ADVERTISEMENT

ಸಂಪರ್ಕ ಭಾಷೆಯಾಗಿ ಹಿಂದಿ ಬಳಕೆ- ಅಮಿತ್‌ ಶಾ ಹೇಳಿಕೆ ಸರಿಯಿದೆ ಎಂದ ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 10:41 IST
Last Updated 28 ಏಪ್ರಿಲ್ 2022, 10:41 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ‘ಸಂಪರ್ಕ ಭಾಷೆಯಾಗಿ ಇಂಗ್ಲಿಷ್‌ ಬದಲಿಗೆ ಹಿಂದಿ ಬಳಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿರುವುದರಲ್ಲಿ ತಪ್ಪು ಇಲ್ಲ. ಮೊದಲ ಆದ್ಯತೆ ಮಾತೃಭಾಷೆಗೆ ಇರುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಭಾರತದ ಶೇ 48 ಜನರಿಗೆ ಹಿಂದಿ ಮಾತೃಭಾಷೆಯಾಗಿದೆ. ಹೀಗಾಗಿ, ಹಿಂದಿ ಸಂಪರ್ಕ ಭಾಷೆಯಾಗಿರಬೇಕು ಎಂದು ಅವರು ಹೇಳಿದ್ದಾರೆ. ಬಾಕಿ ಶೇ 52 ಜನರು ಸಂಪರ್ಕ ಭಾಷೆಯಾಗಿ ಇಂಗ್ಲಿಷ್‌ ಬದಲಿಗೆ ಹಿಂದಿ ಬಳಸಬೇಕು ಎಂಬ ಆಶಯ ಇದೆ’ ಎಂದು ಉತ್ತರಿಸಿದರು.

‘ಹಿಂದಿ ನಮ್ಮ ರಾಷ್ಟ್ರದ ಭಾಷೆ. ಇಂಗ್ಲಿಷ್‌ ಬ್ರಿಟಿಷರ ಹೇರಿಕೆ. ಮಾತೃಭಾಷೆ ಶ್ರೇಷ್ಠವಾದುದು. ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಎಲ್ಲ ಭಾಷೆಗಳನ್ನು ಗೌರವಿಸುವುದು ನಮ್ಮ ಸಂಸ್ಕೃತಿ. ಹೀಗಾಗಿಯೇ, ದೇಶದಲ್ಲಿ ನೂರಾರು ಭಾಷೆಗಳು ಇವೆ’ ಎಂದರು.

ADVERTISEMENT

ಇತ್ತೀಚೆಗೆ ಕಿಚ್ಚ ಸುದೀಪ್ ಅವರು ಕಾರ್ಯಕ್ರಮವೊಂದರಲ್ಲಿ 'ಹಿಂದಿ ರಾಷ್ಟ್ರಭಾಷೆ ಅಲ್ಲ' ಎಂದಿದ್ದರು. ಅದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದ ಅಜಯ್ ದೇವಗನ್, 'ಹಿಂದಿ ರಾಷ್ಟ್ರ ಭಾಷೆ' ಎಂದು ಪ್ರತಿಪಾದಿಸಿದ್ದರು. 'ರಾಷ್ಟ್ರಭಾಷೆ' ವಿಚಾರದ ಬಗ್ಗೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಿಚ್ಚ ಸುದೀಪ್ ಮತ್ತು ಅಜಯ್‌ ದೇವಗನ್‌ ಅವರ ಮಾತು–ತಿರುಗೇಟಿನ ನಡುವೆ 'ಹಿಂದಿ ರಾಷ್ಟ್ರ ಭಾಷೆ'(?) ಎಂಬುದರ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ನಟ ಸುದೀಪ್‌ ಹೇಳಿದ್ದೇನು?

ಕೆಲ ದಿನಗಳ ಹಿಂದೆ ನಡೆದ ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದ, ನಟ ಉಪೇಂದ್ರ ಅವರ ನೂತನ ಪ್ಯಾನ್‌ ಇಂಡಿಯಾ ಚಿತ್ರ 'ಐ ಆ್ಯಮ್‌ ಆರ್‌' ಶೀರ್ಷಿಕೆ ಅನಾವರಣ ಸಂದರ್ಭದಲ್ಲಿ ಸುದೀಪ್‌ ಮಾತನಾಡಿ, ‘ಪ್ರಸ್ತುತ ಹಿಂದಿ ಎನ್ನುವುದು ರಾಷ್ಟ್ರೀಯ ಭಾಷೆಯಾಗಿಲ್ಲ. ಬಾಲಿವುಡ್‌ನವರು ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಮಾಡುತ್ತಿದ್ದು, ಅಲ್ಲಿಂದ ತೆಲುಗು ಮತ್ತು ತಮಿಳು ಭಾಷೆಗೆ ಡಬ್‌ ಮಾಡಿ, ಒದ್ದಾಡುತ್ತಿದ್ದಾರೆ. ದಕ್ಷಿಣದ ಸಿನಿಮಾಗಳು ಡಬ್‌ ಆಗಿ ಅಲ್ಲಿ ಓಡುತ್ತಿವೆ. ನಾವು ಪ್ಯಾನ್‌ ಇಂಡಿಯಾ ಸಿನಿಮಾ ಮಾಡುತ್ತಿಲ್ಲ. ಅದು ಮುಂಬೈನಿಂದ ಬರುತ್ತಿದೆ. ನಾವು ಎಲ್ಲೆಡೆಯೂ ತಲುಪುವ ಸಾಮರ್ಥ್ಯವಿರುವ ಸಿನಿಮಾ ಮಾಡುತ್ತಿದ್ದೇವೆ. ಇವತ್ತು ಚಿತ್ರರಂಗವು ಮುನ್ನುಗುತ್ತಿರುವುದನ್ನು ನೋಡುತ್ತಿರುವಾಗ, ಭಾಷೆ ಎನ್ನುವುದು ಕೇವಲ ತಡೆಯಾಗಿತ್ತಷ್ಟೇ. ಇವತ್ತು ಇದನ್ನು ಒಡೆದು ಮುನ್ನುಗ್ಗಿದೆ’ ಎಂದಿದ್ದರು. ಇತ್ತೀಚೆಗೆ ಸಂದರ್ಶನವೊಂದರಲ್ಲೂ ಇದನ್ನು ಮರು ಉಲ್ಲೇಖಿಸಿದ್ದರು.

ಆ ಹೇಳಿಕೆ ಸಂಬಂಧ ಬುಧವಾರ ಅಜಯ್‌ ದೇವಗನ್‌ ಟ್ವೀಟ್‌ ಮಾಡಿ, 'ನಿಮ್ಮ ಪ್ರಕಾರ, ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲವಾದರೆ, ನೀವೇಕೆ ನಿಮ್ಮ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್‌ ಮಾಡಿ ಬಿಡುಗಡೆ ಮಾಡುತ್ತಿರುವಿರಿ? ಹಿಂದಿ ಭಾಷೆಯು ಈ ಹಿಂದೆ, ಈಗ ಮತ್ತು ಯಾವಾಗಲೂ ನಮ್ಮ ಮಾತೃ ಭಾಷೆ ಮತ್ತು ರಾಷ್ಟ್ರ ಭಾಷೆಯಾಗಿದೆ. ಜನ ಗಣ ಮನ' ಎಂದಿದ್ದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.