ಎಂ.ಬಿ. ಪಾಟೀಲ
ಬೆಂಗಳೂರು: ಜಪಾನ್ ಹಾಗೂ ದಕ್ಷಿಣ ಕೊರಿಯಾ ಕಂಪನಿಗಳಿಂದ ಕರ್ನಾಟಕಕ್ಕೆ ₹6,450 ಕೋಟಿ ಹೂಡಿಕೆ ಹರಿದುಬರಲಿದೆ. ಇದರಿಂದ ಒಂದು ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
‘ಕರ್ನಾಟಕದ ಉನ್ನತ ಮಟ್ಟದ ನಿಯೋಗ ಈ ಎರಡೂ ದೇಶಗಳಿಗೆ ಎರಡು ವಾರ (ಜೂನ್ 24–ಜುಲೈ 5) ನೀಡಿದ ಭೇಟಿಯ ಫಲವಾಗಿ ದೊಡ್ಡ ಪ್ರಮಾಣದ ಹೂಡಿಕೆ ಸೆಳೆಯುವಲ್ಲಿ ಯಶ ಕಂಡಿದ್ದೇವೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಎರಡೂ ದೇಶಗಳ 35ಕ್ಕೂ ಹೆಚ್ಚು ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಯಿತು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗಾಗಿ (ಎಸ್‌ಎಂಇ) ಬಂಡವಾಳ ಹೂಡಿಕೆಯ ರೋಡ್ ಶೋ ಆಯೋಜಿಸಲಾಗಿತ್ತು’ ಎಂದರು.
ತಯಾರಿಕಾ ವಲಯಕ್ಕೆ ರಾಜ್ಯದಲ್ಲಿರುವ ಅನುಕೂಲಕರ ವಾತಾವರಣ, ಮೂಲ ಸೌಲಭ್ಯ ಕುರಿತು ಅಲ್ಲಿನ ಕಂಪನಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ‘ಇನ್ವೆಸ್ಟ್ ಕರ್ನಾಟಕ–2025’ರಲ್ಲಿ ಭಾಗವಹಿಸಲು 200ಕ್ಕೂ ಹೆಚ್ಚು ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ’ ಎಂದರು.
ಒಸಾಕಾ ಗ್ಯಾಸ್ ಕಂಪನಿ ಮುಂದಿನ 5 ವರ್ಷಗಳಲ್ಲಿ ಅನಿಲ ವಿತರಣಾ ಮೂಲ ಸೌಲಭ್ಯ ವಿಸ್ತರಿಸಲು ₹5 ಸಾವಿರ ಕೋಟಿ, ಕೊರಿಯಾದ ಡಿಎನ್ ಸೆಲ್ಯೂಷನ್ಸ್ ಕೈಗಾರಿಕಾ ಯಂತ್ರೋಪಕರಣಗಳು ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ತಯಾರಿಕಾ ಘಟಕ ಸ್ಥಾಪಿಸಲು ₹1 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಎಂದು ತಿಳಿಸಿದರು.
ವಾಹನ ಬಿಡಿಭಾಗಗಳನ್ನು ಪೂರೈಸುವ ಜಪಾನಿನ ಅವೊಯಮಾ ಸೈಸಕುಶೊ ಕಂಪನಿಯು ತುಮಕೂರು ಬಳಿಯ ಜಪಾನ್ ಕೈಗಾರಿಕಾ ಟೌನ್‌ಶಿಪ್‌ನಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ₹210 ಕೋಟಿ, ಡೈಕಿ ಆ್ಯಕ್ಸಿಸ್ ಹೈವಿಷನ್ ಮತ್ತು ಇಎಂಎನ್‌ಐ ಕಂಪನಿಯು, ಬ್ಯಾಟರಿ ಸೆಲ್‌ಗಳ ಸಂಗ್ರಹ ಮತ್ತು ಪರೀಕ್ಷಾ ಕೇಂದ್ರ ಹಾಗೂ ಪರಿಸರ ಸಂರಕ್ಷಣೆ ಸಲಕರಣೆ ತಯಾರಿಸುವ ಘಟಕ ಸ್ಥಾಪಿಸಲು ₹210 ಕೋಟಿ ಹೂಡಿಕೆ ಮಾಡಲಿವೆ ಎಂದರು.
ವಾಹನ ತಯಾರಿಕೆ, ಎಲೆಕ್ಟ್ರಾನಿಕ್ಸ್, ಇಂಧನ ಪರಿಹಾರ ವಲಯಗಳಲ್ಲಿ ₹25 ಸಾವಿರ ಕೋಟಿ ಮೊತ್ತದ ಬಂಡವಾಳ ಹೂಡಿಕೆಯ ಸಾಧ್ಯತೆಗಳನ್ನು ರಾಜ್ಯದ ನಿಯೋಗ ಗುರುತಿಸಿದೆ ಎಂದು ವಿವರಿಸಿದರು.
ಕರ್ನಾಟಕ ಹೊಸ ವಿಮಾನ ನಿಲ್ದಾಣದ ಪ್ರಸ್ತಾವ ಘೋಷಣೆ ಮಾಡಿದ ನಂತರ ತಮಿಳುನಾಡು ಸಹ ಹೊಸೂರು ಬಳಿ ನೂತನ ವಿಮಾನ ನಿಲ್ದಾಣ ಆರಂಭಿಸುವುದಾಗಿ ಹೇಳಿದೆ. ಹೊಸೂರು ಬಳಿ ನಿಲ್ದಾಣವಾದರೆ ಕರ್ನಾಟಕಕ್ಕೆ ಯಾವ ತೊಂದರೆಯೂ ಇಲ್ಲ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ವಾರ್ಷಿಕವಾಗಿ 10 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಮತ್ತೊಂದು ವಿಮಾನ ನಿಲ್ದಾಣ ಬೆಂಗಳೂರು ನಗರಕ್ಕೆ ಅಗತ್ಯವಿದ್ದು 5 ಸಾವಿರ ಎಕರೆ ಜಮೀನು ಬೇಕಿದೆ. ಕನಕಪುರ ರಸ್ತೆ ಮೈಸೂರು ರಸ್ತೆ ಮಾಗಡಿ ದೊಡ್ಡಬಳ್ಳಾಪುರ ದಾಬಸ್‌ಪೇಟೆ ತುಮಕೂರು ಬಳಿ ಸ್ಥಳ ಗುರುತಿಸಲಾಗುತ್ತಿದೆ ಎಂದರು.
ಈಗಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ದೆಹಲಿ ಮತ್ತು ಮುಂಬೈ ನಂತರದ ಅತಿದಟ್ಟಣೆಯ ಮೂರನೇ ನಿಲ್ದಾಣವಾಗಿದೆ. ವರ್ಷಕ್ಕೆ 5.2 ಕೋಟಿ ಪ್ರಯಾಣಿಕರನ್ನು ನಿರ್ವಹಿಸುತ್ತಿದೆ. ಎರಡು ರನ್ ವೇ ಇದ್ದು ಅಲ್ಲಿ ವಿಸ್ತರಣೆ ಸಾಧ್ಯವಿಲ್ಲ ಎಂದರು.
ರಾಜ್ಯದ ಕೈಗಾರಿಕಾ ವಲಯದ ಅಭಿವೃದ್ಧಿಗೆ ಕೇಂದ್ರದ ನೆರವು ಕೋರಲಾಗುವುದು. ಸಚಿವ ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗುವುದು.–ಎಂ.ಬಿ. ಪಾಟೀಲ, ಬೃಹತ್ ಕೈಗಾರಿಕಾ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.