ADVERTISEMENT

ಸದನಕ್ಕೆ ಖಂಡಿತ ಬರುವುದಿಲ್ಲ: ರಾಮಲಿಂಗಾ ರೆಡ್ಡಿ ವಿರುದ್ಧ ಅತೃಪ್ತ ಶಾಸಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 19:46 IST
Last Updated 18 ಜುಲೈ 2019, 19:46 IST
ಎಸ್‌.ಟಿ. ಸೋಮಶೇಖರ್‌
ಎಸ್‌.ಟಿ. ಸೋಮಶೇಖರ್‌   

ಬೆಂಗಳೂರು: ‘ರಾಮಲಿಂಗಾ ರೆಡ್ಡಿ ನಮಗೆ ಮೋಸ ಮಾಡಿದ್ದಾರೆ. ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಹೇಳಿ ಈಗ ವಾಪಸ್ ಪಡೆದಿದ್ದಾರೆ. ನಾವು ಯಾವುದೇ ಕಾರಣಕ್ಕೂ ಅವರನ್ನು ಹಿಂಬಾಲಿಸುವುದಿಲ್ಲ, ಸದನಕ್ಕೆ ಬರುವುದಿಲ್ಲ’ ಎಂದು ಅತೃಪ್ತ ಶಾಸಕರು ಹೇಳಿದ್ದಾರೆ.

ಅತೃಪ್ತ ಶಾಸಕರ ಪರವಾಗಿ ಎಸ್‌.ಟಿ.ಸೋಮಶೇಖರ್‌ ಗುರುವಾರ ಈ ಹೇಳಿಕೆ ಬಿಡುಗಡೆ ಮಾಡಿದ್ದು, ‘ರಾಮಲಿಂಗಾ ರೆಡ್ಡಿ ನಮ್ಮ ಜತೆ ಚರ್ಚೆ ಮಾಡುವಾಗ ರಾಜೀನಾಮೆ ವಾಪಸ್‌ಪಡೆಯುವುದಿಲ್ಲ ಎಂದು ಹೇಳಿ ಈಗ ಅದರ ವಿರುದ್ದವಾಗಿ ನಡೆದುಕೊಂಡಿದ್ದಾರೆ. ಆದರೆ ನಾವು ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಕಾಂಗ್ರೆಸ್ ನಾಯಕರ ಒತ್ತಡದಿಂದ ರಾಜೀನಾಮೆ ವಾ‍ಪಸ್‌ಪಡೆಯುವುದಾಗಿ ಹೇಳಿದ್ದಾರೆ. ಮುನಿರತ್ನ, ಬೈರತಿ ‌ಬಸವರಾಜು‌ ನಾವೆಲ್ಲರೂ ‌ನಮ್ಮ ನಿರ್ಧಾರಕ್ಕೆ ಬದ್ಧ’ ಎಂದಿದ್ದಾರೆ.

ADVERTISEMENT

ವಿಧಾನಸಭಾ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಗಿದ್ದು, ಅತೃಪ್ತರು ಬರುವ ಸಾಧ್ಯತೆ ಇಲ್ಲ. ಕಲಾಪ ಸೋಮವಾರದವರೆಗೆ ವಿಸ್ತರಿಸಿದರೂ ಶಾಸಕರು ಬರಲಾರರು ಎಂದೇ ಹೇಳಲಾಗುತ್ತಿದೆ. ಮತ್ತೊಂದೆಡೆಯಲ್ಲಿ ಗುರುವಾರ ಕಲಾಪಕ್ಕೆ ಬಂದ ಶಾಸಕರಲ್ಲೇ ಕೆಲವರನ್ನು ಹಿಡಿದಿಟ್ಟುಕೊಳ್ಳಲು ಮೂರೂ ಪಕ್ಷಗಳು ಹರಸಾಹಸ ಮಾಡುತ್ತಿವೆ.

ನಾಲ್ಕನೇ ದಿನವೂ ನಡೆಯದ ವಿಧಾನ ಪರಿಷತ್ ಕಲಾಪ
ಬೆಂಗಳೂರು:
ವಿಧಾನ ಪರಿಷತ್ ಕಲಾಪ ನಾಲ್ಕನೇ ದಿನವೂ ನಡೆಯಲಿಲ್ಲ. ಬಿಜೆಪಿ ಸದಸ್ಯರ ಧರಣಿಯು ನಾಲ್ಕು ದಿನಗಳ ಕಲಾಪವನ್ನು ನುಂಗಿಹಾಕಿತು.

ಗುರುವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷ ಬಿಜೆಪಿ ಸದಸ್ಯರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಧರಣಿ ಮುಂದುವರಿಸಿದರು. ಸಭೆಯನ್ನು ಮಧ್ಯಾಹ್ನ 3.30ಕ್ಕೆ ಮುಂದೂಡಲಾಯಿತು. ಮಧ್ಯಾಹ್ನ ಸದನ ಸೇರಿದಾಗಲೂ ಧರಣಿ ನಿಲ್ಲದ ಹಿನ್ನೆಲೆಯಲ್ಲಿ ಸಂಜೆ 5.40 ಗಂಟೆಗೆ ಮುಂದಕ್ಕೆ ಹಾಕಲಾಯಿತು. ಸಂಜೆಯ ಕಲಾಪದಲ್ಲೂ ಗದ್ದಲ ನಿಲ್ಲದೆ ಕೊನೆಗೆ ಶುಕ್ರವಾರಕ್ಕೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.