ಸಾಹಿತಿ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಭಸ್ತಿ
ಚಿತ್ರಕೃಪೆ: X / @arunava
ಲಂಡನ್: ಕನ್ನಡದ ಹೆಸರಾಂತ ಸಾಹಿತಿ ಬಾನು ಮುಷ್ತಾಕ್ ಅವರು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ, ಸಣ್ಣ ಕತೆಗಳ ಅನುವಾದಿತ ಸಂಕಲನ 'ಹಾರ್ಟ್ ಲ್ಯಾಂಪ್'ಗೆ ಈ ಪ್ರಶಸ್ತಿ ಲಭಿಸಿದೆ.
ಇದರೊಂದಿಗೆ, ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆತಂತಾಗಿದೆ. ಪ್ರಶಸ್ತಿಯು ಅಂದಾಜು ₹ 57.28 ಲಕ್ಷ (50 ಸಾವಿರ ಪೌಂಡ್) ನಗದು ಒಳಗೊಂಡಿದೆ.
1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಈ ಸಂಕಲನವನ್ನು ದೀಪಾ ಭಾಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕು ಈ ಕತೆಗಳಲ್ಲಿ ಅನಾವರಣಗೊಂಡಿದೆ.
ಟೇಟ್ ಮಾಡರ್ನ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ಮುಷ್ತಾಕ್, ತಮ್ಮ ಗೆಲುವನ್ನು ವೈವಿಧ್ಯತೆಗೆ ದೊರೆತ ಜಯ ಎಂದು ಬಣ್ಣಿಸಿದ್ದಾರೆ.
'ಯಾವ ಕಥೆಯೂ ಸಣ್ಣದಲ್ಲ, ಅನುಭವದ ವಸ್ತ್ರದಲ್ಲಿನ ಪ್ರತಿ ಎಳೆಯೂ ಇಡೀ ಕಥೆಯ ತೂಕವನ್ನು ಹೊಂದಿರುತ್ತದೆ ಎಂಬ ನಂಬಿಕೆಯಿಂದಲೇ ಈ ಪುಸ್ತಕ ರೂಪುಗೊಂಡಿತು' ಎಂದು ಹೇಳಿದ್ದಾರೆ.
'ನನ್ನ ಸುಂದರವಾದ ಭಾಷೆಗೆ ದೊರೆತ ಎಂತಹ ಸೊಗಸಾದ ಗೆಲುವು ಇದು' ಎಂದು ಅನುವಾದಕಿ ಭಸ್ತಿ ಹರ್ಷ ವ್ಯಕ್ತಪಡಿಸಿದ್ದಾರೆ.
ಫ್ರೆಂಚ್‌ನಿಂದ ಅನುವಾದವಾದ ಎರಡು ಕೃತಿಗಳು, ಜಪಾನ್, ಇಟಾಲಿಯನ್ ಹಾಗೂ ಡ್ಯಾನಿಷ್ ಭಾಷೆಯ ತಲಾ ಒಂದು ಕೃತಿ 'ಶಾರ್ಟ್ ಲಿಸ್ಟ್'ನಲ್ಲಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.