ADVERTISEMENT

ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಿಗೆ ಲೋಕಾಯುಕ್ತರ ಭೇಟಿ: ಸಾಲು–ಸಾಲು ದೂರು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 0:00 IST
Last Updated 14 ನವೆಂಬರ್ 2025, 0:00 IST
ಯಲಹಂಕದ ವಿದ್ಯಾರ್ಥಿ ನಿಲಯದಲ್ಲಿ ಕಾಫಿ ಕಾಯಿಸಲು ಬಳಸಲಾದ ಕೊಳಕು ಮತ್ತು ಮುಕ್ಕಾದ ಪಾತ್ರೆ
ಯಲಹಂಕದ ವಿದ್ಯಾರ್ಥಿ ನಿಲಯದಲ್ಲಿ ಕಾಫಿ ಕಾಯಿಸಲು ಬಳಸಲಾದ ಕೊಳಕು ಮತ್ತು ಮುಕ್ಕಾದ ಪಾತ್ರೆ   

ಬೆಂಗಳೂರು: ‘ನಮಗೆ ನೀಡುವ ಊಟ ಸರಿಯಾಗಿರುವುದಿಲ್ಲ, ಸ್ನಾನಕ್ಕೆ ಬಳಸುವ ನೀರಿನಲ್ಲಿ ಹುಳುಗಳು ಇರುತ್ತವೆ, ಮೊಟ್ಟೆ–ಬಾಳೆಹಣ್ಣು ನೀಡುವುದಿಲ್ಲ. ಪ್ರಶ್ನಿಸಿದರೆ ಬೈಗುಳ ಕೇಳಿಸಿಕೊಳ್ಳಬೇಕಾಗುತ್ತದೆ, ದಿಂಬು ಹಾಸಿಗೆಗಳು ಕೊಳೆತು ನಾರುತ್ತಿವೆ. ಕೊಠಡಿ ತುಂಬೆಲ್ಲಾ ತಿಗಣೆಗಳು ಇದ್ದು, ಅವು ಕಚ್ಚಿ ಮೈಯೆಲ್ಲಾ ಗಂಧೆಗಳಾಗಿವೆ’...

ನಗರದ ಎಂ.ಜಿ.ರಸ್ತೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿರುವ ಡಾ.ಬಿ.ಆರ್‌.ಅಂಬೇಡ್ಕರ್ ಸರ್ಕಾರಿ ವಿಜ್ಞಾನ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಗುರುವಾರ ದಿಢೀರ್‌ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಅವರ ಎದುರು, ವಿದ್ಯಾರ್ಥಿಗಳು ಇಟ್ಟ ಸಾಲು–ಸಾಲು ದೂರುಗಳಿವು.

2022ರಲ್ಲಿ ವಿದ್ಯಾರ್ಥಿಗಳು ನೀಡಿದ್ದ ದೂರಿನ ಆಧಾರದಲ್ಲಿ ಲೋಕಾಯುಕ್ತವು ಪ್ರಕರಣ ದಾಖಲಿಸಿಕೊಂಡಿತ್ತು. ಲೋಕಾಯುಕ್ತ ಪೊಲೀಸ್‌ ವಿಭಾಗವು ನಡೆಸಿದ ಪರಿಶೀಲನೆಯ ನಂತರ ನಗರದ ವಿವಿಧೆಡೆ ಇರುವ 28 ವಿದ್ಯಾರ್ಥಿ ನಿಲಯಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆ ಪ್ರಕರಣಗಳ ತನಿಖೆಯ ಭಾಗವಾಗಿ ಲೋಕಾಯುಕ್ತರು, ಉಪ ಲೋಕಾಯುಕ್ತರು ಭೇಟಿ ನೀಡಿದಾಗ ವಿದ್ಯಾರ್ಥಿ ನಿಲಯಗಳಲ್ಲಿನ ಅವ್ಯವಸ್ಥೆಗಳ ಲೋಕವೇ ತೆರೆದುಕೊಂಡಿತು.

ADVERTISEMENT

ಎಂ.ಜಿ.ರಸ್ತೆಯಲ್ಲಿರುವ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದಾಗ ವಾರ್ಡನ್‌ ಮತ್ತು ಅಡುಗೆ ಸಹಾಯಕರು ತಮ್ಮಲ್ಲಿರುವ ವ್ಯವಸ್ಥೆಗಳು ಉತ್ತಮವಾಗಿವೆ ಎಂದು ಮಾಹಿತಿ ನೀಡಿದರು. ಆದರೆ ಲೋಕಾಯುಕ್ತರು ಪರಿಶೀಲನೆ ನಡೆಸಿದಾಗ ಸ್ವಚ್ಛತೆ ಇರದಿರುವುದು, ವಿದ್ಯಾರ್ಥಿಗಳು ಕಿಕ್ಕಿರಿದು ತುಂಬಿರುವುದನ್ನು ಕಂಡರು. ತಕ್ಷಣವೇ ವಾರ್ಡನ್‌ ಮತ್ತು ಅಡುಗೆ ಸಹಾಯಕರನ್ನು ಹೊರಗಡೆ ಕಳುಹಿಸಿ, ಎಲ್ಲ ವಿದ್ಯಾರ್ಥಿಗಳನ್ನು ಕರೆಯಿಸಿ ಮಾಹಿತಿ ಪಡೆದುಕೊಂಡರು.

ಸಮಾಜ ಕಲ್ಯಾಣ ಇಲಾಖೆಯು ಯಲಹಂಕ ಮತ್ತು ಕೊಡಿಗೆಹಳ್ಳಿಯಲ್ಲಿ ನಡೆಸುತ್ತಿರುವ ಸರ್ಕಾರಿ ಮೆಟ್ರಿಕ್‌ ನಂತರ, ಸ್ನಾತಕೋತ್ತರ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಭೇಟಿ ನೀಡಿದಾಗಲೂ ಇಂಥದ್ದೇ ದೂರುಗಳು ಬಂದವು. ಉಪ ಲೋಕಾಯುಕ್ತ ಕೆ.ಎನ್‌.ಫಣೀಂದ್ರ ಅವರು ಭೇಟಿ ನೀಡಿದ, ವಿಜಯನಗರದ ಮನುವನ ಬಳಿ ಇರುವ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳ ಪರಿಸ್ಥಿತಿ ಭಿನ್ನವಾಗೇನೂ ಇರಲಿಲ್ಲ.

ಎಂ.ಜಿ.ರಸ್ತೆಯಲ್ಲಿರುವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾರ್ಡನ್‌ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ ಅವರು ತರಾಟೆಗೆ ತೆಗೆದುಕೊಂಡರು

ಬಾಲಕಿಯರ ಸ್ನಾನದ ಮನೆ ಕಿಟಿಕಿಗೆ ಮರೆಯೇ ಇಲ್ಲ

ವಿಜಯನಗರದ ಮನುವನ ಬಳಿ ಇರುವ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಸ್ನಾನದ ಮನೆಗಳಿಗೆ ದೊಡ್ಡ ಕಿಟಕಿಗಳಿವೆ. ಆದರೆ ಅವುಗಳಿಗೆ ಅರೆಪಾರದರ್ಶಕ ಗಾಜು ಅಥವಾ ಯಾವುದೇ ರೀತಿಯ ಮರೆ ಇರುವುದಿಲ್ಲ. ಇದನ್ನು ಕೂಡಲೇ ಸರಿಪಡಿಸಿ ಎಂದು ಉಪ ಲೋಕಾಯುಕ್ತ ಕೆ.ಎನ್‌.ಫಣೀಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಕೊಳಕು–ಮುರುಕು ಪಾತ್ರೆಯಲ್ಲಿ ಅಡುಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಯಲಹಂಕದ ಬಾಲಕಿಯರ ವಿದ್ಯಾರ್ಥಿ ನಿಲಯದ ಅಡುಗೆ ಮನೆಗೆ ಭೇಟಿ ನೀಡಿದರು.

ಈ ವೇಳೆ ತೀರಾ ಕೊಳಕಾಗಿದ್ದ ಮತ್ತು ಮುಕ್ಕಾಗಿದ್ದ ಪಾತ್ರೆಯಲ್ಲಿ ಕಾಫಿ ಕಾಯಿಸಿಟ್ಟಿರುವುದು ಕಂಡು ಬಂತು. ಜತೆಗೆ ಅಡುಗೆ ಮನೆಯ ತುಂಬೆಲ್ಲಾ ಕೊಳಕು ಇತ್ತು. ಆದರೆ ಸ್ವಚ್ಛವಾಗಿ ಮತ್ತು ಉತ್ತಮ ಸ್ಥಿತಿಯಲ್ಲಿದ್ದ ಪಾತ್ರೆಗಳನ್ನು ಬಳಸದೆ ಅಟ್ಟದ ಮೇಲೆ ಜೋಡಿಸಿಡಲಾಗಿತ್ತು. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಉಪ ಲೋಕಾಯುಕ್ತರು ಲೋಪಗಳನ್ನು ತಕ್ಷಣವೇ ಸರಿಪಡಿಸಿ ಎಂದು ವಾರ್ಡನ್‌ಗೆ ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.