ADVERTISEMENT

ಹೊಸ ಬೆಳಕು: ‘ಕನ್ನಡ’ ಗುರು, ಯೋಗ ‘ಮಾ’ ಈ ‘ಭಾಗೀರಥಿ ಕನ್ನಡತಿ’

ರಾಜೇಶ್ ರೈ ಚಟ್ಲ
Published 4 ನವೆಂಬರ್ 2021, 7:20 IST
Last Updated 4 ನವೆಂಬರ್ 2021, 7:20 IST
ಭಾಗೀರಥಿ ಕನ್ನಡತಿ
ಭಾಗೀರಥಿ ಕನ್ನಡತಿ   

ಬೆಂಗಳೂರು: ಹೆಸರಿನೊಂದಿಗೇ ‘ಕನ್ನಡ’ ಜೋಡಿಸಿಕೊಂಡಿರುವ ಇವರು ‘ಭಾಗೀರಥಿ ಕನ್ನಡತಿ’. ಕನ್ನಡೇತರರಿಗೆ ಕನ್ನಡ ಕಲಿಸುವ ಜೊತೆಗೆ ಪರಭಾಷಿಕರಲ್ಲಿ ನಾಡು–ನುಡಿಯ ‘ಪ್ರೀತಿ’ ಮೂಡಿಸುವ ಭಾಗೀರಥಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಯೋಗ’ ಗುರುವಾಗಿಯೂ ಗುರುತಿಸಿಕೊಂಡು ಕಡಲಾಚೆಗೂ ಹೋಗಿ ಬಂದವರು.

ಹಾಸನ ಜಿಲ್ಲೆ ಕೆಂಚಮ್ಮನ ಹೊಸಕೋಟೆ (ಸಕಲೇಶಪುರ) ಕಟ್ಟಿಹೊಳೆ ಗ್ರಾಮದವರಾದ ಭಾಗೀರಥಿ, ನಗರದ ಕೆ.ಆರ್‌. ಪುರದಲ್ಲಿ ನೆಲೆಸಿದ್ದಾರೆ. ಬಾಲ್ಯದಿಂದಲೇ ಕನ್ನಡದ ಕಾಯಕದಲ್ಲಿ ಅತೀವ ಆಸಕ್ತಿ. ಎಸ್ಸೆಸ್ಸೆಲ್ಸಿ ಮುಗಿಸಿದ ಬಳಿಕ ಬೆಂಗಳೂರಿಗೆ ಬಂದ ಅವರು ಈಗ, ವಿದೇಶಿಯರಿಗೆ ಆನ್‌ಲೈನ್‌ ಮೂಲಕ ಕನ್ನಡ ಕಲಿಸುವ ‘ಕನ್ನಡತಿ’, ಯೋಗ ಕಲಿಸುವ ‘ಯೋಗ ಮಾ’.

2001ರಲ್ಲಿ ಎಸ್‌ಎಸ್‌ಬಿ ಸೇವಾ ಫೌಂಡೇಷನ್ ಚಾರಿಟಬಲ್ ಟ್ರಸ್ಟ್‌ ಆರಂಭಿಸಿದ ಭಾಗೀರಥಿ, ಶಿಕ್ಷಣ, ಆರೋಗ್ಯ, ಯೋಗ ವಿಷಯಗಳಲ್ಲಿ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದಾರೆ. ‌20 ವರ್ಷಗಳಲ್ಲಿ 26 ಸಾವಿರಕ್ಕೂ ಹೆಚ್ಚು ಕನ್ನಡೇತರರಿಗೆ ತಮ್ಮ ಕನ್ನಡ ಕಲಿಕಾ ಕೇಂದ್ರದ ಮೂಲಕ ಉಚಿತವಾಗಿ ಕನ್ನಡ ಹೇಳಿಕೊಟ್ಟಿದ್ದಾರೆ.

ADVERTISEMENT

2019ರಲ್ಲಿ ದುಬೈನಲ್ಲಿ ದೈಹಿಕ ಮತ್ತು ಸಾಂಸ್ಕೃತಿಕತರಬೇತುಗಾರ್ತಿ (ಫಿಸಿಕಲ್ ಆ್ಯಂಡ್‌ ಕಲ್ಚರಲ್ ಟ್ರೈನರ್‌) ಕೆಲಸಕ್ಕೆ ಸೇರಿದ್ದ ಭಾಗೀರಥಿ, ಕೋವಿಡ್ ಕಾರಣದಿಂದ ಕೆಲಸ ಕಳೆದುಕೊಂಡಿದ್ದರು. ಅದೇ ವೇಳೆ ಆನ್‌ಲೈನ್‌ನಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಕೊಡುತ್ತಿದ್ದರು. ಆ ನಂತರ ಬ್ರಿಟನ್‌ನ ‘ಕನ್ನಡಿಗರು ಯುಕೆ’ ಸಂಘಟನೆಯ ಸಂಪರ್ಕದ ಮೂಲಕ ಯುಕೆ ನಿವಾಸಿಗಳಿಗೆ ಏಳೆಂಟು ತಿಂಗಳುಗಳಿಂದ ಪ್ರತಿ ವಾರ ಆನ್‌ಲೈನ್‌ನಲ್ಲಿ ಯೋಗ ಕಲಿಸುತ್ತಿದ್ದಾರೆ.

ಸದ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಯೋಗಾಸನ ಗುರು ಆಗಿ ಖ್ಯಾತಿ ಗಳಿಸಿರುವ ಭಾಗೀರಥಿ, ‌ರಾಜ್ಯವಷ್ಟೇ ಅಲ್ಲ, ಕೇರಳ, ಆಂಧ್ರಪ್ರದೇಶ, ಗುಜರಾತ್‌, ದೆಹಲಿ ರಾಜ್ಯಗಳಲ್ಲಿ ಯೋಗ ತರಬೇತಿ ನೀಡಿದ್ದಾರೆ. ರಷ್ಯಾ, ಪಾಕಿಸ್ತಾನ, ಫಿಲಿಪ್ಪಿನ್ಸ್‌, ಅಮೆರಿಕ, ಕೆನಡಾ, ಥಾಯ್ಲೆಂಡ್, ಅಂಡಮಾನ್‌, ನೇಪಾಳದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಸಿಬ್ಬಂದಿಗೆ ಯೋಗಾಭ್ಯಾಸ ಕಲಿಸಿದ್ದಾರೆ. ಯುಎಇಯಲ್ಲಿ ಬುದ್ದಿಮಾಂದ್ಯ ಯುವಕರಿಗೆ ಯೋಗ ಪರಿಚಯಿಸಿದ ಮೊದಲಿಗರಿವರು. ಅಲ್ಲಿನ ಎಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಸಿಬ್ಬಂದಿಗೆ ಪ್ರಸವಪೂರ್ವ ಮತ್ತು ಪ್ರಸವನಂತರದ ಯೋಗ ಕಾರ್ಯಾಗಾರ, ಸ್ಲಿಪ್‌ ಡಿಸ್ಕ್‌, ಆಸ್ತಮಾ, ಮೈಗ್ರೇನ್‌, ತೂಕ ಇಳಿಸುವ ಯೋಗಗಳನ್ನು ಕಲಿಸುತ್ತಿದ್ದಾರೆ.

25ಕ್ಕೂ ಹೆಚ್ಚು ದೇಶಗಳ ಜನರು ಭಾಗೀರಥಿ ಅವರ ಮೂಲಕ ಯೋಗ ಕಲಿಯುತ್ತಿದ್ದಾರೆ. ಯೋಗಾಭ್ಯಾಸದಿಂದ ಆಗುವ ಪ್ರಯೋಜನಗಳನ್ನು ಜನರಿಗೆ ಪರಿಚಯಿಸುವಲ್ಲಿ ಅವರ ಸಾಧನೆ ದೊಡ್ಡದು. ಮನಸ್ಸಿನ ಶಾಂತಿ, ಆರೋಗ್ಯದಲ್ಲಿ ವೃದ್ಧಿ ಮತ್ತು ಸುಖ ಶಾಂತಿಯಿಂದ ಜೀವನ ನಡೆಸಲು ಯೋಗದಿಂದ ಸಾಧ್ಯವಿದೆ ಎನ್ನುವುದು ಭಾಗೀರಥಿ ಅವರ ಅಭಿಪ್ರಾಯ.

ಪ್ರಶಸ್ತಿಗಳು: ನೂರಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಭಾಗೀರಥಿ ಅವರನ್ನು ಗುರುತಿಸಿ ಗೌರವಿಸಿವೆ‌. ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಅಂತರರಾಷ್ಟ್ರೀಯ ಅತ್ಯುತ್ತಮ ಯೋಗಪಟು, ಯೋಗ ಭೂಷಣ ರಾಷ್ಟ್ರೀಯ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.