ADVERTISEMENT

ಜೆಡಿಎಸ್ ವಾಹನದ‌ ಮೇಲೆ ಕಲ್ಲು ತೂರಾಟ: ಬಿಜೆಪಿ - ಕಾಂಗ್ರೆಸ್ ಕುಮ್ಮಕ್ಕು ಆರೋಪ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 2:20 IST
Last Updated 7 ಮಾರ್ಚ್ 2023, 2:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೇವದುರ್ಗ (ರಾಯಚೂರು ಜಿಲ್ಲೆ): ಜೆಡಿಎಸ್ ಪಂಚರತ್ನ ಪ್ರಚಾರ ವಾಹನದ ಮೇಲೆ ತಾಲ್ಲೂಕಿನ ದೇವತ್ಕಲ್‌ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರು ಭಾನುವಾರ ಕಲ್ಲು ತೂರಾಟ ಮಾಡಿದ್ದರಿಂದ ಮೂವರು ಗಾಯ ಗೊಂಡಿದ್ದರು.

ಈ ದಾಳಿಗೆ ಪ್ರಚೋದನೆ ನೀಡಿದವರ ವಿರುದ್ಧ ದೂರು ದಾಖಲಿಸುವಂತೆ ಜಾಲಹಳ್ಳಿ ಪೊಲೀಸ್‌ ಠಾಣೆ ಎದುರು ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ ನೇತೃತ್ವದಲ್ಲಿ ಅಹೋರಾತ್ರಿವರೆಗೂ ಪ್ರತಿಭಟನೆ ನಡೆಯಿತು.

ಪೊಲೀಸರು ದೂರು ದಾಖಲಿಸಿಕೊಳ್ಳದಿರುವುದಕ್ಕೆ ಸೋಮವಾರ ಪ್ರತಿಕ್ರಿಯೆ ನೀಡಿದ ಕರೆಮ್ಮ, ‘ಬಿಜೆಪಿ ಶಾಸಕ ಶಿವನಗೌಡ ನಾಯಕ ಹಾಗೂ ಕಾಂಗ್ರೆಸ್ ಕಡೆಯವರ ಕುಮ್ಮಕ್ಕಿನಿಂದ ಜೆಡಿಎಸ್‌ನವರ ಮೇಲೆ ಹಲ್ಲೆ ಕೃತ್ಯ ಮರುಕಳಿಸುತ್ತಿವೆ. ದೇವದುರ್ಗದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ’ ಎಂದರು.

ADVERTISEMENT

‘ಗೂಂಡಾಗಿರಿಗೆ ತಲೆ ಬಾಗುವುದಿಲ್ಲ’
ಬೆಂಗಳೂರು:
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ನಡೆಸುವ ಗೂಂಡಾಗಿರಿಗೆ ತಮ್ಮ ಕಾರ್ಯಕರ್ತರು ತಲೆ ಬಾಗುವುದಿಲ್ಲ ಎಂದು ಜೆಡಿಎಸ್‌ ಹೇಳಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಜೆಡಿಎಸ್‌ ಪ್ರಚಾರ ವಾಹನದ ಮೇಲೆ ಭಾನುವಾರ ರಾತ್ರಿ ಕಲ್ಲು ತೂರಾಟ ನಡೆದ ಪ್ರಕರಣ ಕುರಿತು ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯಿಂದ ಸೋಮವಾರ ಪ್ರತಿಕ್ರಿಯಿಸಿದ್ದು, ‘ಸಿದ್ಧಾಂತದ ಮೂಲಕ ಜೆಡಿಎಸ್‌ ಅನ್ನು ಎದುರಿಸಲಾಗದೆ ದಾಳಿ ನಡೆಸಿದ್ದಾರೆ’ ಎಂದು ಹೇಳಿದೆ.

ತೋಳ್ಬಲದಿಂದ ಜೆಡಿಎಸ್‌ ಪಕ್ಷವನ್ನು ಹೆದರಿಸಬಹುದು ಎಂದು ತಿಳಿದಿದ್ದರೆ ಅದು ಭ್ರಮೆ. ಇಂತಹ ಪ್ರವೃತ್ತಿಯನ್ನು ಕಾರ್ಯಕರ್ತರಿಗೆ ಹೇಳಿಕೊಟ್ಟಿರುವ ಎರಡೂ ಪಕ್ಷಗಳ ನಾಯಕರಿಗೆ ಅಧಿಕಾರದ ಮದ ಏರಿದೆ. ದಾಳಿ ನಡೆಸಿದ ಆರೋಪಿಗಳನ್ನು ಪೊಲೀಸರು ತಕ್ಷಣ ಬಂಧಿಸಬೇಕು ಎಂದು ಅವರು ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.