ADVERTISEMENT

ಜಪಾನ್‌ ಕಂಪನಿಗಳಿಂದ ₹4 ಸಾವಿರ ಕೋಟಿ ಹೂಡಿಕೆ ಖಾತ್ರಿ: ಸಚಿವ ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 14:14 IST
Last Updated 15 ಸೆಪ್ಟೆಂಬರ್ 2025, 14:14 IST
ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ   

ಬೆಂಗಳೂರು: ‘ಕಳೆದ ವಾರ ಕೈಗೊಂಡ ಜಪಾನ್‌ ಭೇಟಿಯ ಪರಿಣಾಮ, ಆ ದೇಶದ ವಿವಿಧ ಉದ್ಯಮಗಳು ರಾಜ್ಯದಲ್ಲಿ ₹ 4 ಸಾವಿರ ಕೋಟಿಗೂ ಹೆಚ್ಚು ಹೂಡಿಕೆ ಮಾಡುವುದು ಖಾತ್ರಿಯಾಗಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಹೂಡಿಕೆ ಆಕರ್ಷಿಸುವ ದೃಷ್ಟಿಯಿಂದ ಜಪಾನ್‌ಗೆ ಎರಡನೇ ಬಾರಿಗೆ ಭೇಟಿ ನೀಡಲಾಗಿತ್ತು. ಜಪಾನಿನ ಉದ್ಯಮಗಳ ಪ್ರಮುಖರು ಸಾಂಪ್ರದಾಯಿಕ ಆಲೋಚನೆ ಇರುವವರು. ಅವರು ಯೋಚಿಸಿ ನಿರ್ಧಾರಕ್ಕೆ ಬರುತ್ತಾರೆ. ದೇಶದಲ್ಲಿರುವ ಜಪಾನ್‌ನ ಉದ್ದಿಮೆಗಳಲ್ಲಿ ಶೇಕಡ 50ರಷ್ಟು ಕಂಪನಿಗಳು ಕರ್ನಾಟಕದಲ್ಲೇ ಇವೆ. ಹಿಂದೆ ನಾನು ಜಪಾನ್‌ ಮತ್ತು ದಕ್ಷಿಣ ಕೊರಿಯಾಗೆ ಭೇಟಿ ನೀಡಿದ್ದಾಗ ₹ 6,500 ಕೋಟಿ ಮೊತ್ತದ ಹೂಡಿಕೆ ಸೆಳೆಯಲಾಗಿತ್ತು’ ಎಂದರು.

‘ಈ ಬಾರಿಯ ಭೇಟಿಯಲ್ಲಿ ಹೋಂಡಾ ಮುಂತಾದ ಕಂಪನಿಗಳು ರಾಜ್ಯದಲ್ಲಿ ವಿಸ್ತರಣೆ, ಮುಕುಂದ್‌ ಸುಮಿ ಸ್ಟೀಲ್ಸ್‌ ಕಂಪನಿ ಜತೆ ಸಹಭಾಗಿತ್ವ ಮುಂತಾದ ವಿಚಾರ ಕುರಿತು ಚರ್ಚಿಸಲಾಗಿದೆ. ಈ ಮಧ್ಯೆ, ಅಮೆರಿಕವು ಎಲೆಕ್ಟ್ರಾನಿಕ್‌ ಮತ್ತು ಫಾರ್ಮಾ ಉತ್ಪನ್ನಗಳನ್ನು ಬಿಟ್ಟು ಭಾರತದ ಉಳಿದ ಉತ್ಪನ್ನಗಳ ಮೇಲೆ ಶೇ 50ರಷ್ಟು ಆಮದು ಸುಂಕ ವಿಧಿಸಿದೆ. ಇದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲಿ ಹೂಡಿಕೆದಾರರು ನಿರ್ಧಾರಕ್ಕೆ ಬರುವುದು ಕಷ್ಟವಾಗುತ್ತದೆ’ ಎಂದರು.

ADVERTISEMENT

‘ಕೆಲವು ಕಂಪನಿಗಳು ರಾಜ್ಯದಲ್ಲಿ ಕಡಿಮೆ ಬಂಡವಾಳ ಹೂಡಬಹುದು. ಆದರೆ, ಅವೆಲ್ಲವೂ ನಮ್ಮ ಕೈಗಾರಿಕಾ ಕಾರ್ಯ ಪರಿಸರದ ಮೌಲ್ಯವರ್ಧನೆಗೆ ಅನುಕೂಲ ಆಗಲಿದೆ. ಜೊತೆಗೆ, ಉದ್ದಿಮೆದಾರರು ಹೂಡಿಕೆಯ ವಿಚಾರಕ್ಕೆ ಬಂದಾಗ ಶಾಂತಿಯುತ ವಾತಾವರಣ ಇಷ್ಟಪಡುತ್ತಾರೆ. ಇದನ್ನು ಕೂಡ ಎಲ್ಲರೂ ಗಮನಕ್ಕೆ ತೆಗೆದುಕೊಳ್ಳಬೇಕು. ದೇಶದ ಯಾವ ಭಾಗದಲ್ಲೂ ಹೂಡಿಕೆಗೆ ಪ್ರತಿಕೂಲ ಎನಿಸುವಂಥ ಪರಿಸ್ಥಿತಿ ನಿರ್ಮಾಣ ಆಗಬಾರದು’ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.