ಬೆಂಗಳೂರು: ಭೂಸ್ವಾಧೀನ ವಿರೋಧಿಸಿ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿ ರೈತರು 1,198 ದಿನ ನಡೆಸಿದ ಹೋರಾಟಕ್ಕೆ ಮನ್ನಣೆ ನೀಡಿದ ರಾಜ್ಯ ಸರ್ಕಾರ, ಜಮೀನು ಸ್ವಾಧೀನಕ್ಕೆ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದಿದೆ.
ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರು, ರೈತ ಸಂಘದ ಮುಖಂಡರು, ಹೋರಾಟಗಾರರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿದ ಬಳಿಕ ಅಧಿಸೂಚನೆ ಹಿಂಪಡೆಯುವ ನಿರ್ಧಾರ ಪ್ರಕಟಿಸಿದರು. ಸರ್ಕಾರದ ನಿರ್ಧಾರ ಹೊರಬೀಳುತ್ತಿದ್ದಂತೆಯೇ ರೈತರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ಜಮೀನು ಸ್ವಾಧೀನ ಕೈಬಿಟ್ಟರೆ ಉದ್ದೇಶಿತ ಯೋಜನೆ, ಕೈಗಾರಿಕೆಗಳು ಬೇರೆ ರಾಜ್ಯಕ್ಕೆ ಹೋಗುವ ಸಾಧ್ಯತೆ ಇದೆ. ಆದರೂ, ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು, ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಂಡಿದೆ. ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದ ಪ್ರದೇಶ ಕೃಷಿಗೆ ಯೋಗ್ಯವಾದ ಭೂಮಿ. ರಾಜ್ಯದಲ್ಲಿ ಭೂಸ್ವಾಧೀನದ ವಿರುದ್ಧ ಈ ಮಟ್ಟದ ಪ್ರತಿಭಟನೆ ನಡೆದಿರಲಿಲ್ಲ. ಅಲ್ಲಿನ ರೈತರು ಬದುಕಿಗೆ ಜಮೀನಿನ ಮೇಲೆ ಅವಲಂಬಿತರಾಗಿರುವುದು ಸರ್ಕಾರಕ್ಕೆ ಮನವರಿಕೆಯಾಗಿದೆ. ರೈತರು ಇನ್ನುಮುಂದೆ ನೆಮ್ಮದಿಯಾಗಿ ಕೃಷಿ ಚಟುವಟಿಕೆ ಮುಂದುವರಿಸಿಕೊಂಡು ಹೋಗಬಹುದು’ ಎಂದರು.
ಅತ್ಯಾಧುನಿಕ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ ಸ್ಥಾಪನೆಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು 2021ರಲ್ಲಿ ಪ್ರಾಥಮಿಕ ಅಧಿಸೂಚನೆ, 2022ರಲ್ಲಿ ಅಂತಿಮ ಆದೇಶ ಹೊರಡಿಸಿತ್ತು. ಭೂಸ್ವಾಧೀನ ವಿರೋಧಿಸಿ ಅಂದಿನಿಂದಲೂ ರೈತರು ಹೋರಾಟ ಮಾಡುತ್ತಾ ಬಂದಿದ್ದರು.
ಚನ್ನರಾಯಪಟ್ಟಣ, ಮಟ್ಟಿಬಾರ್ಲು ಮತ್ತು ಶ್ರೋತ್ರೀಯ ತೆಲ್ಲೋಹಳ್ಳಿಗಳಲ್ಲಿನ ನೀರಾವರಿ, ಕೃಷಿ ಮತ್ತು ಜನವಸತಿಗಳನ್ನು ಪರಿಗಣಿಸಿ, 231.23 ಎಕರೆ, 185.18 ಎಕರೆ ಮತ್ತು 78.21 ಎಕರೆ ಸೇರಿ 495 ಎಕರೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಜೂನ್ 24ರಂದು ಘೋಷಿಸಿದ್ದರು. ಆದರೆ, ರೈತರು ಸರ್ಕಾರದ ನಿರ್ಧಾರವನ್ನು ಒಪ್ಪದೇ ಎಲ್ಲ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ–ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹೋರಾಟ ಮುಂದುವರಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 5ರಂದು ರೈತ ಸಂಘದ ಮುಖಂಡರು, ಹೋರಾಟಗಾರರು, ಸ್ಥಳೀಯ ರೈತರ ಸಭೆ ಕರೆದಿದ್ದರು. ಕಾನೂನು ತೊಡಕುಗಳಿದ್ದು, ತಜ್ಞರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲು 10 ದಿನಗಳ ಸಮಯ ಕೇಳಿದ್ದರು. ನಿಗದಿಯಂತೆ ಮಂಗಳವಾರ ಸಭೆ ನಡೆಸಿ, ಸರ್ಕಾರ ತೆಗೆದುಕೊಂಡ ನಿರ್ಧಾರದ ಮಾಹಿತಿ ನೀಡಿದರು.
ಸಚಿವರಾದ ಎಚ್.ಕೆ. ಪಾಟೀಲ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಬೈರತಿ ಸುರೇಶ್, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ, ಹೋರಾಟಗಾರರಾದ ಎಸ್.ಆರ್. ಹಿರೇಮಠ, ಎಚ್.ಆರ್. ಬಸವರಾಜಪ್ಪ, ನೂರ್ ಶ್ರೀಧರ್, ವರಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.
ದೇವನಹಳ್ಳಿ ಬೆಂಗಳೂರಿಗೆ ಹತ್ತಿರವಿದೆ. ಅಂತರರಾಷ್ಟ್ರೀಯ ವಿಮಾನನಿಲ್ದಾಣ ಇದ್ದು ಹೊಸ ಕೈಗಾರಿಕೆಗಳ ಸ್ಥಾಪನೆಗೆ ಪ್ರಾಶಸ್ತ್ರ್ಯ ಸ್ಥಳ. ಆದರೆ ಜಮೀನಿನ ಮೇಲೆ ಅವಲಂಬಿತವಾದ ರೈತರ ಬದುಕೂ ಅಷ್ಟೆ ಮುಖ್ಯಸಿದ್ದರಾಮಯ್ಯ ಮುಖ್ಯಮಂತ್ರಿ
ಸ್ವಾಧೀನ ಕೈಬಿಟ್ಟರೆ ಉದ್ದೇಶಿತ ಯೋಜನೆಗೆ ಹಿನ್ನಡೆಯಾಗುವುದು ಸಹಜ. ಆದರೂ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ. ರೈತರಿಗೆ ನ್ಯಾಯ ಒದಗಿಸಿದ್ದಾರೆಪ್ರಕಾಶ್ ರಾಜ್ ನಟ
ರೈತರನ್ನು ಒಳಗೊಂಡ ಸುಸ್ಥಿರ ಅಭಿವೃದ್ಧಿಗೆ ಯಾವುದೇ ಸರ್ಕಾರ ಆದ್ಯತೆ ನೀಡಬೇಕು. ಒತ್ತಾಯದ ಭೂ ಸ್ವಾಧೀನಕ್ಕೆ ಎಂದಿಗೂ ಅವಕಾಶ ಇರಬಾರದುಚುಕ್ಕಿ ನಂಜುಂಡಸ್ವಾಮಿ ರೈತ ನಾಯಕಿ
ಸ್ವಯಂಪ್ರೇರಣೆಯಿಂದ ಜಮೀನು ನೀಡಲು ಬಯಸಿದ್ದ ರೈತರಿಗೂ ನಿರಾಸೆಯಾಗದಂತೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡಿದೆ. ಬಹಳಷ್ಟು ರೈತರು ಜಮೀನು ನೀಡಲು ಮುಂದೆ ಬಂದಿದ್ದಾರೆಎಂ.ಬಿ. ಪಾಟೀಲ ಕೈಗಾರಿಕಾ ಸಚಿವ
ಸಂಘಟಿತ ಹೋರಾಟಕ್ಕೆ ಐತಿಹಾಸಿಕ ಜಯ ಸಿಕ್ಕಿದೆ. ರಾಜ್ಯದ ಹಲವು ಸಂಘಟನೆಗಳು ಪ್ರಗತಿಪರರು ಒಂದಾಗಿ ಸ್ಥಳೀಯ ರೈತರ ಜತೆ ನಡೆಸಿದ ಸುದೀರ್ಘ ಹೋರಾಟ ಫಲಕೊಟ್ಟಿದೆಬಡಗಲಪುರ ನಾಗೇಂದ್ರ ಮುಖಂಡ ಸಂಯುಕ್ತ ಹೋರಾಟ–ಕರ್ನಾಟಕ
ಐದೂವರೆ ಎಕರೆ ಜಮೀನೇ ನಮ್ಮ ಕುಟುಂಬಕ್ಕೆ ಆಧಾರ. ಭೂಸ್ವಾಧೀನ ಅಧಿಸೂಚನೆಯ ನಂತರ ಬೀದಿಗೆ ಬೀಳುವ ಭಯ ಆವರಿಸಿತ್ತು. ಮೂರು ವರ್ಷ ಸರಿಯಾಗಿ ನಿದ್ದೆಯನ್ನೇ ಮಾಡಿರಲಿಲ್ಲ. ಮನೆ ಸೇರಿರಲಿಲ್ಲಮುನಿವೆಂಕಟಮ್ಮ ಸ್ಥಳೀಯ ರೈತ ಮಹಿಳೆ
ಸ್ವಇಚ್ಛೆಯ ಜಮೀನಿಗೆ ಹೆಚ್ಚಿನ ಪರಿಹಾರ: ಸಿ.ಎಂ:
ಚನ್ನರಾಯಪಟ್ಟಣ ಹೋಬಳಿಯ ಕೆಲ ರೈತರು ಜಮೀನು ನೀಡಲು ಮುಂದೆ ಬಂದಿದ್ದಾರೆ. ಸ್ವಯಂ ಪ್ರೇರಣೆಯಿಂದ ನೀಡುವ ಜಮೀನಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚಿನ ಪರಿಹಾರ ನೀಡಲಾಗುವುದು ಅಥವಾ ಅಭಿವೃದ್ಧಿಪಡಿಸಿದ ಪ್ರದೇಶದಲ್ಲಿ ಪ್ರತಿ ಎಕರೆಗೆ ಶೇ 50ರಷ್ಟು ವಿಸ್ತೀರ್ಣದ ನಿವೇಶನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
‘ಆಂಧ್ರಕ್ಕೆ ಬನ್ನಿ...’:
ವೈಮಾನಿಕ ಉದ್ಯಮದಲ್ಲಿರುವವರೇ ಈ ವಿಷಯ ಕೇಳಿ ಬೇಸರವಾಯಿತು. ವೈಮಾನಿಕ ಉದ್ಯಮ ಆಂಧ್ರ ಪ್ರದೇಶಕ್ಕೆ ಬಂದರೆ ಸ್ವಾಗತಿಸುತ್ತೇವೆ. ನಮ್ಮಲ್ಲಿ ನಿಮಗಾಗಿ ಆಕರ್ಷಕವಾದ ವೈಮಾನಿಕ ನೀತಿಯಿದೆ. ಅತ್ಯುತ್ತಮ ಪ್ರೋತ್ಸಾಹದಾಯಕ ಯೋಜನೆಗಳು ಕಾಯುತ್ತಿವೆ. ಅಲ್ಲದೆ ಬಳಕೆಗೆ ಸಿದ್ಧವಿರುವ 8000 ಎಕರೆ ಜಮೀನು (ಬೆಂಗಳೂರಿನ ಹೊರಗೆ) ಸಹ ಇದೆ. ಈ ಬಗ್ಗೆ ನೀವು ನಮ್ಮೊಂದಿಗೆ ಮಾತುಕತೆ ನಡೆಸುತ್ತೀರಿ ಎಂದು ನಿರೀಕ್ಷಿಸುತ್ತೇನೆ ನಾರಾ ಲೋಕೇಶ್ ಮಾಹಿತಿ ತಂತ್ರಜ್ಞಾನ ಸಚಿವ ಆಂಧ್ರಪ್ರದೇಶ
ಹೋರಾಟ ಸ್ಥಳದಲ್ಲಿ ಸ್ಮಾರಕ: ಚಿಂತನೆ
ದೇವನಹಳ್ಳಿ: ಭೂಸ್ವಾಧೀನ ವಿರೋಧಿಸಿ 1,198 ದಿನಗಳಿಂದ ಚನ್ನರಾಯಪಟ್ಟಣ ಹೋಬಳಿ ಕೇಂದ್ರದಲ್ಲಿ ರೈತರು ನಡೆಸುತ್ತಿದ್ದ ಧರಣಿ ಸ್ಥಳದಲ್ಲಿ 'ರೈತ ಹೋರಾಟ ಸ್ಮಾರಕ' ನಿರ್ಮಿಸಲು ಚಿಂತನೆ ನಡೆದಿದೆ.
ಐತಿಹಾಸಿಕ ಹೋರಾಟದ ನೆನಪಿಗಾಗಿ ಧರಣಿ ಜಾಗದಲ್ಲಿ ಸ್ಮಾರಕ ನಿರ್ಮಿಸುವ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ ಅವರಿಂದಲೇ ಲೋಕಾರ್ಪಣೆ ಮಾಡಿಸಲೂ ಚರ್ಚೆ ನಡೆದಿದೆ.
ರೈತರ ಪರವಾಗಿ ನಿರ್ಣಯ ಕೈಗೊಂಡ ಮುಖ್ಯಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಲು ಅಭಿನಂದನಾ ಸಮಾರಂಭ ಆಯೋಜಿಸಲು ರೈತರು ಮತ್ತು ಹೋರಾಟಗಾರರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಆಲೋಚನೆ ಇನ್ನೂ ಮೊಳಕೆಯ ಹಂತದಲ್ಲಿದೆ. ಶೀಘ್ರ ಎಲ್ಲರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.