ADVERTISEMENT

ಕರ್ಫ್ಯೂ ನಿರೀಕ್ಷಿತ ಫಲ ನೀಡಿಲ್ಲ, ಲಾಕ್‌ಡೌನ್‌ ಮಾಡುವುದು ಅನಿವಾರ್ಯ: ಬಿಎಸ್‌ವೈ

ಇವತ್ತು ಅಥವಾ ನಾಳೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 7 ಮೇ 2021, 6:11 IST
Last Updated 7 ಮೇ 2021, 6:11 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ    

ಬೆಂಗಳೂರು: ಕರ್ಫ್ಯೂ ನಿರೀಕ್ಷಿತ ಫಲ ನೀಡದ ಕಾರಣ ಇನ್ನು ಕಠಿಣ ನಿಯಮ ಅಥವಾ ಲಾಕ್‌ಡೌನ್‌ ಮಾಡುವುದು ಅನಿವಾರ್ಯ ಆಗಬಹುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಶುಕ್ರವಾರ ಬೆಳಿಗ್ಗೆ ನಗರದ ಅಣ್ಣಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಕರ್ಫ್ಯೂ ಸಂದರ್ಭದಲ್ಲೂ ಜನರು ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ. ಇನ್ನಷ್ಟು ಕಠಿಣ ನಿಯಮ ಅಥವಾ ಲಾಕ್‌ಡೌನ್‌ ಜಾರಿ ಮಾಡುವ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ಸಚಿವರು ಮತ್ತು ಅಧಿಕಾರಿಗಳ ಜತೆ ಇವತ್ತು ಸಭೆ ಇದೆ. ಇವತ್ತು ಅಥವಾ ನಾಳೆ ಈ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ADVERTISEMENT

ಬಿಬಿಎಂಪಿ ಆಸ್ಪತ್ರೆಗಳಲ್ಲಿ ಹಾಸಿಗೆ ಬ್ಲಾಕಿಂಗ್‌ ದಂಧೆಯನ್ನು ಸಂಸದ ತೇಜಸ್ವಿ ಸೂರ್ಯ ಅವರು ಬಯಲಿಗೆಳೆದು ಉತ್ತಮ ಕೆಲಸ ಮಾಡಿದ್ದಾರೆ. ಅದೇ ಅಪರಾಧ ಎಂದು ಭಾವಿಸಿರುವ ಶಾಸಕ ಜಮೀರ್‌ ಅಹಮದ್‌ ಖಾನ್‌ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅಲ್ಲಿ ಏನು ನಡೆಯುತ್ತಿದೆಯೊ ಅದನ್ನು ಬಯಲಿಗೆಳೆದಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.

ಸೋಂಕಿತರನ್ನು ಮುಖ್ಯಮಂತ್ರಿ ನಿವಾಸ ಮತ್ತು ವಿಧಾನಸೌಧದ ಮುಂದೆ ತಂದು ನಿಲ್ಲಿಸುವುದು ಸರಿಯಲ್ಲ. ತೊಂದರೆ ಇರುವುದು ನಿಜ. ಗೊತ್ತಾದ ತಕ್ಷಣ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಸೋಂಕಿತರು ಸರ್ಕಾರದ ಅಥವಾ ನಮ್ಮ ಗಮನಕ್ಕೆ ತಂದರೆ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.