ADVERTISEMENT

ರಾಮನ ಹೆಸರು ಹೇಳಿದರೆ ಕಾಂಗ್ರೆಸ್ಸಿಗೆ ನಡುಕ; ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 7:39 IST
Last Updated 26 ಜನವರಿ 2023, 7:39 IST
ಅಶ್ವತ್ಥ ನಾರಾಯಣ
ಅಶ್ವತ್ಥ ನಾರಾಯಣ   

ರಾಮನಗರ: ಓಲೈಕೆ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ಸಿಗೆ ಶ್ರೀರಾಮನ ಹೆಸರು ಕೇಳಿದರೆ ನಡುಕ ಶುರುವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಲೇವಡಿ ಮಾಡಿದರು.

ಗುರುವಾರ ಇಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು "ಮೊದಲು ಕ್ಲೋಸ್ ಪೇಟೆ ಆಗಿದ್ದ ರಾಮನಗರಕ್ಕೆ ಈಗಿನ ಹೆಸರು ಬರಲು ಶ್ರೀರಾಮನೇ ಕಾರಣ. ಹೀಗಾಗಿ ಇಲ್ಲಿನ ರಾಮದೇವರ ಬೆಟ್ಟವನ್ನು ದಕ್ಷಿಣದ ಅಯೋಧ್ಯೆಯಾಗಿ ಬೆಳೆಸಲು ತೀರ್ಮಾನ ಮಾಡಲಾಗಿದೆ. ಡಿಪಿಆರ್‌ಗೆ ಸರ್ಕಾರ ಸೂಚಿಸಿದೆ’ ಎಂದರು.

"ಕಾಂಗ್ರೆಸ್ಸಿನವರು ರಾಮನನ್ನು ನೆನಪಿಸಿಕೊಂಡು, ಗೌರವಿಸಿದ ನಿದರ್ಶನವೇ ಇಲ್ಲ. ಇಲ್ಲಿಯ ರಾಮದುರ್ಗವನ್ನು ಹಿಂದೆ ನಾಡಪ್ರಭು ಕೆಂಪೇಗೌಡರು ಅಭಿವೃದ್ಧಿ ಪಡಿಸಿದ್ದರು. ಶ್ರೀರಾಮನು ಅಯೋಧ್ಯೆಯನ್ನು ಹೊರತುಪಡಿಸಿದರೆ ಹೆಚ್ಚು ಕಾಲ ಓಡಾಡಿದ್ದೇ ಇಂದಿನ ಕರ್ನಾಟಕದಲ್ಲಿ. ಇದನ್ನು ಕಾಂಗ್ರೆಸ್ಸಿಗರು ಮೊದಲು ಅರಿಯಬೇಕು ಎಂದು ಅವರು ನುಡಿದರು.

ADVERTISEMENT

ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ವಿರುದ್ಧದ ಸಿ.ಡಿ. ಪ್ರಕರಣ ಕುರಿತು ಸಿಬಿಐ ತನಿಖೆಗೆ ಮನವಿ ಮಾಡಿರುವುದರಲ್ಲಿ ತಪ್ಪಿಲ್ಲ. ಸಿ.ಡಿ. ಇಟ್ಟುಕೊಂಡು ಬ್ಲ್ಯಾಕ್ ಮೇಲ್ ರಾಜಕಾರಣ ಮಾಡುವವರಿಗೆ ಇದರಿಂದ ಬುದ್ಧಿ ಕಲಿಸಿದಂತೆ ಆಗುತ್ತದೆ. ಇದರಿಂದ ಸತ್ಯಾಂಶ ಹೊರಬರಲಿದೆ ಎಂದು ಅವರು ಪ್ರತಿಪಾದಿಸಿದರು.

ಸರ್ಕಾರದ ತಪ್ಪುಗಳ ಬಗ್ಗೆ ಚರ್ಚಿಸಲು ಸದನದಲ್ಲಿ ಅವಕಾಶವನ್ನೇ ಕೊಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ಸರ್ಕಾರವನ್ನು ಸರಿಯಾಗಿ ತಿದ್ದುವುದೇ ಪ್ರತಿಪಕ್ಷಗಳ ಕರ್ತವ್ಯವಾಗಿದೆ. ಆದರೆ ಅವರು ಸದನದಲ್ಲಿ ಸುಮ್ಮನಿದ್ದು, ಈಗ ಬೀದಿಯಲ್ಲಿ ನಿಂತುಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆ ಸೇರಿದಂತೆ ಪ್ರತಿಯೊಂದು ಚಟುವಟಿಕೆಯೂ ರಾಮನಗರ ಜಿಲ್ಲೆಯಲ್ಲಿ ರಚನಾತ್ಮಕ ರೀತಿಯಲ್ಲಿ ನಡೆಯುತ್ತಿದೆ. ಇದರಿಂದ ಕಾಂಗ್ರೆಸ್, ಜೆಡಿಎಸ್ ಎರಡೂ ನೆಮ್ಮದಿ ಕಳೆದುಕೊಂಡಿವೆ ಎಂದು ಅಶ್ವತ್ಥ ನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.