ADVERTISEMENT

ಧಮ್‌ ಇದ್ರೆ, ತಾಕತ್‌ ಇದ್ರೆ... ಶಿಕ್ಷಣ ಸಚಿವ ನಾಗೇಶ್‌ಗೆ ನೇರ ಸವಾಲು ಹಾಕಿದ ಎಎಪಿ

ಶಿಕ್ಷಣ ಸಚಿವರು ಪ್ರತಿನಿಧಿಸುವ ಕ್ಷೇತ್ರ ತಿಪಟೂರಿನಲ್ಲೇ ಶಾಲೆಗಳ ದುಸ್ಥಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2022, 2:32 IST
Last Updated 7 ನವೆಂಬರ್ 2022, 2:32 IST
ಶಿಕ್ಷಣ ಸಚಿವ ಬಿ.ಸಿ ನಾಗೇಶ್‌
ಶಿಕ್ಷಣ ಸಚಿವ ಬಿ.ಸಿ ನಾಗೇಶ್‌    

ಬೆಂಗಳೂರು:ದೆಹಲಿ ಮಾದರಿಯಲ್ಲೇ ಕರ್ನಾಟಕದಲ್ಲೂ ಕನ್ನಡ ಶಾಲೆಗಳನ್ನು ಮಾಡಬೇಕು ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ರಾಜ್ಯ ಘಟಕ ಒತ್ತಾಯ ಮಾಡಿದೆ.

ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಅವರು ಪ್ರತಿನಿಧಿಸುವತಿಪುಟೂರು ತಾಲ್ಲೂಕಿನಸರ್ಕಾರಿ ಮಾದರಿ ಶಾಲೆಗಳಲ್ಲಿ ಮೂಲ ಸೌಕರ್ಯ ಇಲ್ಲದೆ ನೂರಾರು ವಿದ್ಯಾರ್ಥಿಗಳು ಮಳೆಯಲ್ಲಿ ನೆನೆಯುತ್ತಾ ಆತಂಕದಿಂದಲೇ ನೆಲದ ಮೇಲೆ ಕುಳಿತು ಪಾಠ ಕೇಳುವ ಸ್ಥಿತಿ ಇರುವ ಬಗ್ಗೆ ‘ತಿಪಟೂರು: ಸರ್ಕಾರಿ ಶಾಲೆಗಳ ಗೋಳು ಕೇಳೋರ‍್ಯಾರು?’ ಎಂಬ ಶೀರ್ಷಿಕೆಯಡಿ ಪ್ರಜಾವಾಣಿ ನ.6ರಂದು ವರದಿ ಪ್ರಕಟಿಸಿತ್ತು.

ಈ ವರದಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಎಎಪಿ, ಶಿಕ್ಷಣ ಸಚಿವರಿಗೆ ನೇರ ಸವಾಲು ಹಾಕಿದೆ.

ADVERTISEMENT

‘ರಾಜ್ಯದ ಶಿಕ್ಷಣ ಸಚಿವರಿಗೆ ನಮ್ಮ ನೇರ ಸವಾಲು. ತಾಕತ್ತಿದ್ರೆ, ದಮ್ ಇದ್ರೆ... ಬಂದು ಎಎಪಿ ದೆಹಲಿಯಲ್ಲಿ ಮಾಡಿರುವ ಶಾಲೆಗಳನ್ನು ನೋಡಿ. ಬನ್ನಿ, ನಮ್ಮ ರಾಜ್ಯಾಧ್ಯಕ್ಷರೇ ನಿಮಗೆ ಶಾಲೆಗಳನ್ನು ತೋರಿಸಲಿದ್ದಾರೆ. ದಯಮಾಡಿ ದೆಹಲಿಯ ರೀತಿಯ ಕನ್ನಡ ಶಾಲೆಗಳನ್ನು ಇಲ್ಲಿಯೂ ಮಾಡಿ’ ಎಂದು ಸವಾಲೆಸೆದಿದೆ.

ಈ ಟ್ವೀಟ್‌ ಅನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಟ್ಯಾಗ್‌ ಕೂಡ ಮಾಡಲಾಗಿದೆ.

ತಿಪಟೂರು ತಾಲ್ಲೂಕಿನಲ್ಲಿ 159 ಕಿರಿಯ ಪ್ರಾಥಮಿಕ ಶಾಲೆ, 100 ಹಿರಿಯ ಪ್ರಾಥಮಿಕ ಶಾಲೆ ಹಾಗೂ 16 ಸರ್ಕಾರಿ ಪ್ರೌಢಶಾಲೆಗಳು ಇವೆ. ಇವುಗಳಲ್ಲಿ 50ಕ್ಕೂ ಹೆಚ್ಚು ಕಿರಿಯ ಪ್ರಾಥಮಿಕ ಶಾಲೆಗಳು, 50ಕ್ಕೂ ಹೆಚ್ಚು ಹಿರಿಯ ಪ್ರಾಥಮಿಕ ಶಾಲೆಗಳುದುರಸ್ತಿಗೆ ಒಳಪಡಬೇಕಿವೆ ಎಂಬುದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವಿವರಣೆಯಾಗಿದೆ.

ಗ್ರಾಮೀಣ ಭಾಗದ ಅನೇಕ ಸರ್ಕಾರಿ ಶಾಲೆಗಳಲ್ಲಿ ಮೇಲ್ಭಾಗದ ಹೆಂಚುಗಳು ಕುಸಿಯುವ ಹಂತದಲ್ಲಿದ್ದು ಚೆನ್ನಾಗಿರುವ ಕಡೆಗೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಿ ಒಂದೇ ಕೊಠಡಿಯಲ್ಲಿ ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಕೆಲವು ಶಾಲೆಯ ಗೋಡೆಗಳು ಬಿರುಕುಬಿಟ್ಟಿದ್ದು, ಮೇಲ್ಚಾವಣಿ ಕುಸಿದು ಬೀಳುವ ಹಂತ ತಲುಪಿವೆ.

ಹಾಲ್ಕುರಿಕೆ, ಅನಿವಾಳ, ಸೂರನಹಳ್ಳಿ, ಕೋಟನಾಯಕನಹಳ್ಳಿ, ರಾಮಚಂದ್ರಾಪುರ, ಅನಗೊಂಡನಹಳ್ಳಿ ಸೇರಿದಂತೆ ಹಲವಾರು ಶಾಲೆಯ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಇದರಿಂದ ಇರುವಂತಹ ಕೊಠಡಿಗಳಲ್ಲಿಯೇ ವಿದ್ಯಾರ್ಥಿಗಳನ್ನು ಕೂಡಿಸಿ ಪಾಠ ಮಾಡುವಂತಾಗಿದೆ.

‘ಹೌದು, ಇಂಥ ದಾರುಣ ಸ್ಥಿತಿಯಲ್ಲಿರುವ ಶಾಲೆಗಳ ಬಗ್ಗೆ ಸರ್ಕಾರವನ್ನು ನಾವು ಕೇಳುತ್ತೇವೆ.ಬಡ ಮಕ್ಕಳಿಗೇಕೆ ಮೋಸ ಮಾಡುತ್ತೀರಿ ಎಂದು ಕೇಳುತ್ತೇವೆ.ಕನ್ನಡ ಶಾಲೆಗಳ ಮೇಲೆ ಬಿಜೆಪಿ ಸರ್ಕಾರಕ್ಕೆ ಯಾಕಿಷ್ಟು ಕೋಪ ಎಂದು ಕೇಳುತ್ತೇವೆ. ಆಮ್‌ ಆದ್ಮಿ ಪಕ್ಷ ಕಟ್ಟಿಸಿರುವ ಶಾಲೆಗಳನ್ನು ತೋರಿಸುತ್ತೇವೆ’ ಎಂದು ಎಎಪಿ ರಾಜ್ಯ ಸಂಚಾಲಯ ಪೃಥ್ವಿ ರೆಡ್ಡಿ ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.