ADVERTISEMENT

ನಿಗಮ, ಪ್ರಾಧಿಕಾರ: ಅಧ್ಯಕ್ಷರ ಅವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 14:51 IST
Last Updated 28 ಫೆಬ್ರುವರಿ 2026, 14:51 IST
<div class="paragraphs"><p>ವಿಧಾನಸೌಧ </p></div>

ವಿಧಾನಸೌಧ

   

ಬೆಂಗಳೂರು: ವಿವಿಧ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ನಾಮನಿರ್ದೇಶನ ಮಾಡಿದ್ದ ಅಧ್ಯಕ್ಷರ ಅಧಿಕಾರ ಅವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹೀಗಾಗಿ, ಈಗಾಗಲೇ ಅವಧಿ ಮುಗಿದಿರುವ ಮತ್ತು ಅವಧಿ ಮುಗಿಯಲಿರುವ ಎಲ್ಲ ನಿಗಮ, ಮಂಡಳಿಗಳು ಮತ್ತು ಪ್ರಾಧಿಕಾರಗಳ ಅಧ್ಯಕ್ಷರು ತಮ್ಮ ಸ್ಥಾನದಲ್ಲಿ ಯಾವುದೇ ಅಡ್ಡಿ ಆತಂಕ ಇಲ್ಲದೇ ಮುಂದುವರಿಯಬಹುದಾಗಿದೆ.

ADVERTISEMENT

ಸರ್ಕಾರದ ವಿವಿಧ ಇಲಾಖೆಗಳ ಅಧೀನದಲ್ಲಿ ಬರುವ ನಿಗಮ, ಮಂಡಳಿಗಳ ಅಧ್ಯಕ್ಷರ ಅವಧಿಯನ್ನು ಮುಂದಿನ ಆದೇಶದವರೆಗೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ತಿಳಿಸಿದೆ.

ಇಲಾಖೆಗಳು ತಮ್ಮ ವ್ಯಾಪ್ತಿಯ ಆಡಳಿತ ಕಾಯ್ದೆಗಳ ಪ್ರಕಾರ ಅಧ್ಯಕ್ಷರುಗಳಿಗೆ ಕಾರ್ಯನಿರ್ವಹಿಸಲು ಪೂರಕವಾದ ಅಧಿಸೂಚನೆ ಹೊರಡಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ವಿವಿಧ  ನಿಗಮ, ಮಂಡಳಿಗಳು, ಪ್ರಾಧಿಕಾರಗಳಿಗೆ ಜಿಲ್ಲಾ ಕಾಂಗ್ರೆಸ್‌ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮುಖಂಡರುಗಳನ್ನು ಅಧ್ಯಕ್ಷರನ್ನಾಗಿ ಎರಡು ವರ್ಷಗಳ ಅವಧಿಗೆ ನೇಮಿಸಿ 2024ರ ಫೆ. 28ರಂದು ಆದೇಶ ಹೊರಡಿಸಲಾಗಿತ್ತು. ಈ ಪೈಕಿ, ಕೆಲವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿ ಮುಂದಿನ ಆದೇಶದವರೆಗೆ ಮುಂದುವರೆಸಿ ಫೆ. 7ರಂದು ಮತ್ತೆ ಆದೇಶ ಹೊರಡಿಸಲಾಗಿದೆ.

ಫೆ.7ರ ಪಟ್ಟಿಯಲ್ಲಿ ಕಾಡಾ ಅಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರು ಸೇರಿದಂತೆ ಕೆಲವು ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರ ಹೆಸರನ್ನು ಕೈಬಿಡಲಾಗಿದೆ. ಈ ಪ್ರಾಧಿಕಾರಗಳಿಗೆ ಬೇರೆ ಅಧ್ಯಕ್ಷರನ್ನು ನೇಮಕ ಮಾಡದ ಕಾರಣ ಹಾಲಿ ಇರುವವರ ಅವಧಿಯನ್ನು ಮುಂದುವರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಫೆ. 26ರಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದರು. ಆ ಬೆನ್ನಲ್ಲೆ, ಈ ಆದೇಶ ಹೊರಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.