ADVERTISEMENT

ಭ್ರಷ್ಟಾಚಾರ ಬಿತ್ತಿದ್ದು ಕಾಂಗ್ರೆಸ್, ಸೋನಿಯಾ ಗುಲಾಮ ಸಿದ್ದರಾಮಯ್ಯ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 7:37 IST
Last Updated 30 ಏಪ್ರಿಲ್ 2022, 7:37 IST
ಸಿ.ಟಿ.ರವಿ
ಸಿ.ಟಿ.ರವಿ   

ತುಮಕೂರು: ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಗುಲಾಮರಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ರಾಷ್ಟ್ರದಲ್ಲಿನ ಭಾಷೆ ಒಪ್ಪಿಕೊಳ್ಳುತ್ತಾರೋ ಅಥವಾ ನಮ್ಮ ದೇಶದ ಮೇಲೆ ಅತಿಕ್ರಮಣ ಮಾಡಿ ಹೇರಿರುವ ಗುಲಾಮಗಿರಿಯ‌ ಭಾಷೆಗೆ ಪ್ರಾಧಾನ್ಯತೆ ಕೊಡುತ್ತಾರೋ’ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಕನ್ನಡವೇ ಸರ್ವ ಶ್ರೇಷ್ಠ. ಇದರಲ್ಲಿ ಗುಲಾಮರಾಗುವ ಪ್ರಶ್ನೇಯೆ ಇಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವುದು ಮಾತೃ ಭಾಷೆಗೆ ಮನ್ನಣೆ ಕೊಡಿ, ಸಂಪರ್ಕ ಭಾಷೆಯಾಗಿ ಇಂಗ್ಲಿಷ್ ಬದಲಿಗೆ ಹಿಂದಿ ಉಪಯೋಸಿ ಎಂದು. ಇದರಲ್ಲಿ ತಪ್ಪೇನಿದೆ. ಅವರು ಕನ್ನಡವನ್ನು ಕಡೆಗಣಿಸಿ ಎಂದು ಹೇಳಿಲ್ಲ. ಕನ್ನಡ ಬಿಟ್ಟು ಹಿಂದಿಯಲ್ಲೇ ಮಾತನಾಡಿ ಎಂದಿದ್ದರೆ ನಾವೂ ಧ್ವನಿ ಎತ್ತುತ್ತಿದ್ದೆವು ಎಂದರು.

ಅಮಿತ್ ಶಾ ಹೇಳಿದ ಮಾತನ್ನು ಸಿದ್ದರಾಮಯ್ಯ ತಿರುಚಿ ಹೇಳುವುದಾದರೆ. ಸ್ವತಃ ಅವರೇ ಒಪ್ಪಿಕೋಬೇಕು. ನಾನು ಇಂಗ್ಲಿಷ್‌ನ ಗುಲಾಮ. ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಗುಲಾಮ ಎಂದು ಮೊದಲು ಒಪ್ಪಿಕೊಂಡು ಆ ಮೇಲೆ ನಮಗೆ ಪಾಠ ಮಾಡಲಿ ಎಂದು ಹೇಳಿದರು.

ಭ್ರಷ್ಟಾಚಾರವನ್ನು ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್. ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಸೇರಿ ಹೋಗಿದೆ. ಅದನ್ನು ನಿಯಂತ್ರಿಸಬೇಕು ಎಂದು ಹೇಳಿದರು.

ಪಿಎಸ್ಐ ಪರೀಕ್ಷೆ ಅಕ್ರಮದ ವಿರುದ್ಧ ಬಿಜೆಪಿ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ. ಮುಚ್ಚಿ ಹಾಕಿದ್ದರೆ ಅಪರಾಧ ಆಗುತ್ತಿತ್ತು. ಮುಚ್ಚಿ ಹಾಕುವ ಕೆಲಸ ಮಾಡಿಲ್ಲ. ಇಂತಹ ಪ್ರಕರಣಗಳನ್ನು ಮುಚ್ಚಿಹಾಕುವ ಕೆಲಸವನ್ನು ಬಹಳ ಹಿಂದಿನಿಂದ ವ್ಯವಸ್ಥಿತವಾಗಿ ಕಾಂಗ್ರೆಸ್ ಮಾಡಿಕೊಂಡು ಬಂದಿದೆ ಎಂದು ದೂರಿದರು.

ಬೆಂಗಳೂರು ಅರ್ಕಾವತಿ ಬಡಾವಣೆ ನಿರ್ಮಾಣದ ಹಗರಣದಲ್ಲಿ ಸಿದ್ದರಾಮಯ್ಯ ಮಾಡಿದ್ದೇನು?. ಕದ್ದಿದ್ದ ವಾಚನ್ನು ಕಟ್ಟಿಕೊಂಡಿದ್ದವರು ಯಾರು?. ಅದನ್ನು ಹೇಗೆ ಮುಚ್ಚಿ ಹಾಕಿದರು ಎಂದು ಪ್ರಶ್ನಿಸಿದರು.

ಶೇ 40ರಷ್ಟು ಕಮಿಷನ್ ಅನ್ನೋದು ಸುಳ್ಳು. ಅಷ್ಟೊಂದು ಹಣ ಕೊಟ್ಟು ಕೆಲಸ ಮಾಡಲು ಸಾಧ್ಯವಿದೆಯೇ?. ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎನ್ನುವ ಉದ್ದೇಶದಿಂದ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಯುತ್ತಿದೆ ಎಂದರು.

ಹುಬ್ಬಳಿ ಪ್ರಕರಣ ಮಾತ್ರವಲ್ಲದೆ ಪಾದರಾಯನಪುರ, ಕೆ.ಜೆ ಹಳ್ಳಿ, ಡಿ.ಜೆ ಹಳ್ಳಿ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ನಡೆದ ಗಲಭೆಯ ಹಿಂದೆ ಕಾಂಗ್ರೆಸ್ ಪಾತ್ರ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.