ADVERTISEMENT

ಜಿಂದಾಲ್‌ಗೆ ಭೂಮಿ: ‘ಮೈತ್ರಿ’ ಪಕ್ಷದಲ್ಲೂ ಹೆಚ್ಚಿದ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 19:46 IST
Last Updated 18 ಜೂನ್ 2019, 19:46 IST
   

ಬೆಂಗಳೂರು: ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ಮಾಡುವುದನ್ನು ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಹೋರಾಟ ತೀವ್ರಗೊಳಿಸಲು ಮುಂದಾಗಿದ್ದು, ದಿನಗಳು ಕಳೆದಂತೆ ಸರ್ಕಾರದ ‘ಮೈತ್ರಿ’ ಪಕ್ಷಗಳಲ್ಲೂ ವಿರೋಧ ಹೆಚ್ಚುತ್ತಿದೆ.

ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ, ಬಳ್ಳಾರಿಯ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸಿದ ಬೆನ್ನಿಗೇ ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಸಹ ಗುಡುಗಿದ್ದಾರೆ. ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮೌನವಹಿಸಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

‘ಗಣಿ ಲೂಟಿ ಮಾಡಿದ ಹಣವನ್ನು ವಾಪಸ್ ತರುವುದಾಗಿ ಹೇಳಿ, ಸಿದ್ದರಾಮಯ್ಯ ತೊಡೆ ತಟ್ಟಿದ್ದರು. 350 ಕಿ.ಮೀ ಪಾದಯಾತ್ರೆ ಮಾಡಿ, ಮುಖ್ಯಮಂತ್ರಿಯಾದ ನಂತರವೂ ಬೊಕ್ಕಸಕ್ಕೆ ಒಂದು ರೂಪಾಯಿ ಸಹ ತರಲಿಲ್ಲ. ತೊಡೆತಟ್ಟಿದವರಿಗೆ ಈಗ ಏನಾಗಿದೆ’ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್‌ ವಾಗ್ದಾಳಿ ಮುಂದುವರಿಸಿದ್ದಾರೆ.

ADVERTISEMENT

‘ಈ ಸರ್ಕಾರದಲ್ಲಿ ಮಂತ್ರಿಗಳ ಮಂತ್ರಿ ಸಿದ್ದರಾಮಯ್ಯ. ಆದರೆ ಸರ್ಕಾರದ ಭಾಗವಲ್ಲ ಎಂದು ಹೇಗೆ ಹೇಳುತ್ತಿದ್ದೀರಿ’ ಎಂದು ಸುದ್ದಿಗಾರರೊಂದಿಗೆ ಮಾತನಾಡಿ ಪ್ರಶ್ನಿಸಿದರು.

ಅಧಿವೇಶನಕ್ಕೆ ಆಗ್ರಹ:

ಜಿಂದಾಲ್‌ಗೆ ಭೂಮಿ ಮಾರಾಟ,ಐಎಂಎ ಸಮೂಹ ಕಂಪನಿ ವಂಚನೆ ಪ್ರಕರಣದ ವಿಸ್ತೃತ ಚರ್ಚೆಗೆ ತುರ್ತಾಗಿ ವಿಧಾನಸಭೆ ಅಧಿವೇಶನ ಕರೆಯುವಂತೆ ಬಿಜೆಪಿ ಶಾಸಕ ಆರ್.ಅಶೋಕ್ ಇಲ್ಲಿ ಮಂಗಳವಾರ ಒತ್ತಾಯಿಸಿದರು.

ಜಿಂದಾಲ್‌ಗೆ ಜಮೀನು ನೀಡುವ ನಿರ್ಧಾರದ ಪುನರ್ ಪರಿಶೀಲನೆಗೆ ಸಚಿವ ಸಂಪುಟ ಉಪಸಮಿತಿ ರಚಿಸುವ ಅಗತ್ಯವಿರಲಿಲ್ಲ. ಸಮಿತಿ ನೀಡುವ ವರದಿಯನ್ನು ಒಪ್ಪುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ದಿನೇಶ್ ಸಮರ್ಥನೆ:ಜಿಂದಲ್‌ಗೆ ಭೂಮಿ ನೀಡುವ ಸರ್ಕಾರದ ನಿರ್ಧಾರವನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ. ‘ಹಿಂದೆ ಬಿ.ಎಸ್.ಯಡಿಯೂರಪ್ಪ ಹಣಕಾಸು ಸಚಿವರಾಗಿದ್ದಾಗ ಹಾಗೂ ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿ ಆಗಿದ್ದ ವೇಳೆ ಜಿಂದಾಲ್‌ಗೆ ಭೂಮಿ ಕೊಡುವ ಒಪ್ಪಂದ ಆಗಿದೆ. ನಮ್ಮ ಸರ್ಕಾರ ಕೈಗೊಂಡ ನಿರ್ಧಾರವಲ್ಲ’ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿ, ಭೂಮಿ ನೀಡುವ ಒಪ್ಪಂದ ನಡೆದಾಗ ಸಿಂಗ್ ಬಿಜೆಪಿಯಲ್ಲಿ ಇದ್ದರು. ಆನಂದ್ ಸಿಂಗ್, ಅನಿಲ್ ಲಾಡ್ ಬಳಿ ಏನಾದರೂ ಮಾಹಿತಿ ಇದ್ದರೆ ಸಂಪುಟ ಉಪಸಮಿತಿ ಮುಂದೆ ಮಂಡಿಸಲಿ’ ಎಂದು ಸಲಹೆ ಮಾಡಿದ್ದಾರೆ.

ಮುಖ್ಯಮಂತ್ರಿ ಸುಳ್ಳು ಹೇಳುತ್ತಾರೆ– ಬಿಎಸ್‌ವೈ
‘ಮುಖ್ಯಮಂತ್ರಿ ಸುಳ್ಳು ಹೇಳುತ್ತಿದ್ದಾರೆ, ಇಲ್ಲವೆ ಅವರು ಅಜ್ಞಾನಿಯಾಗಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಟ್ವೀಟ್‌ ಮೂಲಕ ಹರಿಹಾಯ್ದಿದ್ದಾರೆ.

‘ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಿಂದಾಲ್‌ನಿಂದ ₹ 20 ಕೋಟಿ ಹಣವನ್ನು ಚೆಕ್‌ ಮೂಲಕ ಪಡೆದಿದ್ದರು. ಈ ವಿಷಯವನ್ನು ನಾನೇ ಬಹಿರಂಗಪಡಿಸಿದ್ದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಹೇಳಿದ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ‘ನನ್ನ ಮತ್ತು ಕುಟುಂಬದ ಸದಸ್ಯರ ವಿರುದ್ಧ ಇದ್ದ ಆರೋಪಗಳು ಸಿಬಿಐ ನ್ಯಾಯಾಲಯದಲ್ಲಿ ಖುಲಾಸೆಯಾಗಿವೆ. ಮುಖ್ಯಮಂತ್ರಿಯವರ ಹೇಳಿಕೆಯು ಸುಳ್ಳು ಮತ್ತು ರಾಜಕೀಯ ಪ್ರೇರಿತವಾದುದು’ ಎಂದು ತಿರುಗೇಟು ನೀಡಿದ್ದಾರೆ.

‘ಜಿಂದಾಲ್‌ಗೆ ಭೂಮಿ ನೀಡುವ ವಿಚಾರದಲ್ಲಿ ಕಂಪನಿಯೊಂದಿಗೆ ಲೀಸ್‌ ಡೀಡ್ ಮಾಡಿಕೊಂಡಿದ್ದು ಯಡಿಯೂರಪ್ಪ ಅವರ ಅವಧಿಯಲ್ಲಿ. ಈಗ ಜಿಂದಾಲ್‌ಗೆ ಭೂಮಿ ಕೊಡುವ ವಿಚಾರದಲ್ಲಿ ಅವರೇ ಹೋರಾಟ ನಡೆಸುತ್ತಿರುವುದು ವಿಪರ್ಯಾಸ’ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.