ಸಾಂದರ್ಭಿಕ ಚಿತ್ರ
ಬೆಂಗಳೂರು: ‘ಕರ್ನಾಟಕ ಬಂದ್’ಗೆ ಸಾರಿಗೆ ನಿಗಮಗಳು, ಮೆಟ್ರೊ ಬೆಂಬಲ ನೀಡಿಲ್ಲ. ಓಲಾ ಉಬರ್ ಡ್ರೈವರ್ಸ್ ಅಂಡ್ ಓನರ್ಸ್ ಅಸೋಸಿಯೇಷನ್, ಆಟೊ ರಿಕ್ಷಾ ಸಂಘಟನೆಗಳು ಬೆಂಬಲ ನೀಡಿವೆ.
ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲೆ ಮರಾಠಿಗರು ಹಲ್ಲೆ ಮಾಡಿರುವುದು ಸೇರಿದಂತೆ ವಿವಿಧ ಘಟನೆಗಳನ್ನು ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದ ಗುಂಪು ಮಾರ್ಚ್ 22ರಂದು ‘ಕರ್ನಾಟಕ ಬಂದ್’ ಮಾಡಲು ಕರೆ ನೀಡಿತ್ತು. ಈ ಕರೆಗೆ ಕೆಎಸ್‌ಆರ್‌ಟಿಸಿಯೇ ಬೆಂಬಲ ನೀಡದೆ ತಟಸ್ಥವಾಗಿದೆ.
‘ಕೆಎಸ್‌ಆರ್‌ಟಿಸಿ ನಿರ್ವಾಹಕನಿಗೆ ಮಸಿ ಬಳಿದು, ಸುಳ್ಳು ಪ್ರಕರಣ ದಾಖಲಿಸಿದಾಗ ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಸ್ಥಳಕ್ಕೆ ಹೋಗಿ ಪ್ರತಿಭಟನೆ ನಡೆಸಿತ್ತು. ಇದರಿಂದಾಗ ಸುಳ್ಳು ಪೋಕ್ಸೊ ಪ್ರಕರಣ ರದ್ದಾಗಿತ್ತು. ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳುವ ಭರವಸೆಯನ್ನು ಪೊಲೀಸ್ ಇಲಾಖೆ ನೀಡಿತ್ತು. ಎಲ್ಲ ಮುಗಿದ ಮೇಲೆ ಈಗ ಬಂದ್‌ಗೆ ಕರೆ ನೀಡಿರುವುದರಿಂದ ನಮ್ಮ ಬೆಂಬಲ ಇಲ್ಲ’ ಎಂದು ಫೆಡರೇಷನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ಸ್ಪಷ್ಟಪಡಿಸಿದ್ದಾರೆ.
‘ನಮ್ಮ ನೌಕರರಿಗೆ ತೊಂದರೆಯಾದರೆ, ನೆಲ, ಜಲ ವಿಚಾರಗಳಿಗೆ ಸಂಬಂಧಿಸಿದ್ದಾದರೆ ನಾವೂ ಬೆಂಬಲ ನೀಡುತ್ತೇವೆ. ಆದರೆ, ಬಂದ್ ಕರೆ ನೀಡಿದವರು ಬೇರೆ ಬೇರೆ ರಾಜಕೀಯ ವಿಚಾರಗಳನ್ನು ಕಾರಣವಾಗಿ ನೀಡಿದ್ದಾರೆ. ಹಾಗಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಆರ್‌ಟಿಸಿ, ಕೆಕೆಆರ್‌ಟಿಸಿ ಬಸ್‌ಗಳ ನೌಕರರು ಬೆಂಬಲ ನೀಡಿಲ್ಲ. ಬಸ್‌ಗಳು ಎಂದಿನಂತೆ ಸಂಚರಿಸಲಿವೆ’ ಎಂದು ತಿಳಿಸಿದ್ದಾರೆ.
ಒಕ್ಕೂಟದ 32 ಸಂಘಗಳಲ್ಲಿ 6 ಸಂಘಗಳ ಬೆಂಬಲ: ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದಲ್ಲಿ ಬಸ್, ಶಾಲಾ ವಾಹನ, ಆಟೊ, ಟ್ಯಾಕ್ಸಿ ಸೇರಿದಂತೆ ವಿವಿಧ ವಾಹನಗಳಿಗೆ ಸಂಬಂಧಿಸಿದ 32 ಸಂಘಗಳಿವೆ. ಅದರಲ್ಲಿ 6 ಸಂಘಗಳು ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿವೆ. 26 ಸಂಘಗಳು ನೈತಿಕ ಬೆಂಬಲವನ್ನಷ್ಟೇ ನೀಡಿದ್ದು, ಸಂಚಾರ ಇರಲಿದೆ ಎಂದು ಒಕ್ಕೂಟದ ಅಧ್ಯಕ್ಷ ಎಸ್. ನಟರಾಜ ಶರ್ಮ ತಿಳಿಸಿದ್ದಾರೆ.
‘ಪಿಯುಸಿ, ಸಿಬಿಎಸ್‌ಇ ಸೇರಿದಂತೆ ಪ್ರಮುಖ ಪರೀಕ್ಷೆಗಳು ಶನಿವಾರ ಇವೆ. ನಗರದಲ್ಲಿ ವಸತಿ ನಿಲಯ, ಪಿಜಿಗಳಲ್ಲಿದ್ದ ಮಕ್ಕಳು ಪರೀಕ್ಷೆಗೆ ಓದಲು ಮನೆಗೆ ತೆರಳಿದವರು ಶನಿವಾರ ಪರೀಕ್ಷೆ ಬರೆಯಲು ಬರುತ್ತಾರೆ. ನಾವು ವಾಹನ ಸಂಚಾರ ಬಂದ್ ಮಾಡಿದರೆ ಅವರಿಗೆ ತೊಂದರೆಯಾಗುತ್ತದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ, ಪ್ರವೀಣ್ ಕುಮಾರ್ ಶೆಟ್ಟಿ ಬಣಗಳು ಬೆಂಬಲ ನೀಡಿಲ್ಲ. ಹೋಟೆಲ್ ಮಾಲೀಕರು ನೈತಿಕ ಬೆಂಬಲ ಮಾತ್ರ ನೀಡಿವೆ. ಮೆಟ್ರೊ ಸಂಚಾರ ಎಂದಿನಂತೆ ಇರಲಿದೆ. ಆರೋಗ್ಯ, ಹಾಲು ಸಹಿತ ಮೂಲ ಅಗತ್ಯಗಳು ಇರಲಿವೆ.
ಯಾವ ಗಲಾಟೆಯನ್ನೂ ಮಾಡದೆ, ಯಾವ ಬಂದ್ ಕೂಡ ಮಾಡದೇ ದಯವಿಟ್ಟು ಎಲ್ಲರೂ ಶಾಂತ ರೀತಿಯಿಂದ ಇರಬೇಕುಡಿ.ಕೆ.ಶಿವಕುಮಾರ್, ಡಿಸಿಎಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.