ADVERTISEMENT

ಸ್ವಾದಭರಿತ ಹಾಲಿಗೆ ಶೇ 12ರಷ್ಟು ಜಿಎಸ್‌ಟಿ ಅಲ್ಲ, ಶೇ 5 ವಿಧಿಸಿ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 20:39 IST
Last Updated 5 ಜನವರಿ 2026, 20:39 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಸ್ವಾದಭರಿತ ಹಾಲನ್ನು ಡೇರಿ ಉತ್ಪನ್ನವೆಂದು ಪರಿಗಣಿಸಬೇಕೇ ಹೊರತು ಪಾನೀಯ ಎಂದು ವರ್ಗೀಕರಿಸುವಂತಿಲ್ಲ. ಹಾಗಾಗಿ, ಅದಕ್ಕೆ ಶೇ 12ರಷ್ಟು ಜಿಎಸ್‌ಟಿ ವಿಧಿಸುವ ಬದಲು ಶೇ 5ರಷ್ಟು ಮಾತ್ರ ವಿಧಿಸಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ‘ದೋಡ್ಲಾ’ ಡೇರಿ ಲಿಮಿಟೆಡ್‌ ಕಂಪನಿ ಸಲ್ಲಿಸಿದ್ದ ರಿಟ್‌ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರ ದೋಡ್ಲಾ ಕಂಪನಿ ಪಾವತಿ ಮಾಡಿರುವ ತೆರಿಗೆ ಹಣವನ್ನು ಮರು ಪಾವತಿಸುವಂತೆ ನಿರ್ದೇಶಿಸಿದೆ.

‘ಸುವಾಸನೆಭರಿತ ಹಾಲನ್ನು ಹೊಂದಿರುವ ಪಾನೀಯಗಳು ಉದ್ದೇಶಿತ ಜಿಎಸ್‌ಟಿ ಸುಂಕದ ಶೀರ್ಷಿಕೆಯ ಅಡಿಯಲ್ಲಿ ಬರುತ್ತವೆಯೇ ಅಥವಾ ಹಾಲು ಮತ್ತು ಕೆನೆ ಬೆರೆಸಿದ ಸಕ್ಕರೆ ಅಥವಾ ಸಿಹಿಕಾರಕಗಳನ್ನು ಒಳಗೊಂಡ ವರ್ಗದಡಿಯಲ್ಲಿ ಬರುತ್ತವೆಯೇ’ ಎಂಬುದರ ನ್ಯಾಯಿಕ ಪರಾಮರ್ಶೆಯನ್ನು ನ್ಯಾಯಪೀಠ ನಡೆಸಿತು. ‘ಸುವಾಸನೆಭರಿತ ಹಾಲು ತನ್ನ ಮೂಲ ಸ್ವರೂಪದಲ್ಲಿಯೂ ಹಾಲಾಗಿಯೇ ಉಳಿದುಕೊಳ್ಳುತ್ತದೆ ಮತ್ತು ಸುಂಕ ಶೀರ್ಷಿಕೆ ವ್ಯಾಪ್ತಿಗೇ ಒಳಪಡುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ‘ತೆರಿಗೆದಾರರು ಠೇವಣಿ ಮಾಡಿದ ಮೊತ್ತವನ್ನು ಅನ್ವಯವಾಗುವ ಬಡ್ಡಿಯೊಂದಿಗೆ ಮರು ಪಾವತಿಸಬೇಕು’ ಎಂದು ತೆರಿಗೆ ಇಲಾಖೆಗೆ ನಿರ್ದೇಶಿಸಿದೆ.

ADVERTISEMENT

ಪ್ರಕರಣವೇನು?

ಹಾಲು ಮತ್ತು ಹಾಲಿನ ಉತ್ಪನ್ನಗಳ ತಯಾರಕರ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತೆರಿಗೆ ಅಧಿಕಾರಿಗಳು ಡೇರಿ ಉತ್ಪನ್ನಗಳಿಗೆ ಅನ್ವಯವಾಗುವ ಶೇ 5ರ ಜಿಎಸ್‌ಟಿಯನ್ನು ಶೇ 12ರಿಂದ ಶೇ18ಕ್ಕೆ ಹೆಚ್ಚಿಸಿದ್ದರು. ಈ ಸಂಬಂಧ ಸಿಜಿಎಸ್‌ಟಿ ಕಾಯ್ದೆಯ ಕಲಂ 74ರ ಅಡಿಯಲ್ಲಿ ತಯಾರಕರಿಗೆ ಷೋಕಾಸ್‌ ನೋಟಿಸ್‌ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಕಂಪನಿಯು 2021ರ ಡಿಸೆಂಬರ್‌ನಲ್ಲಿ ಜಿಎಸ್‌ಟಿಗೆ ₹72.95 ಲಕ್ಷ ಠೇವಣಿ ಮಾಡಿತ್ತು. ನಂತರ ಜಿಎಸ್‌ಟಿ ಆದೇಶವನ್ನು ಪ್ರಶ್ನಿಸಿ ಸಕ್ಷಮ ಪ್ರಾಧಿಕಾರದ ಮೆಟ್ಟಿಲೇರಿತ್ತು. ಇದರ ವಿಚಾರಣೆ ನಡೆಸಿದ ಮೊದಲ ಮೇಲ್ಮನವಿ ಪ್ರಾಧಿಕಾರ ಕಂಪನಿಯ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.