ADVERTISEMENT

Karnataka Politics: ‘ಕೈ’ ಬಣ ರಾಜಕೀಯ ಬಿರುಸು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 23:50 IST
Last Updated 21 ನವೆಂಬರ್ 2025, 23:50 IST
<div class="paragraphs"><p>ಸಿದ್ದರಾಮಯ್ಯ, ಡಿಕೆಶಿ</p></div>

ಸಿದ್ದರಾಮಯ್ಯ, ಡಿಕೆಶಿ

   

ಸಾಂದರ್ಭಿಕ ಚಿತ್ರ

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿನ ಬಣ ರಾಜಕೀಯ ಬಿರುಸುಗೊಂಡಿದೆ. ಸಚಿವ ಸಂಪುಟ ಪುನರ್‌ರಚನೆ ಹಾಗೂ ನಾಯಕತ್ವ ಬದಲಾವಣೆಯ ವಿಷಯವನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ತಮ್ಮ ಬಣದ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ನಾಯಕರ ಪರವಾಗಿ ದೆಹಲಿ ಯಾತ್ರೆ, ಔತಣಕೂಟಗಳು ಜೋರಾಗಿವೆ. ಏತನ್ಮಧ್ಯೆ, ‘ಯಾರೂ ಮಾತನಾಡಬಾರದು’ ಎಂದು ಯಥಾವಾದವನ್ನು ಹೈಕಮಾಂಡ್‌ ಮುಂದಿಟ್ಟಿದೆ.  

ADVERTISEMENT

ಕಟ್ಟುನಿಟ್ಟಿನ ಎಚ್ಚರಿಕೆ: ಸುರ್ಜೇವಾಲಾ

‘ಕೆಲವು ಕಾಂಗ್ರೆಸ್ ನಾಯಕರು ಮತ್ತು ಶಾಸಕರ ಅನಗತ್ಯ ಹೇಳಿಕೆಗಳು ಸಹ ಊಹಾಪೋಹಗಳಿಗೆ ಕಾರಣವಾಗಿವೆ. ನಾಯಕತ್ವದ ವಿಷಯದ ಬಗ್ಗೆ ಅಥವಾ ಸ್ಥಾಪಿತ ಹಿತಾಸಕ್ತಿಗಳು ಪ್ರಚಾರ ಮಾಡುತ್ತಿರುವ ಕಾರ್ಯಸೂಚಿಗೆ ಮಣಿಯದಂತೆ ಪಕ್ಷವು ಅವರಿಗೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದೆ’ ಎಂದು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ ಹೇಳಿದ್ದಾರೆ.

ಈ ಕುರಿತು ಎಕ್ಸ್‌ ಮಾಡಿರುವ ಅವರು, ‘ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಜತೆಗೆ ಚರ್ಚೆ ನಡೆಸಿದ್ದೇನೆ. ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ಬಣ ಬಿಕ್ಕಟ್ಟಿನಿಂದ ನಲುಗಿರುವ ಬಿಜೆಪಿ ಹಾಗೂ ಕೆಲವೊಂದು ಮಾಧ್ಯಮಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಉದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸುತ್ತಿವೆ’ ಎಂದು ಅವರು ದೂಷಿಸಿದ್ದಾರೆ.

‘ಸಿ.ಎಂ ಆಗಿ ಮುಂದುವರಿಯುವೆ’

ಮೈಸೂರು: ‘ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯುತ್ತೇನೆ. ಮುಂದಿನ ಬಜೆಟ್‌ಗಳನ್ನು ನಾನೇ ಮಂಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಪತ್ರಕರ್ತರ ಜೊತೆ ಶುಕ್ರವಾರ ಅವರು ಮಾತನಾಡಿದರು.

‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೇಳಿದಂತೆ ನಾನೆಂದೂ ಮಾತಿಗೆ ತಪ್ಪುವುದಿಲ್ಲ. ರಾಜ್ಯದ ಜನರಿಗೆ ನೀಡಿದ ಗ್ಯಾರಂಟಿಯ ಭರವಸೆಯನ್ನು ಈಡೇರಿಸಿದ್ದೇನೆ. ಮುಖ್ಯಮಂತ್ರಿಯಾಗಿಯೂ ಮುಂದುವರೆಯುತ್ತೇನೆ’ ಎಂದು ಹೇಳಿದರು.

‘ನೀವೇ ಮುಂದಿನ ಬಜೆಟ್ ಮಂಡಿಸುವುದಾಗಿ ಹೇಳಿದ್ದೀರಿ. ಈ ನಡುವೆಯೇ ಕಾಂಗ್ರೆಸ್‌ನ ಕೆಲವು ಶಾಸಕರು ದೆಹಲಿ ಭೇಟಿಗೆ ತೆರಳಿದ್ದಾರಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಎಷ್ಟು ಜನ ಹೋಗಿದ್ದಾರೆ? ಶಾಸಕರು ದೆಹಲಿಗೆ ಹೋಗಲೇಬಾರದು ಎಂದು ಇದೆಯಾ’ ಎಂದು ಪ್ರಶ್ನಿಸಿದರು. ಈ ವೇಳೆ ಪತ್ರಕರ್ತರ ಪ್ರಶ್ನೆಗಳಿಗೆ ಸಿಟ್ಟಾದರು.

‘ಸಚಿವ ಚೆಲುವರಾಯಸ್ವಾಮಿ ಅವರು ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಲು ಹೋಗಿದ್ದಾಗಿ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಸಹ ಈ ಬಗ್ಗೆ ಈಗಾಗಲೇ ಈ ಬಗ್ಗೆ ಮಾತನಾಡಿದ್ದಾರೆ’ ಎಂದರು.

‘ಕೆಲವರು ಹಿಂದೆಯೂ ದೆಹಲಿ ಭೇಟಿಗೆ ಹೋಗಿದ್ದರು. ಈಗಲೂ ಕೆಲವರು ಹೋಗಿದ್ದಾರೆ. ಆದರೆ ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ವಿಚಾರದಲ್ಲಿ ತೀರ್ಮಾನ ಮಾಡುವುದು ಹೈಕಮಾಂಡ್‌. ಅವರು ಎಂದಾದರೂ ಈ ಬಗ್ಗೆ ಮಾತನಾಡಿದ್ದಾರಾ’ ಎಂದು ಪ್ರಶ್ನಿಸಿದ ಅವರು ‘ಅಂತಿಮವಾಗಿ ಹೈಕಮಾಂಡ್ ಹೇಳಿದ್ದನ್ನು ನಾನು, ಶಿವಕುಮಾರ್ ಎಲ್ಲರೂ ಕೇಳಬೇಕು’ ಎಂದರು.

‘ರಾಮನಗರ ಶಾಸಕರು ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಮಾತನಾಡದಂತೆ ಕಾಂಗ್ರೆಸ್ ಶಾಸಕರಿಗೆ ಹೇಳಬಹುದಿಲ್ಲವೇ’ ಎಂಬ ಪ್ರಶ್ನೆಗೆ ‘ಅದನ್ನು ಹೈಕಮಾಂಡ್‌ ಹೇಳುತ್ತದೆ’ ಎಂದರು. ‘ ಹೈಕಮಾಂಡ್‌ ಯಾವಾಗ ಹೇಳಬಹುದು’ ಎಂಬ ಮರುಪ್ರಶ್ನೆಗೆ ‘ಅವರನ್ನೇ ಕೇಳಿ’ ಎಂದು ಮತ್ತೆ ಸಿಟ್ಟಾದರು.

‘ಐ ವಿಶ್ ಹಿಮ್ ಆಲ್‌ ದ ಬೆಸ್ಟ್’

ಬೆಂಗಳೂರು: ‘ಸಿದ್ದರಾಮಯ್ಯ ಐದು ವರ್ಷ ನಾನೇ ಮುಖ್ಯಮಂತ್ರಿ ಅಂದಿದ್ದಾರೆ, ಐ ವಿಶ್‌ ಹಿಮ್‌ ಆಲ್‌ ದ ಬೆಸ್ಟ್‌ . . .’

‘ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯುತ್ತೇನೆ. ಮುಂದಿನ ಬಜೆಟ್‌ ಅನ್ನೂ ಮಂಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಹೇಳಿದ್ದಾರಲ್ಲ’ ಎನ್ನುವ ಪ್ರಶ್ನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಪ್ರತಿಕ್ರಿಯೆ ಹೀಗಿತ್ತು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಐದು ವರ್ಷ ಇರುವುದಿಲ್ಲ ಎಂದು ನಾವು ಹೇಳಿಲ್ಲ. ಅವರ ಅಧಿಕಾರವನ್ನು ಯಾರೂ ಪ್ರಶ್ನೆ ಮಾಡಿಲ್ಲ. ಅವರೇ ಹೇಳಿದ್ದಾರೆ. ದೊಡ್ಡವರು ಹೇಳಿದ ಮೇಲೆ, ನಾವು ಚಿಕ್ಕವರು ಗೌರವದಿಂದ ಕೇಳಿಕೊಂಡು ನಮ್ರತೆಯಿಂದ ಇರಬೇಕು’ ಎಂದು ಹೇಳಿದರು.

‘ಅಧಿಕಾರ ಹಸ್ತಾಂತರ ವಿಚಾರದಲ್ಲಿ ಹೈಕಮಾಂಡ್‌ ನಾಯಕರ ನಿರ್ಧಾರಕ್ಕೆ ಬದ್ಧರಾಗಿದ್ದೇನೆ. ಸಿದ್ದರಾಮಯ್ಯ ಅವರೂ ಹೈಕಮಾಂಡ್‌ ನಾಯಕರ ತೀರ್ಮಾನದಂತೆ ನಡೆಯುವುದಾಗಿ ಹೇಳಿದ್ದಾರೆ. ಪಕ್ಷದ ಶಾಸಕರು ಸಚಿವರು, ಮುಖ್ಯಮಂತ್ರಿ ಆಗಲು ಅರ್ಹರಿರುತ್ತಾರೆ. ಸಿದ್ದರಾಮಯ್ಯ ತಮ್ಮ ವಿಚಾರಧಾರೆ ಹೇಳಿದ್ದಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಹೈಕಮಾಂಡ್‌ ನಂಬುತ್ತೇನೆ. ಅಷ್ಟು ಬಿಟ್ಟರೆ ಬೇರೇನೂ ಇಲ್ಲ’ ಎಂದರು.

‘ಯಾವ ಗುಂಪನ್ನೂ ದೆಹಲಿಗೆ ಕರೆದುಕೊಂಡು ಹೋಗುವುದಿಲ್ಲ. ಗುಂಪುಗಾರಿಕೆಯನ್ನೂ ಮಾಡುವುದಿಲ್ಲ. ನನ್ನದು ಎನ್ನುವ ಯಾವ ಬಣವೂ ಇಲ್ಲ. ಅಂತಹ ಬಣ, ಗುಂಪುಗಾರಿಕೆ ರಾಜಕೀಯ ನನ್ನ ರಕ್ತದಲ್ಲೇ ಇಲ್ಲ. ಕಾಂಗ್ರೆಸ್‌ನ ಎಲ್ಲ 140 ಶಾಸಕರೂ ನನ್ನ ಶಾಸಕರೇ. ಎಲ್ಲರೂ ನನಗೆ ಪ್ರಮುಖರು’ ಎಂದು ಹೇಳಿದರು. 

‘ಸಚಿವ ಸಂಪುಟ ಪುನರ್‌ರಚನೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಪುನರ್‌ರಚನೆಯ ಅಧಿಕಾರ ಮುಖ್ಯಮಂತ್ರಿಗೆ ಇರುತ್ತದೆ. ಸಚಿವ ಸ್ಥಾನದ ಆಕಾಂಕ್ಷೆ ಇರುವವರು ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲು ದಿಲ್ಲಿಗೆ ಹೋಗಿದ್ದಾರೆ. ಭೇಟಿ ಮಾಡುವ ಹಕ್ಕು ಎಲ್ಲರಿಗೂ ಇದೆ. ನಾನು ಯಾರನ್ನೂ ಕರೆದುಕೊಂಡು ಹೋಗಿಲ್ಲ. ಕೆಲವರು ಮುಖ್ಯಮಂತ್ರಿ ಜತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದರೆ, ಮತ್ತೆ ಕೆಲವರು ತಾವಾಗಿಯೇ ಹೋಗಿದ್ದಾರೆ. ಇದರಲ್ಲಿ ತಪ್ಪೇನಿದೆ? ನಾವು ಯಾರನ್ನೂ ತಡೆಯಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು.  

ಔತಣಕೂಟ ರಾಜಕೀಯ ಹೊಸದಲ್ಲ: ಸತೀಶ ಜಾರಕಿಹೊಳಿ ಅವರು ಔತಣಕೂಟ ಆಯೋಜನೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ‘ನನಗೆ ಔತಣಕೂಟಗಳ ಬಗ್ಗೆ ಗೊತ್ತಿಲ್ಲ. ನಾಲ್ವರು, ಐವರು ಉಪಮುಖ್ಯಮಂತ್ರಿ ಮಾಡಬೇಕು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಬೇಕು ಎಂದು ಎರಡೂವರೆ ವರ್ಷಗಳಿಂದ ಸಭೆಗಳನ್ನು ಮಾಡುತ್ತಲೇ ಇದ್ದಾರೆ. ಇನ್ನೂ ಹೆಚ್ಚಿನ ಸಭೆಗಳನ್ನು ಮಾಡಲಿ’ ಎಂದರು.

ಪಕ್ಷದ ವರಿಷ್ಠರ ತೀರ್ಮಾನಕ್ಕೆ ಪ್ರತಿಯೊಬ್ಬರೂ ಬದ್ಧರಾಗಿರಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಬೆಂಗಳೂರಿಗೆ ಆಗಮಿಸುತ್ತಿದ್ದು, ಭೇಟಿಯಾಗುವ ನಿರೀಕ್ಷೆ ಇದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಎಐಸಿಸಿ ಅಧ್ಯಕ್ಷರನ್ನು ಮುಖ್ಯಮಂತ್ರಿ ಭೇಟಿ ಮಾಡುವುದು ಸಹಜ ಪ್ರಕ್ರಿಯೆ. ನನಗೂ, ಸಿದ್ದರಾಮಯ್ಯ ಅವರಿಗೂ ಯಾವುದೇ ಗೊಂದಲ ಇಲ್ಲ. ಗೊಂದಲ ಇರುವುದು ಮಾಧ್ಯಮಗಳಿಗೆ ಅಷ್ಟೆ.
ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಕರ್ನಾಟಕದಲ್ಲಿ ನಮಗೆ ಸಿಎಂ,‌ ಡಿಸಿಎಂ ಹೈಕಮಾಂಡ್‌. ಹಾಗಾಗಿ, ಇಬ್ಬರೂ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಇಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಹೈಕಮಾಂಡ್‌ ನಿರ್ಧಾರ ಮಾಡಲಿ.
ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.