಚಿದ್ದು, ಅಂದಾಜು ₹40 ಸಾವಿರ ನಷ್ಟವಾಗಿದೆ ಎಂದು ತಿಳಿಸಿದರು.

‌ಜಿಲ್ಲೆಯ ಪಿರಿಯಾಪಟ್ಟಣ ಹಾಗೂ ಜಿಲ್ಲಾ ಕೇಂದ್ರದಲ್ಲಿ ಗುರುವಾರ ಸಂಜೆ ಗಾಳಿ ಸಹಿತ ಭಾರಿ ಮಳೆಯಾಯಿತು. ರಸ್ತೆಗಳು ಜಲಾವೃತವಾಗಿದ್ದವು. ಧನ್ವಂತರಿ ರಸ್ತೆಯಲ್ಲಿ ಮರವೊಂದು ಉರುಳಿಬಿದ್ದಿತ್ತು. ಕುಕ್ಕರಹಳ್ಳಿ ಕೆರೆ ರಸ್ತೆಯ ಅಲ್ಲಲ್ಲಿ ಮರದ ಕೊಂಬೆಗಳು ಮುರಿದುಬಿದ್ದಿದ್ದರಿಂದ, ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.

ಮೈಸೂರಿನಲ್ಲಿ ಗುರುವಾರ ಸುರಿದ ಗಾಳಿ ಮಳೆಗೆ ಗಾಯತ್ರಿ ಭವನದ ಬಳಿ ಕಾರಿನ ಮೇಲೆ ಬಿದ್ದ ಮರ-

 

ಮುಂಗಾರು ಸನ್ನಿಹಿತ; ಸಿದ್ಧತೆ

ಮಡಿಕೇರಿ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆಯು ವಾಡಿಕೆಗಿಂತ ಅಧಿಕ ಸುರಿಯುವ ಮುನ್ಸೂಚನೆ ದೊರೆಯುತ್ತಿದ್ದಂತೆ, ಕೊಡಗು ಜಿಲ್ಲಾಡಳಿತ ಅಗತ್ಯ ಸಿದ್ಧತೆ ನಡೆಸಿದೆ. ಸುಮಾರು 10,922 ಮಂದಿ ಪ್ರಕೃತಿ ವಿಕೋಪದಿಂದ ತೊಂದರೆಗೆ ಒಳಗಾಗಬಹುದೆಂದು ಅಂದಾಜಿಸಲಾಗಿದೆ.

ಭೂಕುಸಿತ ಹಾಗೂ ಪ್ರವಾಹ ಸಂಭವಿಸುವ ಒಟ್ಟು 102 ಸ್ಥಳಗಳನ್ನು ಗುರುತಿಸಿದ್ದು, ಅಲ್ಲಿ ವಾಸವಿರುವ ಒಟ್ಟು 2,953 ಕುಟುಂಬಗಳನ್ನೂ ಗುರುತಿಸಲಾಗಿದ್ದು, ಅವರಿಗೆ ತಾತ್ಕಾಲಿಕ ಆಶ್ರಯ ನೀಡಲು ಒಟ್ಟು 90 ಕಾಳಜಿ ಕೇಂದ್ರಗಳನ್ನು ತೆರೆಯಲು ಸ್ಥಳ ಗುರುತಿಸಿದೆ.

ಮಡಿಕೇರಿ ನಗರ ಸೇರಿದಂತೆ ತಾಲ್ಲೂಕಿನಲ್ಲೇ ಅತ್ಯಧಿಕ 44 ಜನವಸತಿ ಪ್ರದೇಶಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸುವ ಸಾಧ್ಯತೆ ಇದೆ. ಕುಶಾಲನಗರದಲ್ಲಿ 30, ವಿರಾಜಪೇಟೆಯಲ್ಲಿ 18 ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ 10 ಜನವಸತಿ ಪ್ರದೇಶಗಳನ್ನು ಗುರುತಿಸಿ, ಅಗತ್ಯ ಸಿದ್ಧತಾ ಕಾರ್ಯಗಳನ್ನು ನಡೆಸಿದೆ.

ಉಗ್ರರ ದಾಳಿ ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕೈಗೊಳ್ಳಬಹುದಾದ ರಕ್ಷಣಾ ಕಾರ್ಯಾಚರಣೆ ಕುರಿತು ಜಿಲ್ಲಾಡಳಿತ, ಜಿಲ್ಲಾ ಪೊಲೀಸರು ಹಾರಂಗಿ ಜಲಾಶಯದಲ್ಲಿ ಗುರುವಾರ ಅಣಕು ಕಾರ್ಯಾಚರಣೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.