
ಬೆಂಗಳೂರು: 16ನೇ ವಿಧಾನಸಭೆ ಅಸ್ತಿತ್ವಕ್ಕೆ ಬಂದ ನಂತರ ವಿವಿಧ ಇಲಾಖೆಗಳ ಸಚಿವರು ಸದನಕ್ಕೆ ನೀಡಿದ್ದ ಭರವಸೆಗಳ ತ್ವರಿತ ಈಡೇರಿಕೆಯತ್ತ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಚಿತ್ತ ಹರಿಸಿದ್ದಾರೆ.
ಈ ಕುರಿತು ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಸದಸ್ಯರು ಸದನದಲ್ಲಿ ಕೇಳಿದ ಪ್ರಶ್ನೆಗಳಿಗೆ ಕಾಲಮಿತಿಯ ಒಳಗೆ ಉತ್ತರ ನೀಡುವುದು, ಕೊಟ್ಟ ಭರವಸೆಗಳನ್ನು ತ್ವರಿತವಾಗಿ ಈಡೇರಿಸುವುದು ಪ್ರತಿಯೊಂದು ಇಲಾಖೆಯ ಜವಾಬ್ದಾರಿ. 2023-24ನೇ ಸಾಲಿನಿಂದ ಇಲ್ಲಿಯವರೆಗೂ ನಡೆದ ಏಳು ಅಧಿವೇಶನಗಳಲ್ಲಿ ನೀಡಿದ್ದ ಭರವಸೆಗಳಲ್ಲಿ ಬಾಕಿ ಇರುವ ಎಲ್ಲವನ್ನೂ ತಕ್ಷಣ ಇತ್ಯರ್ಥಪಡಿಸಲು ಪ್ರತಿ ಇಲಾಖೆಯ ಮುಖ್ಯಸ್ಥರಿಗೂ ಸೂಚಿಸಲಾಗಿದೆ’ ಎಂದರು.
‘ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡುತ್ತಾ ಬರಲಾಗಿದೆ. ಆದರೆ, ಹತ್ತು ಹಲವು ಕಾರಣಗಳಿಂದ ಪೂರ್ವಸಿದ್ಧತೆಯಂತೆ ಚರ್ಚೆಗಳು ಸಾಗುತ್ತಿಲ್ಲ. ಸಚಿವರು ನೀಡಿದ ಕೆಲ ಭರವಸೆಗಳು ಹಾಗೆಯೇ ಉಳಿದಿವೆ. ಮತ್ತೆ ಮುಂದಿನ ಅಧಿವೇಶನದಲ್ಲೂ ಅವೇ ಸಮಸ್ಯೆಗಳು ಪುನರಾವರ್ತನೆಯಾಗುತ್ತಿವೆ. ಈ ಬಾರಿ ಆರಂಭದಿಂದಲೇ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡುವ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ಜತೆ ಚರ್ಚಿಸಲಾಗುವುದು. ನೀಡಿದ ಭರವಸೆಗಳ ಈಡೇರಿಕೆಗೆ ಕಾಲಮಿತಿ ನಿಗದಿ ಮಾಡಲಾಗುವುದು’ ಎಂದು ಹೇಳಿದರು.
‘ಕಳೆದ ಬಾರಿ 39 ಮಸೂದೆಗಳನ್ನು ಸದನದಲ್ಲಿ ಮಂಡಿಸಲಾಯಿತು. 37 ಮಸೂದೆಗಳನ್ನು ಅಂಗೀಕರಿಸಲಾಯಿತು. ಎಲ್ಲ ಮಸೂದೆಗಳ ಮೇಲೆ ಚರ್ಚೆಗೆ ಅವಕಾಶ ನೀಡಲಾಗಿತ್ತು. ಅದಕ್ಕಾಗಿ ಸಾಕಷ್ಟು ಸಮಯ ಮೀಸಲಿಡಲಾಯಿತು. ಸಾರ್ವಜನಿಕ ಹಿತದೃಷ್ಟಿಯಿಂದ ಮಸೂದೆಗಳ ಅಂಗೀಕಾರ ಅನಿವಾರ್ಯ. ಸದನದ ಮೊದಲ ಆದ್ಯತೆಯೇ ಮಸೂದೆಗಳು. ಹಾಗಾಗಿ, ಅಂಗೀಕಾರ ಪ್ರಕ್ರಿಯೆ, ಚರ್ಚೆ ನಡೆಸಲೇಬೇಕು. ಆದರೆ, ಸದನಕ್ಕೆ ಹೊರೆಯಾಗುತ್ತಿರುವುದು ಅನಗತ್ಯವಾದ ನಿಲುವಳಿ ಸೂಚನೆಗಳು. ಇಂತಹ ವಿಷಯಗಳಲ್ಲಿ ಆಡಳಿತ, ವಿರೋಧ ಪಕ್ಷಗಳ ಸದಸ್ಯರು ಸಹಕಾರ ನೀಡಬೇಕಾಗುತ್ತದೆ. ಕೆಲವೊಮ್ಮೆ ಅನಿರೀಕ್ಷಿತ ಬೆಳೆವಣಿಗಳು ಕಲಾಪಗಳ ಮೇಲೆ ಪರಿಣಾಮ ಬೀರಿ ಸಮಯ ವ್ಯರ್ಥ ಮಾಡುತ್ತವೆ’ ಎಂದರು.
ಸದನದಲ್ಲಿ ಎಲ್ಲ ಸಚಿವರೂ ಕಡ್ಡಾಯವಾಗಿ ಹಾಜರಿದ್ದರೆ ಸಹಜವಾಗಿ ಶಾಸಕರೂ ಇರುತ್ತಾರೆ. ಸಚಿವರು ಹೊರ ಹೋದರೆ ಹಲವು ಶಾಸಕರು ಅವರನ್ನು ಹಿಂಬಾಲಿಸುತ್ತಾರೆ. ಸದನದ ಅಮೂಲ್ಯ ಸಮಯ ಚರ್ಚೆಗಳನ್ನು ಅರ್ಥಪೂರ್ಣಗೊಳಿಸಲು ಎಲ್ಲ ಸಚಿವರೂ ಪೂರ್ಣ ಸಮಯ ಮೀಸಲಿಡಲು ಕೋರಲಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.
ಶಾಸಕರು ಬೇರೆ ಸಮಯಗಳಲ್ಲಿ ಕ್ಷೇತ್ರದ ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಸದನ ನಡೆಯುವಾಗ ಅಲ್ಲಿಗೆ ತಮ್ಮನ್ನು ಕಾಣಲು ಬರುವಂತೆ ಹೇಳಬಾರದು. ಸದನ ನಡೆಯುವಾಗ ಅವರ ಸಮಸ್ಯೆ ಆಲಿಸುತ್ತಾ ಹೊರಗೆ ಕುಳಿತು ಗೈರು ಹಾಜರಾದರೆ ಸದನದಲ್ಲಿ ಜನರ ಸಮಸ್ಯೆಗೆ ಧ್ವನಿಯಾಗುವುದು ಹೇಗೆ? ಎಲ್ಲ ಶಾಸಕರೂ ಸದನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಕ್ಷೇತ್ರದ ಜನರೂ ಒತ್ತಾಯ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.