ಬೆಂಗಳೂರು: ಅಲೆಮಾರಿ ಹಾಗೂ ಅಲೆಮಾರಿ ಗುಣಲಕ್ಷಣಗಳಿರುವ ಅತ್ಯಂತ ಹಿಂದುಳಿದ 147 ಜಾತಿಗಳಿಗೆ ಕೆನೆಪದರ ನೀತಿ ಅನ್ವಯಿಸಬೇಕು ಹಾಗೂ ಆದಾಯ ತೆರಿಗೆಯ ಮಿತಿಯನ್ನು ಅಳವಡಿಸಬೇಕು ಎಂದು ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ತನ್ನ ಶಿಫಾರಸಿನಲ್ಲಿ ಹೇಳಿದೆ.
ಎಚ್.ಕಾಂತರಾಜ ನೇತೃತ್ವದ ಆಯೋಗವು ನಡೆಸಿದ್ದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಮಾಹಿತಿ ಆಧರಿಸಿ, ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು ಸಿದ್ಧಪಡಿಸಿರುವ ‘2015 ದತ್ತಾಂಶ ಅಧ್ಯಯನ ವರದಿ 2024’ರಲ್ಲಿ ಈ ಶಿಫಾರಸು ಇದೆ. ಮುಚ್ಚಿದ ಲಕೋಟೆಯಲ್ಲಿ ಆಯೋಗ ಸಲ್ಲಿಸಿದ್ದ ವರದಿಯನ್ನು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ತೆರೆದು ಮಂಡನೆ ಮಾಡಲಾಗಿತ್ತು. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ವರದಿಯ ಅಧ್ಯಾಯ–6ರಲ್ಲಿ (ಪುಟ 173) ಪ್ರವರ್ಗ 1 ಎ ಪಟ್ಟಿಯಲ್ಲಿ ಜಾತಿಯವರಿಗೆ ‘ಕೆನೆಪದರ ನೀತಿ’ ಜಾರಿ ಮಾಡುವುದು ಅತ್ಯಗತ್ಯ ಎಂದು ಪ್ರತಿಪಾದಿಸಲಾಗಿದೆ. ಇಲ್ಲಿಯವರೆಗೆ ಪ್ರವರ್ಗ ‘1 ಎ’ ಎಂಬ ಪಟ್ಟಿ ಇರಲಿಲ್ಲ. ಇದೇ ಮೊದಲ ಬಾರಿಗೆ, ಪ್ರವರ್ಗ ‘1’ ಹಾಗೂ ಪ್ರವರ್ಗ ‘2 ಎ’ಗಳಲ್ಲಿರುವ ಜಾತಿಗಳಲ್ಲಿ ಅತ್ಯಂತ ಹಿಂದುಳಿದ ಎಂದು ಮರುವರ್ಗೀಕರಿಸಲಾಗಿದೆ. ಅವುಗಳ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಹಿನ್ನೆಲೆ ಹಾಗೂ ಆಯಾ ಜಾತಿಗಳ ಅಸ್ಮಿತೆ ಹಾಗೂ ಗುಣಲಕ್ಷಣಗಳನ್ನು ಆಧರಿಸಿ ಪ್ರವರ್ಗ ‘1 ಎ’ ಹಾಗೂ ಪ್ರವರ್ಗ ‘1 ಬಿ’ ಎಂದು ಮರುವರ್ಗೀಕರಿಸಲಾಗಿದೆ. ಜತೆಗೆ, ಪ್ರವರ್ಗ ‘2 ಎ’ಯನ್ನು ಉಳಿಸಿಕೊಳ್ಳಲಾಗಿದ್ದು, ಕೆಲವು ಜಾತಿಗಳನ್ನು ಕೈಬಿಟ್ಟು, ಕೆಲವನ್ನು ಸೇರ್ಪಡೆ ಮಾಡಲಾಗಿದೆ.
ಇನ್ನೂ ಅಲೆಮಾರಿ, ಅರೆ ಅಲೆಮಾರಿ ಗುಣಲಕ್ಷಣಗಳನ್ನು ಹೊಂದಿರುವ, ಕುಲಕಸುಬು ಹಾಗೂ ಹೈನುಗಾರಿಕೆಯನ್ನು ನೆಚ್ಚಿಕೊಂಡಿರುವವರೇ ಪ್ರವರ್ಗ ‘1 ಎ’ ಪಟ್ಟಿಯಲ್ಲಿದ್ದಾರೆ. ಶಿಕ್ಷಣ ದೊರೆತ ಕಾರಣಕ್ಕೆ ಕೆಲವರು ಸರ್ಕಾರಿ ಉದ್ಯೋಗವನ್ನು ಪಡೆದಿದ್ದಾರೆ. ಅದೊಂದೇ ಕಾರಣ ಮುಂದಿಟ್ಟುಕೊಂಡು, ಪ್ರವರ್ಗ ‘1ಎ’ಯ ಪಟ್ಟಿಯಲ್ಲಿರುವ ಜಾತಿಯವರಿಗೆ ಕೆನೆಪದರ ಅನ್ವಯಿಸಬೇಕು ಎಂದು ಶಿಫಾರಸು ಮಾಡಿರುವುದು, ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಅಲ್ಲದೇ, ಅತ್ಯಂತ ಹಿಂದುಳಿದ ಪಟ್ಟಿಯಲ್ಲಿರುವ ಸಮುದಾಯಕ್ಕೆ ಆಘಾತಕಾರಿಯಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಇದೇ ಮೊದಲ ಶಿಫಾರಸು: ಕರ್ನಾಟಕದಲ್ಲಿ ರಚಿಸಲಾಗಿದ್ದ ನಾಗನೂರು, ಎಲ್.ಜಿ. ಹಾವನೂರು, ವೆಂಕಟಸ್ವಾಮಿ, ಓ.ಚಿನ್ನಪ್ಪರೆಡ್ಡಿ, ಪ್ರೊ.ರವಿವರ್ಮಕುಮಾರ್, ಸಿ.ಎಸ್.ದ್ವಾರಕನಾಥ್, ಶಂಕರಪ್ಪ ನೇತೃತ್ವದ ಆಯೋಗಗಳು ಸೇರಿದಂತೆ ಯಾವುದೇ ಆಯೋಗವು ಪ್ರವರ್ಗ 1 ರಲ್ಲಿದ್ದ ಜಾತಿಗಳಿಗೆ ಕೆನೆಪದರ ನೀತಿ ಹಾಗೂ ಆದಾಯ ತೆರಿಗೆ ಮಿತಿಯನ್ನು ಹೇರುವಂತೆ ಶಿಫಾರಸು ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ ಕೆನೆಪದರ ನೀತಿ ಶಿಫಾರಸು ಮಾಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
2002ರಲ್ಲಿ ಕೆನೆಪದರ ನೀತಿಯನ್ನು ಪ್ರಕಟಿಸಿದಾಗ, ಶಿಕ್ಷಣ ಹಾಗೂ ನೇಮಕಾತಿಗಳಲ್ಲಿ ಮೀಸಲಾತಿಯಲ್ಲಿ ಕೆನೆಪದರದವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1ರಲ್ಲಿನ ಜಾತಿಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಲಾಗಿತ್ತು. ಆಗ, 95 ಜಾತಿ ಹಾಗೂ ಅದರ ಉಪಜಾತಿಗಳನ್ನು ಸೇರಿಸಲಾಗಿತ್ತು. ಈಗ ಜಾತಿ/ ಉಪಜಾತಿಗಳಿಗೆ ಪ್ರತ್ಯೇಕ ಸಂಖ್ಯೆ ನಮೂದಿಸಿ ಅದನ್ನು147ಕ್ಕೆ ಹಿಗ್ಗಿಸಲಾಗಿದೆ.
ಶಿಫಾರಸು ಏನು?
‘ಕರ್ನಾಟಕದಲ್ಲಿ ಹಾಲಿ ಇರುವ ಮೀಸಲಾತಿ ಪಟ್ಟಿ ಪ್ರವರ್ಗ 1ರ ಅಡಿ ಇರುವ ಜಾತಿಗಳಿಗೆ ಕೆನೆಪದರ ನೀತಿ ಅಳವಡಿಸಲಾಗಿಲ್ಲ. ಈ ಪಟ್ಟಿಯಲ್ಲಿರುವ ಜಾತಿಗಳಲ್ಲಿ ಕೆಲವೊಂದ ಜಾತಿಗಳ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದು, ಇದರಿಂದ ಶೈಕ್ಷಣಿವಾಗಿಯೂ ಉತ್ತಮ ಸ್ಥಾನ ಪಡೆದಿರುತ್ತಾರೆ. ಇನ್ನೂ ಕೆಲವರು ವ್ಯಾಪಾರ ಮಾಡುತ್ತಾ ಕೋಟ್ಯಧಿಪತಿಗಳಾಗಿರುವವರೂ ಇದ್ದಾರೆ. ರಾಜಕೀಯ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರವರ್ಗ 1ರಲ್ಲಿಯೇ ಆಂತರಿಕವಾಗಿ ಹೆಚ್ಚಿನ ಸ್ಪರ್ಧೆ ಇದ್ದು, ಅವಕಾಶಗಳು ಮಾತ್ರ ಕೆಲವರಿಗೆ ಲಭ್ಯವಾಗುವ ಪರಿಸ್ಥಿತಿ ಇದೆ. ಆದ್ದರಿಂದ, ಶ್ರೀಮಂತ ವರ್ಗಗಳೊಂದಿಗೆ ಹಳ್ಳಿಯ ಬಡ ಕೂಲಿ ಕಾರ್ಮಿಕರ ಮತ್ತು ರೈತರ ಮಕ್ಕಳು ಸ್ಪರ್ಧಿಸುವುದು ಅಸಾಧ್ಯವಾಗಿದೆ. ಉಳ್ಳವರ ಮಕ್ಕಳೇ ಮೀಸಲಾತಿ ಸೌಲಭ್ಯವನ್ನು ಪಡೆಯುವ ಅಪಾಯ ಇರುತ್ತದೆ.
ಸಮ ಸಮಾಜ ನಿರ್ಮಾಣವಾಗಬೇಕಾದರೆ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಬೇಕಾಗಿದೆ. ಪ್ರವರ್ಗ ‘1 ಎ’ ಪಟ್ಟಿಯಲ್ಲಿನ ಶ್ರೀಮಂತರೊಂದಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸ್ಪರ್ಧೆ ಮಾಡಬೇಕಾದಲ್ಲಿ ಕೆನೆಪದರ ನೀತಿ ಅಳವಡಿಸುವುದು ಅನಿವಾರ್ಯ. ಹೀಗಾಗಿ, ಪ್ರವರ್ಗ 2 ಎ, ಪ್ರವರ್ಗ 3 ಎ ಹಾಗೂ ಪ್ರವರ್ಗ 3 ಬಿ ಗೆ ಇರುವಂತೆ ಪ್ರವರ್ಗ 1 ಎ ಮತ್ತು ಹೊಸದಾಗಿ ಸೃಜಿಸಲಾದ ಪ್ರವರ್ಗ 1 ಬಿ ಪಟ್ಟಿಯಲ್ಲಿರುವವರಿಗೆ ಕೆನೆಪದರ ನೀತಿ ಅಳವಡಿಸುವಂತೆ ಆಯೋಗ ಶಿಫಾರಸು ಮಾಡಿದೆ.
ಆಯೋಗದ ಶಿಫಾರಸು ಜಾರಿಯಾದರೆ, ಅತ್ಯಂತ ಹಿಂದುಳಿದ ಎಂಬ ಹಣೆ ಪಟ್ಟಿಯನ್ನು ಆಯೋಗದಿಂದಲೇ ಕಟ್ಟಿಕೊಂಡ ಪ್ರವರ್ಗ 1 ಎ ಪಟ್ಟಿಯಲ್ಲಿರುವ ಜಾತಿಯವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಆದಾಯ ತೆರಿಗೆ ಮಿತಿ ಅನ್ವಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.