ADVERTISEMENT

ಒಪಿಎಸ್‌ ಜಾರಿಗೊಳಿಸದಿದ್ದರೆ ಕರ್ನಾಟಕ ಬಂದ್‌: ಸಿ.ಎಸ್‌. ಷಡಾಕ್ಷರಿ ಎಚ್ಚರಿಕೆ

ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘದ 2ನೇ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಸಿ.ಎಸ್‌.ಷಡಾಕ್ಷರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 14:16 IST
Last Updated 18 ಜನವರಿ 2026, 14:16 IST
<div class="paragraphs"><p>ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘದ&nbsp;2ನೇ ರಾಜ್ಯ ಕಾರ್ಯಕಾರಿಣಿ ಸಭೆ</p></div>

ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘದ 2ನೇ ರಾಜ್ಯ ಕಾರ್ಯಕಾರಿಣಿ ಸಭೆ

   

ದಾವಣಗೆರೆ: ‘ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್‌) ಮರು ಜಾರಿಗೊಳಿಸುವ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ, ಅನಿವಾರ್ಯವಾಗಿ ರಾಜ್ಯವನ್ನು ಬಂದ್ ಮಾಡುವ ಮೂಲಕ ಹೋರಾಟ ನಡೆಸಲಾಗುವುದು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಎಚ್ಚರಿಕೆ ನೀಡಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ನಡೆದ ‘ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘ’ದ 2ನೇ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.

ADVERTISEMENT

‘ಹೋರಾಟದ ಕಾರಣಕ್ಕೆ ನನ್ನ ಅಮಾನತು ಮಾಡಿದರೂ, ಬಂಧಿಸಿದರೂ ಹೆದರುವುದಿಲ್ಲ. ದೇವರು ಬದುಕು ನೀಡಿದ್ದಾನೆ. ಸಾಮರ್ಥ್ಯದ ಮೇಲೆ ಸರ್ಕಾರಿ ಉದ್ಯೋಗ ದೊರೆತಿದೆ. ನನ್ನ ಜೀವ ತೆಗೆಯುವ, ಸರ್ಕಾರಿ ಉದ್ಯೋಗ ಕಸಿಯುವ ಅಧಿಕಾರ ಯಾರಿಗೂ ಇಲ್ಲ. ಯಾರ ಬೆದರಿಕೆಗಳಿಗೂ ಬಗ್ಗುವುದಿಲ್ಲ’ ಎಂದು ಹೇಳಿದರು.

‘ನಮ್ಮ ಹೋರಾಟ ಪ್ರವಾಹದ ರೀತಿ ಇರಬೇಕು. ಯಾರಾದರೂ ಅಧಿಕಾರಿ ಕಚೇರಿಯೊಳಗೆ ಹೋಗಿ ಕುಳಿತರೆ ಕೊರಳಪಟ್ಟಿ ಹಿಡಿದು ಹೊರದಬ್ಬಬೇಕು, ಈ ವಿಷಯದಲ್ಲಿ ಮುಲಾಜಿಲ್ಲ. ಇದರಲ್ಲಿ ನಮ್ಮ ಬದುಕಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜಸ್ಥಾನ, ಛತ್ತೀಸಗಡ, ಹಿಮಾಚಲ ಪ್ರದೇಶ, ಪಂಜಾಬ್‌, ಜಾರ್ಖಂಡ್‌ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಗ್ಯಾರಂಟಿ ಪೆನ್ಷನ್ ಸ್ಕೀಮ್ ಜಾರಿಗೊಳಿಸಲಾಗಿದೆ. ನಮ್ಮಲ್ಲೂ ಒಪಿಎಸ್‌ ಜಾರಿಯಾಗಲೇಬೇಕು’ ಎಂದು ಹೇಳಿದರು.

ಎಕೆಎನ್‌ಪಿಎಸ್‌ ರಾಜ್ಯ ಘಟಕದ ಅಧ್ಯಕ್ಷ ನಾಗನಗೌಡ ಎಂ.ಎ., ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಶಿವಣ್ಣ, ನೌಕರರ ಸಂಘದ ಉಪಾಧ್ಯಕ್ಷ ವೀರೇಶ್ ಎಸ್. ಒಡೇನಪುರ, ತಮಿಳುನಾಡಿನ ಎನ್‌ಪಿಎಸ್‌ನ ಸಂಚಾಲಕರಾದ ಫೆಡ್ರಿಕ್, ಸೆಲ್ವಿಕುಮಾರ್ ಭಾಗವಹಿಸಿದ್ದರು.

ಸಭೆಯಲ್ಲಿ ಕೈಗೊಂಡ ನಿರ್ಣಯಗಳು

* ಅಖಿಲ ಕರ್ನಾಟಕ ಎನ್‌ಪಿಎಸ್‌ ಸಂಘ ಒಪಿಎಸ್‌ ಮರು ಜಾರಿ ಕುರಿತು ಮುಂದಿನ ಹೋರಾಟವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದೊಂದಿಗೆ ನಡೆಸುವುದು.

* ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದೊಂದಿಗೆ ಜಿಲ್ಲೆ ಮತ್ತು ತಾಲ್ಲೂಕು ಹಂತದಲ್ಲಿ ಸಂಘಟನೆಯನ್ನು ಬಲಪಡಿಸುವುದು. ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ಎನ್‌ಪಿಎಸ್ ಅಧ್ಯಯನ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಲು ಒತ್ತಾಯಿಸುವುದು

* ಸರ್ಕಾರಿ ನೌಕರರ ಸಂಘ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸುವ ಎನ್‌ಪಿಎಸ್‌ ನೌಕರರ ಸಮ್ಮೇಳನದಲ್ಲಿ ರಾಜ್ಯದ ಎಲ್ಲಾ ಎನ್‌ಪಿಎಸ್ ನೌಕರರು ಭಾಗವಹಿಸುವುದು.

* ಒಪಿಎಸ್‌ ಮರುಜಾರಿಗೊಳಿಸುವ ವಿಚಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ಣಯಕ್ಕೆ ಬೆಂಬಲ ನೀಡುವುದು.

* ರಾಜ್ಯಾದ್ಯಂತ ಸರ್ಕಾರಿ ನೌಕರರ ಸಂಘದ ಭಾಗವಾಗಿ ಅಖಿಲ ಕರ್ನಾಟಕ ಎನ್‌ಪಿಎಸ್‌ ನೌಕರರ ಸಂಘಟನೆಯನ್ನು ಬಲಪಡಿಸುವುದು

* ಸಂಘದ ಮುಂದಿನ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದಲ್ಲಿ ನಡೆಸುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.