ADVERTISEMENT

ಜನಾಗ್ರಹಕ್ಕೆ ಸ್ಪಂದಿಸಿದ ಸರ್ಕಾರ: ಮರ್ಯಾದೆಗೇಡು ಹತ್ಯೆಗೆ ಜೈಲು

ಜನಾಗ್ರಹಕ್ಕೆ ಸ್ಪಂದಿಸಿದ ಸರ್ಕಾರ l ಮಸೂದೆಯ ಕರಡು ಸಿದ್ಧ l ಮದುವೆಗೆ ನೆರವು, ದಂಪತಿಗಳಿಗೆ ವಸತಿಯೂ ಲಭ್ಯ

ರಾಜೇಶ್ ರೈ ಚಟ್ಲ
Published 1 ಜನವರಿ 2026, 21:08 IST
Last Updated 1 ಜನವರಿ 2026, 21:08 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಜಾತಿಮೀರಿ ಪ್ರೀತಿಸುವವರು, ಮದುವೆಯಾದವರನ್ನು ‘ಮರ್ಯಾದೆ’ಯ ಹೆಸರಿನಲ್ಲಿ ಹಲ್ಲೆ ಮಾಡುವ, ಹತ್ಯೆಗೈಯುವ ಇಲ್ಲವೆ ಅವರಿಗೆ ಬಹಿಷ್ಕಾರ ಹಾಕುವವರನ್ನು ಹೆಡೆಮುರಿ ಕಟ್ಟಲು ಮುಂದಾಗಬೇಕೆಂಬ ಜನಾಗ್ರಹಕ್ಕೆ ಸ್ಪಂದಿಸಿರುವ ಸರ್ಕಾರ, ಇದಕ್ಕಾಗಿ ಮಸೂದೆಯೊಂದನ್ನು ಸಿದ್ಧಪಡಿಸಿದೆ. 

ಇಂತಹ ಕೃತ್ಯ ಎಸಗುವವರಿಗೆ ಜೀವಾವಧಿ ಜೈಲು ವಾಸ ಹಾಗೂ ₹5 ಲಕ್ಷವರೆಗೆ ದಂಡ ವಿಧಿಸಲು ಮಸೂದೆ ಅವಕಾಶ ಕಲ್ಪಿಸಿದೆ.

ADVERTISEMENT

ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಇತ್ತೀಚೆಗೆ ಮರ್ಯಾದೆಗೇಡು ಹತ್ಯೆ ನಡೆದಿತ್ತು. ಆ ಬೆನ್ನಲ್ಲೆ, ‘ಇಂತಹ ಮೃಗೀಯ, ಅಮಾನವೀಯ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗಳನ್ನು ತಡೆಯಲು ಪ್ರತ್ಯೇಕ ಕಾಯ್ದೆ ಜಾರಿಗೆ ತರಬೇಕು’ ಎಂಬ ಆಗ್ರಹ ಹೆಚ್ಚಿತ್ತು. 

ಈ ಆಶಯ ಸಾಕಾರಗೊಳಿಸಲು ಕಾರ್ಯೋನ್ಮುಖವಾಗಿರುವ ಸರ್ಕಾರ, ‘ಕರ್ನಾಟಕ ಮದುವೆ ಮತ್ತು ಸಂಗಾತಿ ಆಯ್ಕೆಯ ಸ್ವಾತಂತ್ರ್ಯ, ಗೌರವ ಮತ್ತು ಸಂಪ್ರದಾಯದ ಹೆಸರಿನಲ್ಲಿ ಅಪರಾಧಗಳ ತಡೆಗಟ್ಟುವಿಕೆ ಮತ್ತು ನಿಷೇಧ ಮಸೂದೆ– 2026’ರ ಕರಡು ರೂಪಿಸಿದೆ. ಕಾನೂನು ಮತ್ತು ಸಂಸದೀಯ ಇಲಾಖೆ ಇದನ್ನು ಸಿದ್ಧಪಡಿಸಿದೆ.

ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಪರಾಧ ತಡೆಗೆ ಕಾನೂನು ಅವಶ್ಯ. ಮದುವೆ ಮತ್ತು ಸಂಬಂಧಗಳಲ್ಲಿ ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವ ಯಾವುದೇ ನಡವಳಿಕೆಯನ್ನು ತಡೆಯಲು, ಶಿಕ್ಷಿಸಲು, ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಉದ್ದೇಶವನ್ನು ಮಸೂದೆ ಹೊಂದಿದೆ.

ಮಸೂದೆಯಲ್ಲಿ ಏನಿದೆ?: ವೈಯಕ್ತಿಕ ಜೀವನದ ವಿಷಯದಲ್ಲಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಗಾತಿ ಆಯ್ಕೆ ಮತ್ತು ಸಂಬಂಧದ ಹಕ್ಕುಗಳೂ ಸೇರಿವೆ. ತಮ್ಮ ಕುಟುಂಬದ ಸದಸ್ಯರು ಸೇರಿದಂತೆ ಯಾರಿಂದಲೂ ಅಡೆತಡೆ ಇಲ್ಲದೆ, ತಮ್ಮ ಆಯ್ಕೆಯಂತೆ ಮದುವೆಯಾಗುವ ಹಕ್ಕು ವಯಸ್ಕರಿಗೆ ಇದೆ.

ಮದುವೆ ಅಥವಾ ಸಂಬಂಧವು ಜಾತಿ, ಬುಡಕಟ್ಟು, ಸಮುದಾಯ, ಧರ್ಮ, ಸಂಪ್ರದಾಯಕ್ಕೆ ಅಗೌರವ ತಂದಿದೆ ಅಥವಾ ಕುಟುಂಬದ ಇಚ್ಛೆಗೆ ವಿರುದ್ಧವಾಗಿದೆ ಎಂಬ ಕಾರಣಕ್ಕೆ ವಿರೋಧಿಸುವುದು ಕಾನೂನುಬಾಹಿರ ಹಾಗೂ ಅಪರಾಧ ಎನಿಸಲಿದೆ. ಈ ರೀತಿಯ ವಿರೋಧ ವ್ಯಕ್ತವಾಗುವ ಆತಂಕ ಇರುವವರು ನ್ಯಾಯಾಲಯದ ಮೂಲಕ ಪೊಲೀಸರ ರಕ್ಷಣೆ ಪಡೆಯಬಹುದು. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಪೊಲೀಸರ ಜವಾಬ್ದಾರಿ. ಆದೇಶ, ಉಲ್ಲಂಘಿಸಿದರೆ ಎರಡು ವರ್ಷಗಳವರೆಗೆ ಜೈಲು ಅಥವಾ ₹1 ಲಕ್ಷದವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು. ಮಹಿಳೆಯರಿಗೆ ಜೈಲು ಶಿಕ್ಷೆ ಇರುವುದಿಲ್ಲ.

ಇಂತಹ ಕೃತ್ಯದ ಪುರಾವೆ ನಾಶ, ಕೃತ್ಯಕ್ಕೆ ಪ್ರೇರೇಪಿಸುವುದು, ಸಂಚು ರೂಪಿಸುವುದು ಅಥವಾ ಆತ್ಮಹತ್ಯೆಗೆ ಪ್ರೋತ್ಸಾಹಿಸುವುದೂ ಅಪರಾಧ. ಇಂತಹ ಅಪರಾಧಗಳಲ್ಲಿ ಸಂಜ್ಞೇಯ, ಜಾಮೀನುರಹಿತ ಮತ್ತು ರಾಜೀ ಸಂಧಾನಕ್ಕೆ ಅವಕಾಶ ಇರುವುದಿಲ್ಲ.

ಬಾಧಿತ ದಂಪತಿ ರಕ್ಷಣೆ ಕೋರಿ ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಪೊಲೀಸರಿಗೆ ದೂರು ನೀಡಬಹುದು. ದಂಪತಿಗೆ ಸುರಕ್ಷಿತ ಸ್ಥಳದಲ್ಲಿ ಮನೆ, ನಗದು ಅಥವಾ ವಸ್ತುವಿನ ರೂಪದಲ್ಲಿ ಪರಿಹಾರ ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ದೂರಿನ ಮೇಲೆ 60 ದಿನಗಳ ಒಳಗೆ ತನಿಖೆ ನಡೆಸಿ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಬೇಕು.  

ಜಿಲ್ಲಾಧಿಕಾರಿ ಅಥವಾ ಎಸ್‌ಪಿಗಳು ದೂರನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕು. ಮದುವೆಯನ್ನು ಶಾಸ್ತ್ರೋಕ್ತವಾಗಿ ನಡೆಸಲು ಮತ್ತು ಅವರು ಬಯಸಿದರೆ ಪೊಲೀಸ್ ರಕ್ಷಣೆಯಲ್ಲಿ ನೋಂದಾಯಿಸಲು ನೆರವು ನೀಡಬಹುದು. ಮದುವೆಯ ನಂತರ ದಂಪತಿ ಬಯಸಿದರೆ, ನೆಪ ಮಾತ್ರದ ಶುಲ್ಕ ಪಾವತಿಸಿ ಒಂದು ತಿಂಗಳ ಅವಧಿಗೆ ವಸತಿ ಒದಗಿಸಬಹುದು. ನಂತರ ತಿಂಗಳ ಆಧಾರದಲ್ಲಿ ವಿಸ್ತರಿಸಬಹುದು.

ಮೇಲ್ವಿಚಾರಣೆಗೆ ಸಮಿತಿ: ಇಂತಹ ಅಪರಾಧಗಳನ್ನು ತಡೆಗಟ್ಟಲು ಪ್ರತಿ ಜಿಲ್ಲೆಯಲ್ಲಿ ವಿಶೇಷ ಕೋಶವನ್ನು ಸರ್ಕಾರ ರಚಿಸಬೇಕು. ಈ ಕೋಶಗಳು ದೂರು ಸ್ವೀಕರಿಸಲು, ಸಹಾಯ ಮತ್ತು ರಕ್ಷಣೆ ನೀಡಲು 24 ಗಂಟೆಗಳ ಸಹಾಯವಾಣಿ ಸ್ಥಾಪಿಸಬೇಕು. ಕಾಯ್ದೆಯ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಮೇಲ್ವಿಚಾರಣಾ ಸಮಿತಿ ರಚಿಸಬೇಕು. ಈ ಸಮಿತಿಯು ಶಾಸಕರು, ಎಸ್‌ಪಿ, ಮೂವರು ಗ್ರೂಪ್ ‘ಎ’ ಅಧಿಕಾರಿಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಮೂವರು ಸದಸ್ಯರನ್ನು ಒಳಗೊಂಡಿರುತ್ತದೆ. ಸಮಿತಿಯು ಕನಿಷ್ಠ ಮೂರು ತಿಂಗಳಿಗೊಮ್ಮೆ ಸಭೆ ಸೇರಬೇಕು. ಪ್ರಕರಣಗಳ ವಿಚಾರಣೆಗೆ ವಿಶೇಷ ತ್ವರಿತಗತಿ ನ್ಯಾಯಾಲಯವನ್ನು ರಚಿಸಬಹುದು ಎಂದೂ ಮಸೂದೆ ಹೇಳಿದೆ.

ಏನೆಲ್ಲ ಶಿಕ್ಷೆ?

-ಮರ್ಯಾದೆಗೇಡು ಹತ್ಯೆ ಮಾಡಿದವರಿಗೆ ಜೀವಾವಧಿ ಜೈಲು ಶಿಕ್ಷೆ ಮತ್ತು ₹5 ಲಕ್ಷದವರೆಗೆ ವಿಸ್ತರಿಸಬಹುದಾದ ದಂಡ

-ದಂಪತಿ ಅಥವಾ ಅವರಲ್ಲಿ ಒಬ್ಬರಿಗೆ ಗಂಭೀರವಾದ ಗಾಯ ಉಂಟು ಮಾಡಿದವರಿಗೆ 10 ವರ್ಷಗಳಿಗಿಂತ ಕಡಿಮೆಯಿಲ್ಲದ, ಜೀವಾವಧಿವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ₹3 ಲಕ್ಷದವರೆಗೆ ವಿಸ್ತರಿಸಬಹುದಾದ ದಂಡ

-ಸಾಮಾನ್ಯ ಗಾಯ ಉಂಟು ಮಾಡಿದವರಿಗೆ 3 ವರ್ಷಗಳಿಗಿಂತ ಕಡಿಮೆಯಿಲ್ಲದ, ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಜೈಲು ಶಿಕ್ಷೆ ಮತ್ತು ₹2 ಲಕ್ಷವರೆಗೆ ವಿಸ್ತರಿಸಬಹುದಾದ ದಂಡ

-ಹತ್ಯೆ ಅಥವಾ ಗಂಭೀರವಾದ ಗಾಯಕ್ಕೆ ಹೊರತಾದ ಅಪರಾಧ ಮಾಡಿದವರಿಗೆ 2 ವರ್ಷಗಳಿಗಿಂತ ಕಡಿಮೆಯಿಲ್ಲದ, 5 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ₹1 ಲಕ್ಷವರೆಗೆ ವಿಸ್ತರಿಸಬಹುದಾದ ದಂಡ

-ಬೆದರಿಕೆ ಒಡ್ಡಿದರೆ 3 ವರ್ಷಗಳಿಗಿಂತ ಕಡಿಮೆಯಿಲ್ಲದ, 5 ವರ್ಷಗಳವರೆಗೆಡ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು₹2 ಲಕ್ಷದವರೆಗೆ ವಿಸ್ತರಿಸಬಹುದಾದ ದಂಡ

-ಅಪರಾಧ ಕೃತ್ಯಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸಿದವರಿಗೆ ಆರು ತಿಂಗಳಿಗಿಂತ ಕಡಿಮೆಯಿಲ್ಲದ, 5 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು
₹1 ಲಕ್ಷವರೆಗೆ ವಿಸ್ತರಿಸಬಹುದಾದ ದಂಡ

ಯಾವುದಕ್ಕೆ ನಿಷೇಧ?

l ದಂಪತಿಯ ಸಾವು, ದೈಹಿಕ ಹಾನಿ ಅಥವಾ ಗಾಯ ಉಂಟುಮಾಡುವುದು

l ಮದುವೆ ತಡೆಯಲು ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಪ್ರಚೋದಿಸುವುದು

l ದಂಪತಿ ಅಥವಾ ಅವರಲ್ಲಿ ಒಬ್ಬರನ್ನು ನೇರವಾಗಿ ಅಥವಾ ಯಾವುದೇ ಸಂವಹನ ವಿಧಾನದ ಮೂಲಕ ಭೇಟಿಯಾಗಲು, ಸಹವಾಸ ಮಾಡಲು ಯತ್ನ ಅಥವಾ ಅವರು ಬದುಕುವುದಕ್ಕೆ ಕಿರುಕುಳ ನೀಡುವುದು

l ಸಂಗಾತಿ ಅಥವಾ ಅವರೊಂದಿಗೆ ಸಂಬಂಧ ಹೊಂದಿರುವ ಯಾರನ್ನಾದರೂ ಅಪಹರಿಸುವುದು, ಬೆದರಿಕೆ ಹಾಗೂ ಗೃಹ ಬಂಧನದಲ್ಲಿ ಇರಿಸುವುದು

l ದಂಪತಿ ಅಥವಾ ಅವರ ಕುಟುಂಬಕ್ಕೆ ಸಾಮಾಜಿಕ, ಆರ್ಥಿಕ ಬಹಿಷ್ಕಾರ ಹಾಕುವುದು ಹಾಗೂ ದಂಡ ವಿಧಿಸುವುದು

l ದಂಪತಿಯ ತಿಥಿ ಅಥವಾ ಅಂತ್ಯ ಸಂಸ್ಕಾರಕ್ಕೆ ಸಮಾನವಾದ ಆಚರಣೆ ಮಾಡುವುದು

l ಆಸ್ತಿಯಲ್ಲಿನ ಉತ್ತರಾಧಿಕಾರದ ಹಕ್ಕು ನಿರಾಕರಣೆ, ಒಪ್ಪಿಗೆ ವಿರುದ್ಧ ಬಲವಂತದ ಮದುವೆ ಮಾಡುವುದು

l ದಂಪತಿ ಅಥವಾ ಅವರಲ್ಲಿ ಒಬ್ಬರ ಬ್ಯಾಂಕ್ ಖಾತೆ ಸ್ಥಗಿತ ಅಥವಾ ಉದ್ಯೋಗಕ್ಕೆ ಸಂಚಕಾರ ತರುವುದು

l ಗರ್ಭಪಾತ ಮಾಡಿಸುವುದು ಅಥವಾ ಗರ್ಭಪಾತಕ್ಕೆ ಒತ್ತಾಯಿಸುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.