ADVERTISEMENT

ವಿಧಾನ ಪರಿಷತ್ ಕಲಾಪ: ಪ್ರತಿಧ್ವನಿಸಿದ ಕಾಡುಗೋಡಿ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 23:30 IST
Last Updated 12 ಆಗಸ್ಟ್ 2025, 23:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಕಾಡುಗೋಡಿ ಪ್ಲಾಂಟೇಷನ್‌ನ ಸರ್ವೆ ನಂಬರ್‌ 1ರಲ್ಲಿ 711 ಎಕರೆ ಇದ್ದರೂ, ಬಡ ರೈತರಿಗೆ ಸೇರಿದ 120 ಎಕರೆ ಕೃಷಿ ಜಮೀನನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ ಎಂಬ ವಿರೋಧ ಪಕ್ಷಗಳ ಆರೋಪ ವಿಧಾನಪರಿಷತ್‌ನಲ್ಲಿ ಎರಡು ಗಂಟೆಗಳ ಚರ್ಚೆಗೆ ದಾರಿ ಮಾಡಿಕೊಟ್ಟಿತು.

ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಸ್ವಾತಂತ್ರ್ಯ ಪೂರ್ವದಲ್ಲಿ (1901) ಕಾಡುಗೋಡಿಯ 711 ಎಕರೆಯನ್ನು ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಲಾಗಿತ್ತು. ಆರೇಳು ದಶಕಗಳ ಹಿಂದೆಯೇ ಇಲ್ಲಿ ಹಲವರಿಗೆ ಜಮೀನು ಮಂಜೂರು ಮಾಡಲಾಗಿತ್ತು. ರೈತರಿಗೆ ಪರಿಹಾರ ನೀಡಿ 153 ಎಕರೆಯನ್ನು ಭೂಸ್ವಾಧೀನಪಡಿಸಿಕೊಂಡಿದ್ದ ಕೆಐಎಡಿಬಿ, ಕೈಗಾರಿಕೆಗಳಿಗೆ ನೀಡಿದೆ. ರೈಲ್ವೆ ಯೋಜನೆಗೆ 228 ಎಕರೆ ನೀಡಲಾಗಿದೆ. ರಿಯಲ್‌ ಎಸ್ಟೇಟ್‌ಗೆ, ಬೆಂಗಳೂರು ಜಲ ಮಂಡಳಿಗೆ, ಮೆಟ್ರೊ ರೈಲು ಯೋಜನೆಗೂ ಜಮೀನು ನೀಡಲಾಗಿದೆ. ವ್ಯವಸಾಯ ಸೇವಾ ಸಹಕಾರ ಸಂಘ, ಗೃಹ ನಿರ್ಮಾಣ ಸಂಘಗಳ ಮೂಲಕ ಸಾವಿರಾರು ಜನರು ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ 2016ರ ನಂತರದ ನಿಯಮಗಳನ್ನು ಬಳಸಿಕೊಂಡು ಬಡ ರೈತರ 120 ಎಕರೆ ತೆರವುಗೊಳಿಸಿದೆ. ತಾಕತ್ತಿದ್ದರೆ ಎಲ್ಲ ಅರಣ್ಯ ಭೂಮಿ ಮರುವಶಕ್ಕೆ ಪಡೆಯಿರಿ’ ಎಂದು ಸವಾಲು ಹಾಕಿದರು.

ADVERTISEMENT

ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಅರಣ್ಯ ಕಾನೂನು, ಕೋರ್ಟ್‌ ಆದೇಶಗಳ ಪ್ರಕಾರವೇ ಕಾಡುಗೋಡಿಯಲ್ಲಿ ಒತ್ತುವರಿಯಾಗಿದ್ದ 120 ಎಕರೆ ಅರಣ್ಯ ಭೂಮಿಯನ್ನು  ಮರುವಶಪ‍ಡಿಸಿಕೊಳ್ಳಲಾಗಿದೆ. ಯಾವುದೇ ಕಟ್ಟಡ, ವಾಸಸ್ಥಳ ತೆರವು ಮಾಡಿಲ್ಲ. ಒಂದು ಬಾರಿ ಅರಣ್ಯ ಎಂದು ಅಧಿಸೂಚನೆಯಾದ ಪ್ರದೇಶ ಎಂದಿಗೂ ಅರಣ್ಯ ಭೂಮಿ.  ಒತ್ತುವರಿ ತೆರವು ಮಾಡಿ, ಗಡಿ ಗುರುತಿಸಲಾಗಿದೆ. ತಾತ್ಕಾಲಿಕ ತಡೆ ಗೋಡೆ ನಿರ್ಮಿಸಿ, ಸ್ಥಳೀಯ ಪ್ರಭೇದದ ಸಸಿಗಳನ್ನು ನೆಡಲಾಗಿದೆ ಎಂದರು.

ಸರ್ಕಾರದ ಅಂಗ ಸಂಸ್ಥೆಗಳಿಗೆ ನೀಡಿದ ಭೂಮಿಗೆ ಪರ್ಯಾಯ ಭೂಮಿ ಪಡೆಯಲಾಗುತ್ತದೆ. 1985ರಲ್ಲಿ ಕೆಐಎಡಿಬಿ ಭೂಸ್ವಾಧೀನ ಪಡಿಸಿಕೊಂಡಾಗ ಅರಣ್ಯ ಇಲಾಖೆ ಗಮನಹರಿಸಿರಲಿಲ್ಲ. ನಂತರ ಈ ವಿಚಾರ ಕೋರ್ಟ್‌ನಲ್ಲಿದೆ. ಮೆಟ್ರೊ ರೈಲು ಯೋಜನೆಗೆ 45 ಎಕರೆಯನ್ನು 30 ವರ್ಷಗಳಿಗೆ ಗುತ್ತಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. 

‘ಪ್ರಕರಣ ಕುರಿತು ಸದನ ಸಮಿತಿ ರಚಿಸಬೇಕು’ ಎಂದು ಬಿಜೆಪಿಯ ಸಿ.ಟಿ. ರವಿ, ಕೇಶವ ಪ್ರಸಾದ್‌ ಸೇರಿದಂತೆ ಹಲವರು ಪಟ್ಟುಹಿಡಿದರು. 

‘ತಮ್ಮ ಬಳಿ ಇರುವ ಎಲ್ಲ ದಾಖಲೆ ಕೊಡಿ. ಕಾನೂನು ಇಲಾಖೆ, ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ಪಡೆದ ನಂತರ ಮತ್ತೆ ಚರ್ಚೆ ನಡೆಸಲಾಗುವುದು’ ಎಂದು ಸಚಿವ ಈಶ್ವರ ಖಂಡ್ರೆ ಚರ್ಚೆಗೆ ತೆರೆ ಎಳೆದರು. 

ಹಳೆಯ ನಿಯಮಗಳನ್ನು ಅನ್ವಯ ಮಾಡಿ ಬಡ ರೈತರಿಗೆ ಅನ್ಯಾಯ ಮಾಡಬಾರದು. ಕಂದಾಯ ಇಲಾಖೆ ಮಂಜೂರು ಮಾಡಿದ ಮೇಲೆ ತೆರವು ಏಕೆ? ಸರ್ಕಾರವೇ ಜನರ ಪಾಲಿಗೆ ಭಸ್ಮಾಸುರ ಆಗಬಾರದು  ಸಿ.ಟಿ. ರವಿ, ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.