ADVERTISEMENT

ಬೆಂಗಳೂರು ಬಲು ದುಬಾರಿ; ಸೂರ್ಯನ ಬೆಳಕು ಬೀಳುವ ಮನೆಯ ಬಾಡಿಗೆ ಎಷ್ಟು ಗೊತ್ತಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2026, 7:17 IST
Last Updated 20 ಫೆಬ್ರುವರಿ 2026, 7:17 IST
<div class="paragraphs"><p>ಬೆಂಗಳೂರು</p></div>

ಬೆಂಗಳೂರು

   

ಬೆಂಗಳೂರು: ಮಹಾನಗರಗಳ ಪೈಕಿ ಬೆಂಗಳೂರು ಅತ್ಯಂತ ದುಬಾರಿ ನಗರವಾಗಿ ಹೊರಹೊಮ್ಮುತ್ತಿದೆ. ಮಧ್ಯಮ ವರ್ಗದ ಜನರಿಗೆ ಇಲ್ಲಿ ಬದುಕುವುದೇ ಕಷ್ಟ ಎಂಬಂತಹ ವಾತಾವರಣ ನಿರ್ಮಾಣವಾಗುತ್ತಿದೆ. ವಿಶೇಷವಾಗಿ ಮನೆ ಬಾಡಿಗೆ, ತಿಂಗಳ ಖರ್ಚು ಸರಿದೂಗಿಸುವುದು ಕೂಡ ಕಠಿಣ ಎಂಬಂತಾಗಿದೆ.

ಬೆಂಗಳೂರು ಮಹಾನಗರದಲ್ಲಿ ಒಂದು ಮನೆ ಬಾಡಿಗೆ ಪಡೆಯಬೇಕು ಎಂದರೆ, ಹಲವು ಷರತ್ತುಗಳ ಜೊತಗೆ ದೊಡ್ಡ ಮೊತ್ತದ ಮುಂಗಡ ಹಣ ಪಾವತಿಸಬೇಕು. ಉದಾಹರಣೆಗೆ ಪ್ರತೀ ತಿಂಗಳು ಮನೆಯ ಬಾಡಿಗೆ ₹15 ಸಾವಿರ ಇದ್ದರೆ, ₹1.5 ಲಕ್ಷ ಮುಂಗಡ ಹಣ ಪಾವತಿಸಬೇಕಾಗುತ್ತದೆ. ಆರಂಭದಲ್ಲಿ ಬೆಂಗಳೂರಿಗೆ ಬಂದು ಜೀವನ ಕಟ್ಟಿಕೊಳ್ಳಲು ಬಯಸುವವರಿಗೆ ಇದು ತೀರಾ ಹೊರೆಯಾಗಿ ಪರಿಣಮಿಸಲಿದೆ.

ADVERTISEMENT

ಸದ್ಯ, ಬೆಂಗಳೂರಿನಲ್ಲಿ ಮನೆಯೊಂದಕ್ಕೆ ₹80 ಸಾವಿರ ಬಾಡಿಗೆ ಕೇಳಿರುವ ಘಟನೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಏನಿದು ಘಟನೆ? ಯಾಕಿಷ್ಟು ಬಾಡಿಗೆ? ಎಂಬುದನ್ನು ಇಲ್ಲಿ ತಿಳಿಯೋಣ.

ಬೆಂಗಳೂರಿನಲ್ಲಿ ಲಕ್ಷಕ್ಕಿಂತಲೂ ಅಧಿಕ ಬಾಡಿಗೆ ಪಡೆಯುವ ಅನೇಕ ಫ್ಲಾಟ್‌ಗಳು, ಪ್ರತ್ಯೇಕ ಮನೆಗಳು ಇರುವುದು ಕಾಣಬಹುದು. ಅದು, ಬಡ ಮತ್ತು ಮಧ್ಯಮ ವರ್ಗದವರು ಆ ರೀತಿಯ ಮನೆಗಳ ಖರೀದಿಗಾಗಲಿ, ಅಥವಾ ಬಾಡಿಗೆ ಪಡೆಯುವುದಕ್ಕಾಗಲಿ ಸಾಧ್ಯವಿಲ್ಲ. ಮಧ್ಯಮ ವರ್ಗದಲ್ಲಿ ಜೀವಿಸುವ ಅನೇಕರ ತಿಂಗಳ ಸಂಬಳ ₹50 ಸಾವಿರ ಅಥವಾ ಅದಕ್ಕಿಂತಲೂ ಕಡಿಮೆ ಇರುವುದನ್ನು ನಾವು ಕಾಣಬಹುದು.

ಏನಿದು ₹80 ಸಾವಿರದ ಬಾಡಿಗೆ ಘಟನೆ?

ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ‘ಬೆಂಗಳೂರಿನ ಮನೆ ಬಾಡಿಗೆ ನನಗೆ ಯಾವುದೇ ರೀತಿ ಅಚ್ಚರಿ ಉಂಟು ಮಾಡಿಲ್ಲ’. ಎಂದು ಬರೆದುಕೊಂಡಿದ್ದಾರೆ.

ಅಷ್ಟಕ್ಕೂ ಅವರು ಹಾಗೆ ಬರೆದುಕೊಳ್ಳಲು ಕಾರಣವಿದೆ. ಮನೆ ಬಾಡಿಗೆ ಕೇಳಲು ಹೋದ ಮಹಿಳೆಗೆ ಅಚ್ಚರಿ ಕಾದಿತ್ತು. ಮನೆಯ ಮಾಲೀಕರು, ಮನೆಯನ್ನು ತೋರಿಸಿ ಬಾಡಿಗೆ ₹80,000 ಎಂದು ಹೇಳಿದ್ದಾರೆ. ಇದರಿಂದ ಅಚ್ಚರಿಗೊಂಡ ಮಹಿಳೆ, ಯಾಕೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ, ಮನೆಯ ಮಾಲೀಕರು, ಈ ಮನೆಗೆ ಬೆಳಕು ಚೆನ್ನಾಗಿ ಬೀಳುತ್ತದೆ. ಹಾಗಾಗಿ, ಮನೆಯ ಬಾಡಿಗೆ ₹80 ಸಾವಿರ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಅನು ಎಂಬ ಮಹಿಳೆ ಹಂಚಿಕೊಂಡಿರುವ ಪೋಸ್ಟ್‌ನ ಪ್ರಕಾರ ‘ಬೆಂಗಳೂರು ಮನೆಯ ಬಾಡಿಗೆ ಪ್ರತೀ ಬಾರಿಯೂ ನನಗೆ ಅಚ್ಚರಿಯನ್ನುಂಟು ಮಾಡುತ್ತದೆ. ಸೂರ್ಯನ ಬೆಳಕು ಸಹಜವಾದದ್ದು, ಅದನ್ನು ತೋರಿಸಿ ಬಾಡಿಗೆ ಕೇಳುವುದು ಎಷ್ಟು ಸರಿ. ಜನರು ಸಾಮಾನ್ಯವಾಗಿ ಮನೆಯಲ್ಲಿ ನಿರೀಕ್ಷಿಸುವ ಸೌಕರ್ಯಗಳನ್ನು ಈಗ ನಗರದ ಬಾಡಿಗೆ ಮಾರುಕಟ್ಟೆಯಲ್ಲಿ ಪ್ರೀಮಿಯಂ ಆಗಿ ಬದಲಾಗಿದೆ’ ಎಂದು ಅವರು ಬೇಸರ ಹೊರಹಾಕಿದ್ದಾರೆ.

ಈ ಪೋಸ್ಟ್‌ಗೆ ಸಾಮಾಜಿಕ ಮಾಧ್ಯದಮಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಓರ್ವ ಬಳಕೆದಾರ, ‘ ಮನೆಗೆ ಬಾಡಿಗೆ ಪಾವತಿಸುವ ಬದಲು, ಮನೆ ಖರೀದಿಸಿ ಇಎಂಐಗೆ ₹80,000 ನೀಡುವುದು ಉತ್ತಮ’ ಎಂದಿದ್ದಾರೆ.

ಒಟ್ಟಾರೆಯಾಗಿ ಮಹಿಳೆ ಹಾಕಿರುವ ಪೋಸ್ಟ್ ನೋಡಿದ ಬಳಿಕ, ಬೆಂಗಳೂರು ಮಹಾನಗರದಲ್ಲಿ ಮನೆ ಬಾಡಿಗೆ ಎಷ್ಟು ಏರಿಕೆಯಾಗಿದೆ. ಇಲ್ಲಿನ ಜೀವನ ಎಷ್ಟು ದುಬಾರಿ ಎಂಬುದನ್ನು ಕಾಣಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.