ADVERTISEMENT

ರಾಜ್ಯಪಾಲರ ರಂಗಪ್ರವೇಶ: ಸರ್ಕಾರದ ಹಣೆಬರಹ ಇಂದೇ ನಿರ್ಧಾರ?

ಮಧ್ಯಾಹ್ನ 1.30ರೊಳಗೆ ವಿಶ್ವಾಸ ಮತ ಸಾಬೀತಿಗೆ ವಾಲಾ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 20:36 IST
Last Updated 18 ಜುಲೈ 2019, 20:36 IST
ಗುರುವಾರ ನಡೆದ ಕಲಾಪದ ವೇಳೆ ರಾಜ್ಯಪಾಲರ ವಿಶೇಷಾಧಿಕಾರಿ ರಮೇಶ್‌ (ಕಪ್ಪು ಸೂಟು ಧರಿಸಿರುವವರು) ಅಧಿಕಾರಿಗಳ ಗ್ಯಾಲರಿಯಲ್ಲಿ ಇದ್ದರು. ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಇದ್ದಾರೆ.  –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌
ಗುರುವಾರ ನಡೆದ ಕಲಾಪದ ವೇಳೆ ರಾಜ್ಯಪಾಲರ ವಿಶೇಷಾಧಿಕಾರಿ ರಮೇಶ್‌ (ಕಪ್ಪು ಸೂಟು ಧರಿಸಿರುವವರು) ಅಧಿಕಾರಿಗಳ ಗ್ಯಾಲರಿಯಲ್ಲಿ ಇದ್ದರು. ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಇದ್ದಾರೆ.  –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌   

ಬೆಂಗಳೂರು: ಮೈತ್ರಿ ಸರ್ಕಾರದ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು, ಶುಕ್ರವಾರ ಮಧ್ಯಾಹ್ನದೊಳಗೆ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಇದರಿಂದಾಗಿ, 12 ದಿನಗಳಿಂದ ನಡೆಯುತ್ತಿರುವ ರಾಜಕೀಯ ಮೇಲಾಟ–ಸೆಣಸಾಟಗಳಿಗೆ ತೆರೆ ಬೀಳುವ ಸಾಧ್ಯತೆ ಇದೆ.

ಸರ್ಕಾರವನ್ನು ಉಳಿಸಿಕೊಳ್ಳುವ ನಾನಾ ಯತ್ನಗಳನ್ನು ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ನಿರಂತರವಾಗಿ ನಡೆಸಿತು. ಮೇಲಿಂದ ಮೇಲೆ ಶಾಸಕರು ರಾಜೀನಾಮೆ ಕೊಟ್ಟು ಅತೃಪ್ತರ ಬಣ ಸೇರಿಕೊಳ್ಳತೊಡಗಿದರು. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ತಯಾರಿ ನಡೆಸುತ್ತಿದ್ದಂತೆ ವಿಶ್ವಾಸ ಮತ ಯಾಚನೆಯ ಅಸ್ತ್ರವನ್ನು ಕುಮಾರಸ್ವಾಮಿ ಅವರೇ ಮುಂದಿಟ್ಟರು. ಜುಲೈ18ಕ್ಕೆ ವಿಶ್ವಾಸ ಮತ ಯಾಚನೆಗೆ ದಿನಾಂಕವೂ ನಿಗದಿಯಾಯಿತು.

ADVERTISEMENT

ಅತೃಪ್ತರ ಮನವೊಲಿಕೆ, ಪ್ರತಿ ಆಪರೇಷನ್‌ ಯತ್ನಗಳನ್ನೂ ಈ ಅವಧಿಯಲ್ಲಿ ‘ದೋಸ್ತಿ’ ನಾಯಕರು ನಡೆಸಿದರು. ಆದರೆ, ಅವು ಫಲ ಕೊಟ್ಟಂತೆ ಕಾಣಲಿಲ್ಲ.

ಗುರುವಾರ ಕಲಾಪ ಆರಂಭ ವಾದಾಗ ವಿಶ್ವಾಸಮತ ಯಾಚನೆಯ ಪ್ರಸ್ತಾವವನ್ನು ಮುಖ್ಯಮಂತ್ರಿ ಮಂಡಿಸಿದರು. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುತ್ತದೆಯೇ, ಇಲ್ಲವೇ ಎಂಬ ಚರ್ಚೆಯನ್ನು ಕಾಂಗ್ರೆಸ್‌ ನಾಯಕರು ಮುನ್ನೆಲೆಗೆ ತಂದಾಗ ಬಿಜೆಪಿ ನಾಯಕರು ರಾಜಭವನದ ಮೆಟ್ಟಿಲೇರಿದರು.

‘ಅಲ್ಪಮತಕ್ಕೆ ಕುಸಿದಿದ್ದರೂ ವಿಶ್ವಾಸ ಮತದ ನಿರ್ಣಯವನ್ನು ಮತಕ್ಕೆ ಹಾಕುವ ಸಮಯವನ್ನು ಮುಂದಿನವಾರದವರೆಗೂ ಮುಂದೂಡಲು ಮುಖ್ಯಮಂತ್ರಿ ಯತ್ನಿಸುತ್ತಿದ್ದು, ಸರ್ಕಾರ ಉಳಿಸಿಕೊಳ್ಳಲು ವಾಮಮಾರ್ಗ ಹಿಡಿದಿದ್ದಾರೆ. ಇದಕ್ಕೆ ಸಭಾಧ್ಯಕ್ಷರು ಕೂಡ ಅನುವು ಮಾಡಿಕೊಡುತ್ತಿದ್ದಾರೆ’ ಎಂದು ಬಿಜೆಪಿ ನಾಯಕರು ರಾಜ್ಯಪಾಲರಿಗೆ ದೂರಿದರು.

ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ರಾಜ್ಯಪಾಲ ವಾಲಾ ಅವರು, ‘ಗುರುವಾರದ ಕಲಾಪ ಅಂತ್ಯವಾಗುವುದರೊಳಗೆ ವಿಶ್ವಾಸ ಮತ ಸಾಬೀತಿನ ಪ್ರಕ್ರಿಯೆ ಮುಗಿಸಿ’ ಎಂದು ಸಭಾಧ್ಯಕ್ಷ ಕೆ.ಆರ್‌. ರಮೇಶ್ ಕುಮಾರ್ ಅವರಿಗೆ ‘ಸಂದೇಶ’ ಕಳುಹಿಸಿದರು. ಜತೆಗೆ, ಕಲಾಪ ವೀಕ್ಷಣೆಗೆ ತಮ್ಮ ವಿಶೇಷ ಕಾರ್ಯದರ್ಶಿ ಸಹಿತ ಮೂವರು ಅಧಿಕಾರಿಗಳನ್ನು ವಿಧಾನಸಭೆಯ ಅಧಿಕಾರಿಗಳ ಗ್ಯಾಲರಿಗೆ ಕಳುಹಿಸಿದರು. ಅವರಿಂದ ವರದಿಯನ್ನೂ ಪಡೆದರು.

ರಾಜ್ಯಪಾಲರ ಸಂದೇಶವನ್ನು ಸದನಕ್ಕೆ ತಿಳಿಸಿದ ಸಭಾಧ್ಯಕ್ಷರು, ‘ಸಾಂವಿಧಾನಿಕವಾಗಿ ತಮ್ಮ ಹುದ್ದೆಯ ಹೊಣೆಯನ್ನು ನಿರ್ವಹಿಸುವೆ’ ಎಂದಷ್ಟೇ ತಿಳಿಸಿದರು.

‘ರಾಜ್ಯಪಾಲರ ಸಂದೇಶವನ್ನು ಪಾಲಿಸಿ’ ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದು ಗದ್ದಲ ನಡೆಸಿ, ಧಿಕ್ಕಾರ ಕೂಗಿದರು. ಆಡಳಿತಾರೂಢ ಜೆಡಿಎಸ್‌–ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ಧಿಕ್ಕಾರ ಮೊಳಗಿಸಿದರು. ಇದರಿಂದ ಕಲಾಪ ಹಾದಿ ತಪ್ಪಿತು. ಸಭಾಧ್ಯಕ್ಷರ ಪೀಠದಲ್ಲಿದ್ದ ಉಪ ಸಭಾಧ್ಯಕ್ಷ ಕೃಷ್ಣಾರೆಡ್ಡಿ ಎರಡು ಬಾರಿ ಸದನವನ್ನು ಮುಂದೂಡಿ, ಮತ್ತೆ ಆರಂಭಿಸಿದರು. ಆದರೂ ಗಲಾಟೆ ಮುಂದುವರಿಯಿತು. ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕದೇ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು. ಬಿಜೆಪಿಯವರು ಅಹೋರಾತ್ರಿ ಧರಣಿ ನಡೆಸಿದರು.

ಈ ಎಲ್ಲ ವಿದ್ಯಮಾನಗಳ ಬಗ್ಗೆ ವರದಿ ತರಿಸಿಕೊಂಡ ರಾಜ್ಯಪಾಲರು, ರಾತ್ರಿ ಎಂಟೂವರೆ ಸುಮಾರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮೂರು ಪುಟಗಳ ಪತ್ರ ಬರೆದು, ವಿಶ್ವಾಸ ಮತ ಸಾಬೀತುಪಡಿಸುವ ಗಡುವನ್ನೂ ವಿಧಿಸಿದರು.

ಉಳಿವಿಗೆ ‘ದೋಸ್ತಿ’ಗಳ ಕೊನೆಯತ್ನ

*15 ಶಾಸಕರಿಗೆ ವಿಪ್ ಅನ್ವಯವಾಗುತ್ತದೆಯೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇದರಿಂದ ಪಕ್ಷಾಂತರ ನಿಷೇಧ ಕಾಯ್ದೆಯ ಮೂಲ ಆಶಯಕ್ಕೆ ಧಕ್ಕೆ ಬರಲಿದ್ದು, ರಾಜಕೀಯ ಪಕ್ಷಗಳ ಅಧಿಕಾರವನ್ನು ಮೊಟಕುಗೊಳಿಸಿದಂತಾಗುತ್ತದೆ. ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಬೇಕು ಹಾಗೂ ಈ ವಿಷಯ ಇತ್ಯರ್ಥವಾಗುವವರೆಗೆ ವಿಶ್ವಾಸ ಮತ ಸಾಬೀತುಪಡಿಸುವ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ ಮೊರೆ ಹೋಗಲು ಮೈತ್ರಿಕೂಟದ ನಾಯಕರು ನಿರ್ಧರಿಸಿದ್ದಾರೆ.

*ಸುಪ‍್ರೀಂಕೋರ್ಟ್‌ ನೆರವಿಗೆ ಬರದೇ ಇದ್ದರೆ ಅನಿವಾರ್ಯವಾಗಿ ವಿಶ್ವಾಸ ಮತ ಸಾಬೀತುಪಡಿಸಬೇಕಾಗುತ್ತದೆ. ಆಗ ಬಿಜೆಪಿಯ ಕೆಲವು ಶಾಸಕರು ಗೈರಾಗುವಂತೆ ಮಾಡಿ ವಿಶ್ವಾಸಮತ ಗೆಲ್ಲುವ ಕಸರತ್ತು ನಡೆಸುವುದು. ಆದರೆ, ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ ಎನ್ನಲಾದ 15 ಅತೃಪ್ತ ಶಾಸಕರು ತಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಈಗಾಗಲೇ ಪ್ರತಿಪಾದಿಸಿದ್ದಾರೆ. ತಮ್ಮವರೇ ಕೈಕೊಟ್ಟ ಮೇಲೆ, ಸರ್ಕಾರ ರಚನೆಯ ಉತ್ಸಾಹದಲ್ಲಿರುವ ಬಿಜೆಪಿ ಶಾಸಕರು ಬರುವ ಸಾಧ್ಯತೆ ಕಡಿಮೆ ಎಂಬ ಲೆಕ್ಕಾಚಾರವೂ ಮೈತ್ರಿ ನಾಯಕರಲ್ಲಿದೆ.

*ಯಾವ ತಂತ್ರವೂ ಫಲಿಸದಿದ್ದರೆ, ವಿದಾಯದ ಭಾಷಣ ಮಾಡಿ ವಿಶ್ವಾಸ ಮತ ಯಾಚಿಸದೇ ರಾಜೀನಾಮೆ ಕೊಡುವುದು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.