ADVERTISEMENT

ಮತ್ತೆ ಬಂತು ಉಪ ಚುನಾವಣೆ: ಮೂರು ಪಕ್ಷಗಳಿಗೆ ಸವಾಲು

ಅನರ್ಹ ಶಾಸಕರ ಅರ್ಜಿ ಇತ್ಯರ್ಥಕ್ಕೆ ಮುನ್ನವೇ ಘೋಷಣೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:01 IST
Last Updated 1 ಡಿಸೆಂಬರ್ 2019, 13:01 IST
   

ಬೆಂಗಳೂರು: ಉಪ ಚುನಾವಣೆ ಮುಂದೂಡುವುದಾಗಿ ಗುರುವಾರ (ಸೆ.26) ಸುಪ್ರೀಂಕೋರ್ಟ್‌ಗೆ ಹೇಳಿದ್ದ ಚುನಾವಣೆ ಆಯೋಗ, ಅದರ ಮರು ದಿನವೇ ಚುನಾವಣಾ ದಿನಾಂಕವನ್ನು ಮರು ನಿಗದಿ ಮಾಡುವ ಮೂಲಕ ಒಂದು ದಿನ ನಿರಾಳರಾಗಿದ್ದ 15 ಅನರ್ಹ ಶಾಸಕರು, ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಮತ್ತೆ ಆತಂಕಕ್ಕೆ ದೂಡಿದೆ.

ಮುಂದೂಡಿಕೆಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗೆ ವಿರಾಮ ಹಾಡಿದ್ದ ಕಾಂಗ್ರೆಸ್, ಜೆಡಿಎಸ್‌ ನಾಯಕರು, ಮತ್ತೆ ಚುನಾವಣೆಗೆ ಸಜ್ಜಾಗಬೇಕಾಗಿದೆ.

ತಮ್ಮನ್ನು ಅನರ್ಹಗೊಳಿಸಿರುವ ಹಿಂದಿನ ಸಭಾಧ್ಯಕ್ಷರ ತೀರ್ಪನ್ನು ಪ್ರಶ್ನಿಸಿ 17 ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ಆರಂಭವಾಗುವ ಮುನ್ನವೇ, 15 ಕ್ಷೇತ್ರಗಳಿಗೆ ಇದೇ 21ರಂದು ಚುನಾವಣೆ ಆಯೋಗ ದಿನಾಂಕ ನಿಗದಿ ಮಾಡಿತ್ತು. 15 ನೇ ವಿಧಾನಸಭೆ ಅವಧಿ ಮುಗಿಯುವವರೆಗೆ (2023) ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಹಿಂದಿನ ಸಭಾಧ್ಯಕ್ಷರು ತೀರ್ಪಿನಲ್ಲಿ ಹೇಳಿದ್ದರು. ದಿಢೀರ್ ಚುನಾವಣೆ ಘೋಷಣೆಯಾಗಿದ್ದರಿಂದಾಗಿ ಅನರ್ಹರು ಕಂಗಾಲಾಗಿದ್ದರು.

ADVERTISEMENT

ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಅನರ್ಹರು ತಮ್ಮ ನೆರವಿಗೆ ಬರುವಂತೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿಸಿ ‘ನ್ಯಾಯ’ ಕೊಡಿಸುವಂತೆ ಒತ್ತಡ ಹೇರಿದ್ದರು. ತರಾತುರಿಯಲ್ಲಿ ದೆಹಲಿಗೆ ತೆರಳಿದ್ದ ಯಡಿಯೂರಪ್ಪ, ಅಮಿತ್ ಶಾ ಅವರನ್ನು ಭೇಟಿ ಮಾಡಿ ಸದ್ಯ ಎದುರಾಗಿರುವ ರಾಜಕೀಯ ಬಿಕ್ಕಟ್ಟಿನ ಕುರಿತು ವಿವರಿಸಿದ್ದರು.

ಈ ಬೆಳವಣಿಗೆಗಳ ಮಧ್ಯೆಯೇ, ವಿಚಾರಣೆ ನಡೆಯುತ್ತಿದ್ದ ಸುಪ್ರೀಂಕೋರ್ಟ್‌ ನ್ಯಾಯ ಪೀಠದ ಮುಂದೆ ಹಾಜರಾಗಿದ್ದ ಕೇಂದ್ರ ಚುನಾವಣೆ ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ, ಅನರ್ಹತೆಯ ಅರ್ಜಿ ಇತ್ಯರ್ಥವಾಗುವವರೆಗೆ ಚುನಾವಣೆ ಮುಂದೂಡಲಾಗುವುದು ಎಂದು ಪ್ರತಿಪಾದಿಸಿದ್ದರು. ಇದಕ್ಕೆ ನ್ಯಾಯಪೀಠ ಸಮ್ಮತಿಸಿದ್ದರಿಂದಾಗಿ ಚುನಾವಣೆ ಮುಂದಕ್ಕೆ ಹೋಗಿತ್ತು.

ರಾಜಕೀಯ ಬಿರುಸು: ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಚುರುಕುಗೊಳಿಸಿದ್ದ ನಾಯಕರು ಪ್ರಚಾರದತ್ತ ಮುಖಮಾಡಿದ್ದರು. ಬಿಜೆಪಿ ಮಾತ್ರ, ಹೆಚ್ಚಿನ ತಯಾರಿ ನಡೆಸಿರಲಿಲ್ಲ. ಈಗ ಮತ್ತೆ ಘೋಷಣೆಯಾಗುವುದರಿಂದ ಮೂರು ಪಕ್ಷಗಳ ಚಟುವಟಿಕೆ ಮತ್ತೆ ಬಿರುಸುಗೊಳ್ಳಲಿವೆ.

ಅನರ್ಹರಿಗೆ ಮುಗಿಯದ ಆತಂಕ
ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗುತ್ತದೆಯೇ ಇಲ್ಲವೇ ಎಂಬ ಗೊಂದಲ ಇತ್ಯರ್ಥವಾಗುವ ಮೊದಲೇ ಮತ್ತೆ ಚುನಾವಣೆ ಘೋಷಣೆಯಾಗಿರುವುದರಿಂದ ಅನರ್ಹರಿಗೆ ಮತ್ತೆ ಸಂಕಟ ಎದುರಾಗಿದೆ.

ಅಕ್ಟೋಬರ್‌ 15ರೊಳಗೆ‍ವಾದಿ–ಪ್ರತಿವಾದಿಗಳು ತಮ್ಮ ಆಕ್ಷೇಪಗಳನ್ನು ಪೂರ್ಣಗೊಳಿಸಬೇಕು ಹಾಗೂ ಪ್ರಕರಣದ ವಿಚಾರಣೆಯನ್ನು ಅಂತಿಮಗೊಳಿಸಲು ಅ.22ರಂದು ದಿನಾಂಕ ನಿಗದಿಪಡಿಸಲಾಗಿದೆ ಎಂದು ಸುಪ್ರೀಂಕೋರ್ಟ್‌ನ ಉಲ್ಲೇಖವನ್ನು ಚುನಾವಣೆ ಆಯೋಗಹೇಳಿದೆ.

ಒಂದು ವೇಳೆ ಸಭಾಧ್ಯಕ್ಷರ ತೀರ್ಪನ್ನು ರದ್ದುಗೊಳಿಸಿ ಚುನಾವಣೆಗೆ ಸ್ಪರ್ಧಿಸಲು ಸುಪ್ರೀಂಕೋರ್ಟ್ ಅವಕಾಶ ನೀಡದೇ ಇದ್ದರೆ ಮುಂದಿನ ದಾರಿ ಏನು ಎಂಬುದು ಅನರ್ಹರ ಮುಂದಿರುವ ಪ್ರಶ್ನೆ.

ಚುನಾವಣಾ ಪ್ರಕ್ರಿಯೆ
ನ.11: ನಾಮಪತ್ರ ಸಲ್ಲಿಕೆ ಆರಂಭ

ನ.18: ನಾಮಪ‍ತ್ರ ಸಲ್ಲಿಕೆಗೆ ಕೊನೆ ದಿನ

ನ.19: ನಾಮಪತ್ರ ಪರಿಶೀಲನೆ

ನ.21: ನಾಮಪತ್ರ ವಾಪಸ್‌ಗೆ ಕೊನೆ ದಿನ

ಡಿ.05: ಮತದಾನ

ಡಿ.11:‍ಮತ ಎಣಿಕೆ

ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ

***

ಚುನಾವಣೆ ನಡೆಯುವ ಕ್ಷೇತ್ರಗಳು

ಅಥಣಿ, ಕಾಗವಾಡ, ಗೋಕಾಕ, ಯಲ್ಲಾಪುರ, ಹಿರೇಕೆರೂರ, ರಾಣೆಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್. ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್‌, ಶಿವಾಜಿನಗರ, ಹೊಸಕೋಟೆ, ಕೆ.ಆರ್. ಪೇಟೆ, ಹುಣಸೂರು

*
ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ. ದಿನಾಂಕವನ್ನು 65 ದಿನಗಳ ಮುಂಚಿತವಾಗಿ ನಿಗದಿಪಡಿಸಿರುವುದು ಇದೇ ಮೊದಲು.ಚುನಾವಣೆ ಎದುರಿಸಲುತಯಾರಿದ್ದೇವೆ.
–ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

*

ಚುನಾವಣೆಗೆ ದಿನಾಂಕ ನಿಗದಿಪಡಿಸಿರುವುದನ್ನು ಸ್ವಾಗತಿಸುತ್ತೇವೆ. 15 ಅನರ್ಹ ಶಾಸಕರು ಸ್ಪರ್ಧಿಸಲಿದ್ದು, ಅವರ ಗೆಲುವಿಗೆ ಸರ್ವಶಕ್ತಿಯನ್ನೂ ಬಳಸಿ ದುಡಿಯುತ್ತೇವೆ.
–ಎನ್.ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

*
ಚುನಾವಣೆ ಪ್ರಕ್ರಿಯೆ ಬಗ್ಗೆ ಆಯೋಗಕ್ಕೆ ಸ್ಪಷ್ಟತೆ ಇಲ್ಲ. ನೀತಿ ಸಂಹಿತೆ ಇಲ್ಲದೆ ನ್ಯಾಯಬದ್ಧ ಚುನಾವಣೆ ನಡೆಯುವುದು ಹೇಗೆ? ಫಲಿತಾಂಶದ ಉಲ್ಲೇಖವೇ ಇಲ್ಲದ ಮೇಲೆ ಚುನಾವಣೆ ಏಕೆ?
–ಎಚ್‌. ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.