ADVERTISEMENT

ಕನ್ನಡ ನಿಮ್ಮ ಮನೆಯಲ್ಲಿ ಇಟ್ಕೊ: ಬೆಂಗಳೂರು ಕಾಲೇಜಿನಲ್ಲಿ ವಿದ್ಯಾರ್ಥಿಗೆ ಎಚ್ಚರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜನವರಿ 2026, 5:36 IST
Last Updated 5 ಜನವರಿ 2026, 5:36 IST
   

ಬೆಂಗಳೂರು: ‘ಕನ್ನಡ ಮಾತನಾಡುವುದನ್ನು ನಿಮ್ಮ ಮನೆಯಲ್ಲಿ ಇಟ್ಕೊ, ಇಲ್ಲಿ ಹಿಂದಿ ಮಾತನಾಡು’ ಬೆಂಗಳೂರಿನ ಕಾಲೇಜು ಒಂದರ ಹಾಸ್ಟೆಲ್‌ನಲ್ಲಿ ವಾರ್ಡನ್ ಒಬ್ಬರು ವಿದ್ಯಾರ್ಥಿಗಳಿಗೆ ನೀಡಿರುವ ಎಚ್ಚರಿಕೆಯ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿ ನಾನಾ ಭಾಷಿಕರಿಗೆ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡುರುವ ಬೆಂಗಳೂರಿನಲ್ಲಿ ಆಗಾಗ ಕನ್ನಡದ ಮೇಲೆ ದಬ್ಬಾಳಿಕೆ ನಡೆಯುತ್ತಿರುವುದನ್ನು ನೋಡಿದ್ದೇವೆ. ಸದ್ಯ ‘ಕನ್ನಡ ನಿಮ್ಮ ಮನೆಯಲ್ಲಿ ಇಟ್ಕೊ, ಇಲ್ಲಿ ಹಿಂದಿ ಮಾತನಾಡು’ ಎಂದು ಎಚ್ಚರಿಕೆ ನೀಡಿದ್ದಾರೆ.

ಹರಿದಾಡುತ್ತಿರುವ ವಿಡಿಯೊ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಎಎಂಸಿ ಕಾಲೇಜಿನ ಹಾಸ್ಟೆಲ್‌ನದ್ದು ಎನ್ನಲಾಗಿದೆ. ಅಲ್ಲಿರುವ ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತನಾಡಲು ಮುಂದಾದಾಗ ವಾರ್ಡನ್‌ ಹಿಂದಿಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ADVERTISEMENT

ವಾರ್ಡನ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿ, ನಾನು ಯಾಕೆ ಕನ್ನಡದಲ್ಲಿ ಮಾತನಾಡಬಾರದು? ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ವಾರ್ಡನ್ ಇಲ್ಲಿ ಯಾವ ಭಾಷೆ ಮಾತನಾಡಬೇಕು ಎಂಬುದನ್ನು ನಾನು ನಿರ್ಧಾರ ಮಾಡುತ್ತೇನೆ. ಇದು ನಿಮ್ಮ ಮನೆಯಲ್ಲ, ಕಾಲೇಜು ಎಂದು ಕನ್ನಡದ ವಿದ್ಯಾರ್ಥಿಗಳಿಗೆ ಕನ್ನಡ ಮಾತನಾಡದಂತೆ ಸೂಚನೆ ನೀಡಿದ್ದಾರೆ.

ಈ ವಿಡಿಯೊವನ್ನು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ದುರಹಂಕಾರದ ಪರಮಾವಧಿ. ಕನ್ನಡದ ಮೇಲೆ ಅನ್ಯಭಾಷಿಕರ ದಬ್ಬಾಳಿಕೆ. ಕಾಲೇಜಿನಲ್ಲಿ ಕನ್ನಡ ಮಾತನಾಡಬಾರದಂತೆ. ಇವನಿಗೆ ಈ ಆದೇಶ ಮಾಡೋಕೆ ಈ ಅಧಿಕಾರ ಕೊಟ್ಟೋರು ಯಾರು?. ಕಾಲೇಜಿನಲ್ಲಿ ಕನ್ನಡ ವಿದ್ಯಾರ್ಥಿಗಳ ಮೇಲೆ ಈ ದೌರ್ಜನ್ಯ ನಡೆಯುವದನ್ನು ಸಹಿಸೋಲ್ಲ’ ಎಂದಿದ್ದಾರೆ.

‘ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ (AMC) ಕಾಲೇಜಿನಲ್ಲಿ ಕನ್ನಡದ ವಿದ್ಯಾರ್ಥಿಗೆ ಕನ್ನಡ ಮಾತನಾಡದಂತೆ ಬೆದರಿಕೆ ಹಾಕಲಾಗಿದೆ. ಕಾಲೇಜುಗಳಲ್ಲಿ ಉದ್ಯೋಗ ಕನ್ನಡಿಗರಿಗೆ ಆದ್ಯತೆ ಸಿಗುತ್ತಿಲ್ಲ. ಇವನು ಅವನ ಊರಿಗೆ ಹೋರಡಲಿ’ ಎಂದು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.