ADVERTISEMENT

ಐಎಂಎ ಮಾಲೀಕನ ₹ 485 ಕೋಟಿ ಮೌಲ್ಯದ ಆಸ್ತಿ ಪತ್ತೆ

ಕಂಪನಿ ವಿರುದ್ಧ 33,600 ದೂರು ದಾಖಲು; ಚುರುಕುಗೊಂಡ ಎಸ್‌ಐಟಿ ತನಿಖೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 20:15 IST
Last Updated 15 ಜೂನ್ 2019, 20:15 IST
   

ಬೆಂಗಳೂರು: ‘ಐಎಂಎಸಮೂಹ’ ಕಂಪನಿ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು, ಕಂಪನಿಯ ಮಾಲೀಕ ಮನ್ಸೂರ್ ಖಾನ್‌ ಹೆಸರಿಗಿರುವ ₹ 485 ಕೋಟಿ ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.

ರಾಜ್ಯ ಸರ್ಕಾರದ ಆದೇಶದಂತೆ ತನಿಖೆ ಕೈಗೆತ್ತಿಕೊಂಡಿರುವ ಎಸ್‌ಐಟಿ, ಆರೋಪಿಯ 11 ಆಸ್ತಿಗಳನ್ನು ಗುರುತು ಮಾಡಿದೆ. ಆ ಬಗ್ಗೆ ದಾಖಲೆಗಳನ್ನೂ ಕಲೆ ಹಾಕಿದೆ ಎಂದು ಗೊತ್ತಾಗಿದೆ.

ಕಂಪನಿಯ ಲೆಕ್ಕಪರಿಶೋಧಕ ಇಕ್ಬಾಲ್‌ ವಿಚಾರಣೆಯಿಂದಾಗಿ ಅಧಿಕಾರಿಗಳಿಗೆ ಮಹತ್ವದ ಮಾಹಿತಿಗಳು ಸಿಕ್ಕಿವೆ. ಅದನ್ನು ಆಧರಿಸಿ ಆರೋಪಿ, ಆತನ ಸಂಬಂಧಿಕರು ಹಾಗೂ ಕಂಪನಿ ಹೆಸರಿಗಿದ್ದ 45 ಬ್ಯಾಂಕ್‌ ಖಾತೆಗಳನ್ನು ಪತ್ತೆ ಮಾಡಲಾಗಿದೆ. ಅವುಗಳನ್ನು ಜಪ್ತಿ ಮಾಡಲು ಸಹ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

33,600 ದೂರು: ಕಂಪನಿ ವಿರುದ್ಧ ಶನಿವಾರದ ಅಂತ್ಯಕ್ಕೆ 33,600 ದೂರುಗಳು ದಾಖಲಾಗಿವೆ.

ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವು ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ ಜನರು ಬಂದು ಕಂಪನಿ ವಿರುದ್ಧ ದೂರು ನೀಡುತ್ತಿದ್ದಾರೆ. ಅದಕ್ಕಾಗಿಯೇ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು, ಪ್ರತ್ಯೇಕ ಕೌಂಟರ್‌ಗಳನ್ನು ತೆರೆದು ದೂರು ಸ್ವೀಕರಿಸುತ್ತಿದ್ದಾರೆ. ಶನಿವಾರವೂ 3 ಸಾವಿರಕ್ಕೂ ಹೆಚ್ಚು ಹೂಡಿಕೆದಾರರು ದೂರು ಸಲ್ಲಿಸಿದರು.

‘ನಿತ್ಯವೂ ಜನ ಕೌಂಟರ್‌ ಬಳಿ ಸರದಿಯಲ್ಲಿ ನಿಂತು ದೂರು ನೀಡುತ್ತಿದ್ದಾರೆ. ಮೊದಲೆರಡು ದಿನಕ್ಕಿಂತ ಶನಿವಾರ ಸರದಿ ಕಡಿಮೆ ಇತ್ತು. ಭಾನುವಾರವೂ ಜನ ಬರುವ ನಿರೀಕ್ಷೆ ಇದ್ದು, ಹೆಚ್ಚಿನ ಸಿಬ್ಬಂದಿಯನ್ನು ಕೌಂಟರ್‌ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ದೂರು ಪಡೆಯುವ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕವೇ, ಕಂಪನಿಯಿಂದ ವಂಚನೆಯಾದ ಮೊತ್ತವೆಷ್ಟು ಎಂಬುದನ್ನು ಲೆಕ್ಕ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ಜಾಮೀನು ಅರ್ಜಿ ಸಲ್ಲಿಕೆ: ಪ್ರಕರಣದಲ್ಲಿ ಬಂಧಿತರಾಗಿರುವ ಕಂಪನಿಯ 7 ನಿರ್ದೇಶಕರು, ಜಾಮೀನು ಕೋರಿ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ನ್ಯಾಯಾಲಯ ಪುರಸ್ಕರಿಸಿದ ನಂತರವೇ ವಿಚಾರಣೆ ಆರಂಭವಾಗಲಿದೆ.

ಸಾರ್ವಜನಿಕ ಸಂಪರ್ಕಾಧಿಕಾರಿ ನೇಮಕ

ವಿಶೇಷ ತನಿಖಾ ದಳದ (ಎಸ್‌ಐಟಿ) ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಇನ್‌ಸ್ಪೆಕ್ಟರ್ ಎಂ.ಎ.ಮೊಹಮ್ಮದ್ ಅವರನ್ನು ನೇಮಕ ಮಾಡಲಾಗಿದೆ.

ಹೂಡಿಕೆದಾರರಿಂದ ಮಾಹಿತಿ ಪಡೆಯಲು ಹಾಗೂ ಪ್ರಕರಣದ ತನಿಖೆಯ ಮಾಹಿತಿ ಹಂಚಿಕೊಳ್ಳಲು ಸಾರ್ವಜನಿಕ ಸಂಪರ್ಕ ಅಧಿಕಾರಿಯನ್ನು ನೇಮಿಸಲಾಗಿದೆ. ಅವರ ಸಂಪರ್ಕಕ್ಕಾಗಿ84312–75375. policehelp.ima@gmail.com.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.