ADVERTISEMENT

ಚಿನ್ನ ಕಳ್ಳಸಾಗಣೆ: ಸಚಿವರಿಬ್ಬರ ‘ಕೈ’

* ನಟಿ ರನ್ಯಾ ರಾವ್‌ ಪ್ರಕರಣದಲ್ಲಿ ತನಿಖೆಗಿಳಿದ ಸಿಬಿಐ * ಬೆಂಗಳೂರಿನಿಂದ ಬಹು ರಾಜ್ಯಗಳಲ್ಲಿ ವ್ಯಾಪಿಸಿದ ಜಾಲ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2025, 23:30 IST
Last Updated 9 ಮಾರ್ಚ್ 2025, 23:30 IST
ರನ್ಯಾ ರಾವ್‌
ರನ್ಯಾ ರಾವ್‌   

ಬೆಂಗಳೂರು: ಚಿತ್ರನಟಿ ರನ್ಯಾ ರಾವ್‌ ಅವರನ್ನು ಬಳಸಿಕೊಂಡು ವಿದೇಶಗಳಿಂದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಜಾಲದ ಜೊತೆ ರಾಜ್ಯದ ಇಬ್ಬರು ಪ್ರಭಾವಿ ಸಚಿವರು ನಂಟು ಹೊಂದಿರುವ ಶಂಕೆ ಇದ್ದು, ಈ ಕುರಿತು ಸಿಬಿಐ ತನಿಖೆ ಆರಂಭಿಸಿದೆ. ಡಿಆರ್‌ಐ, ಕಸ್ಟಮ್ಸ್‌ ಇಲಾಖೆಗಳು ಕೂಡ ಪ್ರಕರಣದ ತನಿಖೆ ಮುಂದುವರಿಸಿವೆ.

₹12.36 ಕೋಟಿ ಮೌಲ್ಯದ 14.02 ಕೆ.ಜಿ. ಚಿನ್ನವನ್ನು ದುಬೈನಿಂದ ಕಳ್ಳಸಾಗಣೆ ಮಾಡಿಕೊಂಡು ಬಂದಿದ್ದ ರನ್ಯಾ ರಾವ್‌ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್‌ 3ರಂದು ಬಂಧಿಸಿದ್ದರು. ನಟಿಯ ವಿಚಾರಣೆ ವೇಳೆ ಪ್ರಭಾವಿ ವ್ಯಕ್ತಿಗಳು ಚಿನ್ನ ಕಳ್ಳಸಾಗಣೆ ಕೃತ್ಯದಲ್ಲಿ ನಂಟು ಹೊಂದಿರುವ ಸುಳಿವು ಲಭಿಸಿದೆ. ಈ ಕುರಿತು ಡಿಆರ್‌ಐ ಅಧಿಕಾರಿಗಳು ರಹಸ್ಯ ವರದಿಯನ್ನು ಸಿಬಿಐಗೆ ಸಲ್ಲಿಸಿದ್ದು, ಅದನ್ನು ಆಧರಿಸಿ ಸಿಬಿಐ ಪ್ರಕರಣ ದಾಖಲಿಸಿದೆ.

‘ಬೆಂಗಳೂರು, ಮುಂಬೈ ಮತ್ತು ದೆಹಲಿ ವಿಮಾನ ನಿಲ್ದಾಣಗಳ ಮೂಲಕ ಒಂದೇ ತಂಡವು ನಿರಂತರವಾಗಿ ಚಿನ್ನ ಕಳ್ಳಸಾಗಣೆ ಮಾಡಿರುವ ಮಾಹಿತಿ ಡಿಆರ್‌ಐ ತನಿಖೆ ವೇಳೆ ಲಭಿಸಿದೆ. ಇತ್ತೀಚೆಗೆ ಈ ಮೂರೂ ವಿಮಾನ ನಿಲ್ದಾಣಗಳಲ್ಲಿ ಚಿನ್ನ ವಶಕ್ಕೆ ಪಡೆದಿರುವ ಪ್ರಕರಣಗಳಲ್ಲೂ ಹಲವು ಸಾಮ್ಯತೆಗಳಿವೆ. ಪ್ರಕರಣದಲ್ಲಿ ರನ್ಯಾ ರಾವ್‌ ಅವರೊಂದಿಗೆ ಕಸ್ಟಮ್ಸ್‌, ಡಿಆರ್‌ಐ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೂ ಶಾಮೀಲಾಗಿರುವ ಅನುಮಾನವಿದೆ. ಈ ಕಾರಣದಿಂದ ‘ರನ್ಯಾ ರಾವ್‌ ಮತ್ತು ಶಂಕಿತ ಇತರರ ವಿರುದ್ಧ’ ಎಫ್‌ಐಆರ್‌ ದಾಖಲಿಸಿ, ಸಿಬಿಐ ತನಿಖೆ ಆರಂಭಿಸಿದೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ವಿದೇಶಗಳಿಂದ ಕಳ್ಳಸಾಗಣೆ ಮಾಡಿಕೊಂಡು ತಂದ ಚಿನ್ನವನ್ನು ಬೆಂಗಳೂರಿನ ಆಭರಣ ತಯಾರಕರಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಡಿಆರ್‌ಐ ತನಿಖೆಯಲ್ಲಿ ಲಭಿಸಿದೆ. ದುಬೈನಲ್ಲಿ ಚಿನ್ನ ಪೂರೈಕೆಗೆ ವ್ಯವಸ್ಥೆ ಮಾಡುತ್ತಿದ್ದವರು ಯಾರು? ಅಲ್ಲಿ ಹಣ ಪಾವತಿ ಯಾವ ವಿಧಾನದಲ್ಲಿ ನಡೆಯುತ್ತಿತ್ತು? ಬೆಂಗಳೂರಿನಲ್ಲಿ ಚಿನ್ನದ ವಿಲೇವಾರಿ ಹೇಗೆ ನಡೆಯುತ್ತಿತ್ತು? ಚಿನ್ನ ಮಾರಾಟದಲ್ಲಿ ಯಾರೆಲ್ಲ ಭಾಗಿಯಾಗಿದ್ದರು? ಎಂಬ ಅಂಶಗಳನ್ನು ಮುಂದಿಟ್ಟುಕೊಂಡು ತನಿಖೆ ಮುಂದುವರಿದಿದೆ. ಇದೇ ಆಯಾಮಗಳಲ್ಲಿ ಸಿಬಿಐ ಕೂಡ ತನಿಖೆಗಿಳಿದಿದೆ ಎಂದು ಮೂಲಗಳು ಹೇಳಿವೆ.

‘ಪ್ರಭಾವ’ವೇ ಪ್ರಧಾನ ಅಸ್ತ್ರ: ರನ್ಯಾ ರಾವ್‌ ಚಿನ್ನ ಕಳ್ಳಸಾಗಣೆಗೆ ವಿದೇಶಗಳಿಗೆ ಹೋಗಿ, ಬರುವಾಗ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸುತ್ತಿರಲಿಲ್ಲ ಎಂಬುದು ಡಿಆರ್‌ಐ ಕಾರ್ಯಾಚರಣೆ ಬಳಿಕ ದೃಢಪಟ್ಟಿದೆ. ಪೊಲೀಸರ ಬೆಂಗಾವಲಿನಲ್ಲೇ ಆರೋಪಿಯು ನಿರಾಯಾಸವಾಗಿ ಚಿನ್ನದೊಂದಿಗೆ ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದರು. ರನ್ಯಾ ರಾವ್‌ ಅವರು ಹತ್ತಾರು ಕೆ.ಜಿ. ತೂಕದ ಚಿನ್ನದ ಬಿಸ್ಕತ್‌ಗಳನ್ನು ಹೊತ್ತು ವಿಮಾನ ಏರಲು ದುಬೈ ವಿಮಾನ ನಿಲ್ದಾಣದಲ್ಲೂ ‘ಸಹಕಾರ’ ದೊರೆಯುತ್ತಿತ್ತು ಎಂಬುದೂ ತನಿಖೆಯಲ್ಲಿ ಪತ್ತೆಯಾಗಿದೆ.

‘ದೇಶದೊಳಗಿನ ವಿಮಾನ ನಿಲ್ದಾಣಗಳಲ್ಲಿ ಪೊಲೀಸರ ಮೇಲೆ ಪ್ರಭಾವ ಬೀರಿ ಹೊರ ಬಂದಿರಬಹುದು. ಆದರೆ, ದುಬೈ ವಿಮಾನ ನಿಲ್ದಾಣದಲ್ಲಿ ಒಂದು ಚಿಕ್ಕ ಪೆನ್‌ ಕೂಡ ಅಕ್ರಮವಾಗಿ ತರುವುದು ಸುಲಭವಲ್ಲ. ಅಲ್ಲಿಂದ ಹತ್ತಾರು ಕೆ.ಜಿ. ಚಿನ್ನವನ್ನು ಅನಾಯಾಸವಾಗಿ ತರಬೇಕೆಂದರೆ ಅಲ್ಲಿಯೂ ‘ಪ್ರಭಾವ’ ಹೊಂದಿರುವವರ ಪಾತ್ರವೂ ಇರುವ ಸಾಧ್ಯತೆ ಇದೆ. ಈ ಅನುಮಾನಗಳೂ ತನಿಖೆಯ ವ್ಯಾಪ್ತಿಯಲ್ಲಿವೆ’ ಎಂದು ಮೂಲಗಳು ತಿಳಿಸಿವೆ.

ರನ್ಯಾ ರಾವ್‌ ವಿದೇಶ ಪ್ರವಾಸದ ವಿವರವನ್ನು ಡಿಆರ್‌ಐ ಮತ್ತು ಸಿಬಿಐ ಕಲೆಹಾಕಿವೆ. ಆರೋಪಿಯು ವಿದೇಶಗಳಿಗೆ ಹೋಗಿ ವಾಪಸ್‌ ಬಂದ ದಿನಗಳಲ್ಲಿ ಸಂಬಂಧಿಸಿದ ವಿಮಾನ ನಿಲ್ದಾಣಗಳಲ್ಲಿ ಕರ್ತವ್ಯದಲ್ಲಿದ್ದ ಕಸ್ಟಮ್ಸ್‌, ಡಿಆರ್‌ಐ ಸೇರಿದಂತೆ ತಪಾಸಣಾ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಆರೋಪಿಯ ಮೊಬೈಲ್‌ ಕರೆಗಳ ಆಧಾರದಲ್ಲಿ ಅವರ ಜೊತೆ ನಂಟು ಹೊಂದಿರುವವರನ್ನೂ ಪತ್ತೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರನ್ಯಾ ರಾವ್ ಅವರು ನಿರ್ದೇಶಕಿ ಆಗಿರುವ ಕ್ಸಿರೋಡಾ ಇಂಡಿಯಾ ಪ್ರೈವೆಟ್‌ ಲಿ. ಕಂಪನಿಗೆ ತುಮಕೂರು ಜಿಲ್ಲೆಯ ಶಿರಾದಲ್ಲಿ ಕೆಐಎಡಿಬಿ ವತಿಯಿಂದ 2023ರಲ್ಲಿ 12 ಎಕರೆ ಜಮೀನು ಮಂಜೂರಾಗಿದೆ. ಈ ಕಂಪನಿಗೆ ನಟಿಯ ಸಹೋದರ ಸಹ ನಿರ್ದೇಶಕರಾಗಿದ್ದಾರೆ. ಕೆಎಐಡಿಬಿಯಿಂದ ಜಮೀನು ಮಂಜೂರಾತಿ ಮಾಡಿಸಿಕೊಂಡಿರುವ ದಾಖಲೆಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.

ಸಚಿವರಿಗೆ ಕರೆ ಮಾಡಲು ಯತ್ನ?

ಹಲವು ದಿನಗಳಿಂದ ರನ್ಯಾ ರಾವ್‌ ಅವರ ವಿದೇಶ ಪ್ರವಾಸದ ಮೇಲೆ ನಿಗಾ ಇರಿಸಿದ್ದ ಡಿಆರ್‌ಐ ಅಧಿಕಾರಿಗಳು, ಮಾರ್ಚ್‌ 3ರಂದು ದುಬೈನಿಂದ ಮರಳುತ್ತಿದ್ದಂತೆಯೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದರು. ತಪಾಸಣೆಗೆ ಕರೆದೊಯ್ಯಲು ತನಿಖಾ ತಂಡ ಮುಂದಾಗು ತ್ತಿದ್ದಂತೆ ಆರೋಪಿಯು ರಾಜ್ಯದ ಸಚಿವರೊಬ್ಬರಿಗೆ ಮೊಬೈಲ್‌ ಮೂಲಕ ಕರೆಮಾಡಲು ಯತ್ನಿಸಿದ್ದರು ಎಂದು ಮೂಲಗಳು ಹೇಳಿವೆ.

‘ಬಂಧನದ ಸುಳಿವು ಪಡೆದ ರನ್ಯಾ ಸಚಿವರೊಬ್ಬರ ಮೊಬೈಲ್‌ ಸಂಖ್ಯೆಯನ್ನು ಡಯಲ್‌ ಮಾಡಲು ಯತ್ನಿಸಿದ್ದರು. ತಕ್ಷಣ ಮೊಬೈಲ್‌ ಕಿತ್ತುಕೊಂಡಿದ್ದ ಡಿಆರ್‌ಐ ಅಧಿಕಾರಿಗಳು, ಅದನ್ನು ಜಪ್ತಿ ಮಾಡಿದ್ದರು’ ಎಂದು ಮೂಲಗಳು ತಿಳಿಸಿವೆ.

ಹವಾಲಾ ನಂಟಿನ ಶಂಕೆ

ವಿದೇಶಗಳಿಂದ ಬೆಂಗಳೂರಿಗೆ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಜಾಲವು ಹವಾಲಾ ಅಥವಾ ಕ್ರಿಪ್ಟೋ ಕರೆನ್ಸಿ ಬಳಸಿಕೊಂಡು ಪೂರೈಕೆದಾರರಿಗೆ ಹಣ ಪಾವತಿಸುತ್ತಿದ್ದ ಶಂಕೆ ಇದೆ. ದುಬೈ ಮತ್ತು ಬೆಂಗಳೂರಿನ ಮಧ್ಯೆ ಹವಾಲಾ ಪಾವತಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸಿದವರ ಪತ್ತೆಗೆ ಡಿಆರ್‌ಐ ಮತ್ತು ಸಿಬಿಐ ಕಾರ್ಯಾಚರಣೆಗೆ ಇಳಿದಿವೆ.

ವ್ಯಾಪಾರಿಗಳಿಂದ ಸುಳಿವು

ರನ್ಯಾರಾವ್ ಅವರು ಚಿನ್ನ ಕಳ್ಳ ಸಾಗಣೆ ಮಾಡುತ್ತಿರುವ ಬಗ್ಗೆ ನಗರದ ಚಿನ್ನಾಭರಣ ಮಳಿಗೆಗಳ ಮಾಲೀಕರೇ ಡಿಆರ್‌ಐ ಅಧಿಕಾರಿಗಳಿಗೆ ಸುಳಿವು ನೀಡಿದ್ದರು. ಚಿನ್ನದ ಬಿಸ್ಕತ್‌ಗಳನ್ನು ದುಬೈನಿಂದ ತಂದು ನಗರದಲ್ಲಿ ಪ್ರತಿಷ್ಠಿತ ಚಿನ್ನದ ವ್ಯಾಪಾರಿಗಳಿಗೆ ನೀಡುತ್ತಿದ್ದರು. ಆದರೆ, ಇತರೆ ವ್ಯಾಪಾರಿಗಳು ತಮಗೂ ಚಿನ್ನ ನೀಡುವಂತೆ ಕೋರಿದ್ದರು. ಇದಕ್ಕೆ ಒಪ್ಪಿರಲಿಲ್ಲ. ಇದರಿಂದ ಅಸಮಾಧಾನಗೊಂಡ ವ್ಯಾಪಾರಿಗಳು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ನಟಿಯ ಚಲನವಲನಗಳ ಮೇಲೆ ನಿಗಾ ವಹಿಸಿದ್ದರು. ಅಧಿಕಾರಿಗಳು ಮಳಿಗೆಗಳ ಮಾಲೀಕರ ವಿಚಾರಣೆ ನಡೆಸಿ, ಅವರ ಹೇಳಿಕೆ ದಾಖಲಿಸಿಕೊಂಡು ಕಳುಹಿಸಿದ್ದಾರೆ.

ಕೆಐಎಡಿಬಿ ಜಮೀನು ಹಂಚಿಕೆ

ರನ್ಯಾ ರಾವ್ ಅವರು ನಿರ್ದೇಶಕಿ ಆಗಿರುವ ಕ್ಸಿರೋಡಾ ಇಂಡಿಯಾ ಪ್ರೈವೆಟ್‌ ಲಿ. ಕಂಪನಿಗೆ ತುಮಕೂರು ಜಿಲ್ಲೆಯ ಶಿರಾದಲ್ಲಿ ಕೆಐಎಡಿಬಿ ವತಿಯಿಂದ 2023ರ ಜನವರಿಯಲ್ಲಿ 12 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ‌ ಇತ್ತು. ಈ ಕಂಪನಿಗೆ ನಟಿಯ ಸಹೋದರ ಸಹ ನಿರ್ದೇಶಕರಾಗಿದ್ದಾರೆ. ಕೆಎಐಡಿಬಿಯಿಂದ ಜಮೀನು ಮಂಜೂರಾತಿ ಮಾಡಿಸಿಕೊಂಡಿರುವ ದಾಖಲೆಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.

ರನ್ಯಾ ರಾವ್ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದಾರೆ ಎಂದಷ್ಟೆ ಗೊತ್ತು. ಸರ್ಕಾರದ ಅನುಮತಿ ಏನೂ ಕೇಳಿಲ್ಲ. ಡಿಆರ್‌ಐನವರು ಕೊಟ್ಟಿರಬಹುದು. ಅವರು ತನಿಖೆ ನಡೆಸಲಿ.
-ಜಿ.ಪರಮೇಶ್ವರ, ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.