ADVERTISEMENT

ಡಿಕೆಶಿ ನೀವು ಕೊತ್ವಾಲ್ ಶಿಷ್ಯ, ಸದನದಲ್ಲೂ ಅದೇ ರೀತಿ ವರ್ತಿಸುವುದು ತರವೇ –ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಫೆಬ್ರುವರಿ 2022, 10:45 IST
Last Updated 16 ಫೆಬ್ರುವರಿ 2022, 10:45 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಸಚಿವ ಕೆ.ಎಸ್‌. ಈಶ್ವರಪ್ಪ ನೀಡಿದ್ದ ಹೇಳಿಕೆ ಬುಧವಾರ ವಿಧಾನಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್– ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಡಿ.ಕೆ.ಶಿವಕುಮಾರ್ ಅವರೇ, ನೀವು ಕೊತ್ವಾಲ್ ಶಿಷ್ಯ ಎಂಬ ಮಾತ್ರಕ್ಕೆ ಸದನದಲ್ಲೂ ಅದೇ ಶೈಲಿಯಲ್ಲಿ ವರ್ತಿಸುವುದು ತರವೇ? ಒಬ್ಬ ಸಚಿವರ ವಿರುದ್ಧ ಕೈ ಮಿಲಾಯಿಸುವ ವರ್ತನೆ ತೋರಿದ್ದರಿಂದ ಇಂದು ಸದನದಲ್ಲಿ ಕೋಲಾಹಲ ನಿರ್ಮಾಣವಾಗಿದೆ. ವಿಧಾನಸಭೆಯ ಮಹತ್ವ ನಿಮಗೆ ತಿಳಿದಿದೆಯೇ? ಎಂದು #ಕಾಂಗ್ರೆಸ್‌ಗೂಂಡಾಗಿರಿ ಎಂಬ ಹ್ಯಾಷ್‌ಟ್ಯಾಗ್‌ ಉಲ್ಲೇಖಿಸಿ ವಾಗ್ದಾಳಿ ನಡೆಸಿದೆ.

‘ರಾಷ್ಟ್ರ ಧ್ವಜದ ಬಗ್ಗೆ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪ್ರಹಸನವನ್ನು ನೋಡಿದಾಗ ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದೇ ಭಾಸವಾಗುತ್ತದೆ. ಸಚಿವರ ಹೇಳಿಕೆಯ ಆಯ್ದ ಭಾಗವನ್ನಷ್ಟೇ ಇಟ್ಟುಕೊಂಡು ನಿಲುವಳಿ ಸೂಚನೆಗೆ ಆಗ್ರಹಿಸುತ್ತಿರುವುದು ಸಂಸದೀಯ ನಡಾವಳಿಯಲ್ಲ’ ಎಂದು ಬಿಜೆಪಿ ಕಿಡಿಕಾರಿದೆ.

ADVERTISEMENT

ಮತ್ತೊಂದು ಟ್ವೀಟ್ ಮಾಡಿರುವ ಬಿಜೆಪಿ, ‘ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರೇ, ಸದನದಲ್ಲಿ ಸಚಿವ ಈಶ್ವರಪ್ಪ ಅವರು ಹೇಳಿದ ಮಾತಿನಲ್ಲಿ ತಪ್ಪೇನಿದೆ?, ನೀವು ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವುದು ಸುಳ್ಳೇ?, ಜಾಮೀನು ವಜಾಗೊಂಡರೆ ನೀವು ಮತ್ತೆ ಜೈಲಿಗೆ ಹೋಗುವುದು ನಿಜವಲ್ಲವೇ? ಸತ್ಯ ಹೇಳಿದರೆ ಕೆಂಡದಂಥ ಕೋಪವೇಕೆ?’ ಎಂದು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.