ಬೆಂಗಳೂರು: ‘ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರದಲ್ಲಿ ಮತ ಕಳವು ನಡೆದಿರುವುದನ್ನು ನಮ್ಮ ನಾಯಕ ರಾಹುಲ್ ಗಾಂಧಿ ಅವರು ಪುರಾವೆಗಳ ಸಮೇತ ಸಾಬೀತುಪಡಿಸಿದ್ದಾರೆ. ಪಕ್ಷದ ನಾಯಕರು ಮಾಡಿರುವ ಆರೋಪಗಳಿಗೆ ಚುನಾವಣಾ ಆಯೋಗ ಉತ್ತರ ನೀಡಬೇಕು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ಮಹದೇವಪುರದಲ್ಲಿ ಮತ ಕಳವು ನಡೆದಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಾತ್ಯಕ್ಷಿಕೆ ಸಹಿತ ವಿವರಿಸಿದ ಪ್ರಿಯಾಂಕ್, ‘ಈ ಪ್ರಕರಣದಲ್ಲಿ ಕಾನೂನು ಹೋರಾಟಕ್ಕೆ ತೀರ್ಮಾನಿಸಿದ್ದೇವೆ’ ಎಂದರು.
‘ಚುನಾವಣಾ ಆಯೋಗದ ನಿಯಮ ಮೀರಿ ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಶೇಕಡಾ 4ರಷ್ಟು ಮತದಾರರ ಸಂಖ್ಯೆ ಹೆಚ್ಚಾಗಿದೆ. ಹಾಗಾದರೆ, ಚುನಾವಣಾ ಆಯೋಗ ನಿಯಮ ಮೀರಿ ಕೆಲಸ ಮಾಡುತ್ತಿದೆಯೇ’ ಎಂದೂ ಅವರು ಪ್ರಶ್ನಿಸಿದರು.
ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಮಾತನಾಡಿ, ‘ಚುನಾವಣಾ ಆಯೋಗದವರು ಈ ಅಕ್ರಮವನ್ನು ತನಿಖೆ ಮಾಡಲು ಏಕೆ ಹಿಂದೇಟು ಹಾಕುತ್ತಿದ್ದಾರೆ. ಅಕ್ರಮಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಯಾವುದೇ ಪ್ರಕ್ರಿಯೆಗಳನ್ನು ಚುನಾವಣಾ ಆಯೋಗ ಪೂರ್ಣಗೊಳಿಸಿಲ್ಲ. ಆಯೋಗವು ಸಂವಿಧಾನಿಕವಾಗಿ ನಡೆದುಕೊಳ್ಳುತ್ತಿಲ್ಲ’ ಎಂದರು.
‘ಮತದಾರನನ್ನು ಹೇಗೆ ಪಟ್ಟಿಗೆ ಸೇರಿಸಬೇಕು, ಪಟ್ಟಿಯಿಂದ ಕೈ ಬಿಡಬೇಕು ಎನ್ನುವ ನಿಯಮಗಳನ್ನೇ ಪಾಲನೆ ಮಾಡಿಲ್ಲ. ದಾರಿ ತಪ್ಪಿಸಲು ಆಯೋಗವು ಕೆಲಸ ಮಾಡುತ್ತಿದೆ. ಇದರಿಂದ ಆಯೋಗದ ಮೇಲೆ ಸಂಶಯ ಉಂಟಾಗುತ್ತಿದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.