ADVERTISEMENT

ನಿಂತ ನೆಲದಲ್ಲೇ ಕುಸಿದು ಬಿದ್ದ ಜೆಡಿಎಸ್‌: ಭದ್ರಕೋಟೆ ಹಳೇ ಮೈಸೂರಲ್ಲೇ ಮುಖಭಂಗ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 11:33 IST
Last Updated 14 ಡಿಸೆಂಬರ್ 2021, 11:33 IST
   

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಸ್ಪರ್ಧಿಸಿದ್ದ 6 ಕ್ಷೇತ್ರಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಗೆದ್ದಿದ್ದು, ಇನ್ನುಳಿದೆಡೆ ಮುಖಭಂಗ ಅನುಭವಿಸಿದೆ.

ತನ್ನ ಪ್ರಾಬಲ್ಯ ಅಧಿಕವಾಗಿರುವ ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಮೈಸೂರುಗಳಲ್ಲಿ ಮಾತ್ರ ಜೆಡಿಎಸ್‌ ಸ್ಪರ್ಧೆ ಮಾಡಿತ್ತು. ಇನ್ನುಳಿದಂತೆ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಜೆಡಿಎಸ್‌ ತಿಳಿಸಿತ್ತು. ಕೊಡಗಿನಲ್ಲಿ ಪಕ್ಷದ ಅಭ್ಯರ್ಥಿ ನಾಮಪತ್ರ ಹಿಂಪಡೆದು ಕಾಂಗ್ರೆಸ್‌ಗೆ ಬಂಬಲ ನೀಡಿದ್ದರು.

ದೇವೇಗೌಡರ ರಾಜಕೀಯ ತವರು ಮನೆ ಹಾಸನದಲ್ಲಿ ಜೆಡಿಎಸ್‌ ಭಾರಿ ಅಂತರದ ಜಯ ದಾಖಲಿಸಿದೆ. ಗಮನಿಸಬೇಕಾದ ಅಂಶವೆಂದರೆ, 2015ರಲ್ಲಿ ನಡೆದಿದ್ದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ ಹಾಸನವನ್ನು ಕಳೆದುಕೊಂಡು ಇನ್ನುಳಿದ ಕಡೆ ಉತ್ತಮ ಸಾಧನೆ ಮಾಡಿತ್ತು.

ADVERTISEMENT

ಹಾಸನ ನಂತರ ಜೆಡಿಎಸ್‌ ಭದ್ರಕೋಟೆ ಎಂದು ಕರೆಸಿಕೊಳ್ಳುವ ಮಂಡ್ಯದಲ್ಲಿ ಪಕ್ಷ ಮರ್ಮಾಘಾತ ಅನುಭವಿಸಿದೆ. ಕೊನೇ ಕ್ಷಣದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದ ದಿನೇಶ್‌ ಗೂಳಿಗೌಡ ಅವರ ವಿರುದ್ಧ, ವಿಧಾನ ಪರಿಷತ್‌ನ ಹಾಲಿ ಸದಸ್ಯರಾಗಿದ್ದ ಜೆಡಿಎಸ್‌ ಅಭ್ಯರ್ಥಿ ಅಪ್ಪಾಜಿ ಗೌಡ ಅವರು ಸೋತಿದ್ದಾರೆ. 7 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಂಡ್ಯದಲ್ಲಿ, ದಳದ 6 ಶಾಸಕರಿದ್ದರೂ ಗೆಲುವು ಸಿಕ್ಕಿಲ್ಲ.

ಜಿ.ಟಿ ದೇವೇಗೌಡ, ಸಂದೇಶ್‌ ನಾಗರಾಜ್‌ ಮತ್ತು ಎಚ್‌.ಡಿ ಕುಮಾರಸ್ವಾಮಿ ಅವರ ಬಹಿರಂಗ ಕಿತ್ತಾಟದ ಕಾರಣಕ್ಕೆ ಮೈಸೂರು ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದೆ. ಈ ಕಿತ್ತಾಟವು ಪರಿಷತ್‌ ಚುನಾವಣೆ ಮೇಲೆ ಪ್ರಭಾವ ಬೀರಿರುವ ಲಕ್ಷಣಗಳು ಕಾಣಿಸುತ್ತಿವೆ. ದ್ವಿಸದಸ್ಯ ಕ್ಷೇತ್ರವಾಗಿರುವ ಮೈಸೂರಿನಲ್ಲಿ ಜೆಡಿಎಸ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಿಟ್ಟಿದೆ. ಹಿಂದಿನ ಚುನಾವಣೆಯಲ್ಲಿ ಜೆಡಿಎಸ್‌ ಇಲ್ಲಿ ಒಂದು ಸ್ಥಾನ ಗಳಿಸಿತ್ತು.

ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರಿಗೆ ಎದುರಾದಸೋಲಿಗೆ ಪ್ರತಿಕಾರ ತುಮಕೂರು ಪರಿಷತ್‌ ಚುನಾವಣೆಯಲ್ಲಿಪಡೆಯುವುದಾಗಿಜೆಡಿಎಸ್‌ಚುನಾವಣೆ ಪ್ರಚಾರದ ವೇಳೆ ಹೇಳಿತ್ತು. ಅದಕ್ಕಾಗಿ ಸರ್ಕಾರಿ ಅಧಿಕಾರಿ ಅನಿಲ್‌ ಕುಮಾರ್‌ ಅವರಿಂದ ರಾಜೀನಾಮೆ ಕೊಡಿಸಿದ್ದ ಜೆಡಿಎಸ್‌ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಿತ್ತು. ಆದರೆ, ಅಲ್ಲಿಯೂ ಗೆಲುವು ಸಿಕ್ಕಿಲ್ಲ. ತುಮಕೂರಿನಲ್ಲಿ ಕಾಂಗ್ರೆಸ್‌ ಗೆದ್ದಿದ್ದರೆ, ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಜೆಡಿಎಸ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಲೋಕಸಭೆ ಚುನಾವಣೆ ಸೋಲಿನ ಪ್ರತಿಕಾರ ಪಡೆಯುವ ಜೆಡಿಎಸ್‌ನ ಪ್ರಯತ್ನ ವಿಫಲವಾಗಿದೆ.

ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಅಚ್ಚರಿ ಎಂಬಂತೆ ಗೆಲುವು ಸಾಧಿಸಿದ್ದ ಬೆಮೆಲ್‌ ಕಾಂತರಾಜು ಈ ಬಾರಿ ಪಕ್ಷದಿಂದ ತೊರೆದಿದ್ದೂ ಜೆಡಿಎಸ್‌ಗೆ ಪ್ರತಿಕೂಲವಾಗಿರುವ ಸಾಧ್ಯತೆಗಳಿವೆ.

ಕಳೆದ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸ್ವಲ್ಪದರಲ್ಲಿ ಜೆಡಿಎಸ್‌ನ ಕೈಜಾರಿತ್ತು. ಈ ಬಾರಿ ಗೆಲುವಿನ ನಿರೀಕ್ಷೆಯಲ್ಲೇ ವಿಧಾನ ಪರಿಷತ್‌ ಹಾಲಿ ಸದಸ್ಯ ರಮೇಶ್‌ ಗೌಡ ಅವರಿಗೆ ಜೆಡಿಎಸ್‌ ಟಿಕೆಟ್‌ ನೀಡಿತ್ತಾದರೂ, ಕಾಂಗ್ರೆಸ್‌ ಅಭ್ಯರ್ಥಿ ರವಿ ಅವರ ವಿರುದ್ಧ ಜೆಡಿಎಸ್‌ ಅಭ್ಯರ್ಥಿ ಸೋತಿದ್ದಾರೆ.

ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಮತ್ತು ಕುಮಾರಸ್ವಾಮಿ ಇಬ್ಬರಿಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರವೇ ರಾಜಕೀಯ ಅಖಾಡ. ಹೀಗಾಗಿ ಇಲ್ಲಿನ ಫಲಿತಾಂಶ ರಾಜಕೀಯವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ.

ಇನ್ನು ಕೋಲಾರದಲ್ಲೂ ಜೆಡಿಎಸ್‌ಗೆ ಗೆಲುವಿನ ಸವಿ ಸಿಕ್ಕಿಲ್ಲ. ಚುನಾವಣೆಗೂ ಮೊದಲೇ ಹಾಲಿ ಸದಸ್ಯ ಮನೋಹರ್‌ ಪಕ್ಷ ತೊರೆದು ಹೋದರು. ಕೋಲಾರದ ಶಾಸಕ ಶ್ರೀನಿವಾಸ ಗೌಡ ಅವರು ತಾವು ಮುಂದಿನ ಚುನಾವಣೆ ಹೊತ್ತಿಗೆ ಕಾಂಗ್ರೆಸ್‌ ಸೇರುವುದಾಗಿ ಹೇಳಿಕೊಂಡಿದ್ದರು. ಇವೆಲ್ಲವೂ ಫಲಿತಾಂಶದ ಮೇಲೆ ಪ್ರಭಾವ ಬೀರಿರುವ ಸಾಧ್ಯತೆಗಳಿವೆ.

ಅಂತಿಮವಾಗಿ ಜೆಡಿಎಸ್‌ ತಾನಿರುವ ಕಡೆಯಲ್ಲೇ ನೆಲಕಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.