ಜಿ. ಪರಮೇಶ್ವರ
ಬೆಂಗಳೂರು: 'ಸಿದ್ದರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿ ಆಗಲಿ, ದಾಖಲೆ ಮಾಡಲಿ ಎಂದು ನಾನೂ ಹಾರೈಸುತ್ತೇನೆ. ಅವರು ಈ ಐದು ವರ್ಷ ಆಡಳಿತ ಪೂರ್ಣಗೊಳಿಸಿದರೆ ಸಹಜವಾಗಿ ದಾಖಲೆ ಆಗಲಿದೆ' ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, 'ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಪಕ್ಷದ ಶಾಸಕರು ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ದರು. ಆ ಸಂದರ್ಭದಲ್ಲಿ ಹೈಕಮಾಂಡ್ ನವರು ನಮಗೆ ಎರಡೂವರೆ ವರ್ಷ ಅಧಿಕಾರ ಎಂದೇನೂ ಹೇಳಿರಲಿಲ್ಲ. ಹೀಗಾಗಿ ನಾವೆಲ್ಲ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂದೇ ಭಾವಿಸಿದ್ದೇವೆ' ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಮಲ್ಲಿಕಾರ್ಜುನ ಖರ್ಗೆ ಸುಳಿವು ಕೊಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ, 'ಅದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಹೈಕಮಾಂಡ್ ತೀರ್ಮಾನ ಏನೇ ಇದ್ದರೂ ನಾವು ಒಪ್ಪಿಕೊಳ್ಳುತ್ತೇವೆ' ಎಂದರು.
'ಎಐಸಿಸಿ ಹೊಸ ಕಚೇರಿ ಉದ್ಘಾಟನೆ ವೇಳೆ ಅವರು ಎಐಸಿಸಿ ಪುನಾರಚನೆ ಆಗಬೇಕು ಅಂದಿದ್ದರು. ಆ ಅರ್ಥದಲ್ಲಿ ಅವರು ಹೇಳಿರಬಹುದು. ಕೆಲ ರಾಜ್ಯಗಳಲ್ಲಿ ನಮ್ಮ ಪಕ್ಷ ಸೋತಿದೆ, ಪಕ್ಷ ಸಂಘಟನೆ ದೃಷ್ಟಿಯಿಂದ ಖರ್ಗೆಯವರು ಹಾಗೆ ಹೇಳಿರಬಹುದು. ಹೈಕಮಾಂಡ್ ತೀರ್ಮಾನ ಏನಿರುತ್ತೋ ಗೊತ್ತಿಲ್ಲ' ಎಂದರು.
ಮೈಕ್ರೊ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತರುವ ಬಗ್ಗೆ ಮಾತನಾಡಿದ ಪರಮೇಶ್ವರ, 'ನಾವು ಮೊದಲು ಸುಗ್ರೀವಾಜ್ಞೆ ಕಳುಹಿಸಿದಾಗ ರಾಜ್ಯಪಾಲರು ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ರಾಜ್ಯಪಾಲರ ಪ್ರಶ್ನೆಗಳಿಗೆಲ್ಲ ಸರ್ಕಾರ ಉತ್ತರ ಕಳುಹಿಸಿತ್ತು. ಅದನ್ನೆಲ್ಲ ಪರಿಶೀಲಿಸಿ ರಾಜ್ಯಪಾಲರು ಒಪ್ಪಿಗೆ ಕೊಟ್ಟಿದ್ದಾರೆ. ತಕ್ಷಣ ಅದು ಜಾರಿಗೆ ಬಂದಿದೆ' ಎಂದರು.
'ಜನರಿಗೆ ಕಿರುಕುಳ ಕೊಡುವ, ಒತ್ತಾಯ ಮಾಡುವ, ಮನೆಗೆ ಬೀಗ ಹಾಕುವ ಪ್ರಕರಣಗಳು ನಡೆಯುತ್ತಿದೆ. ಆತ್ಮಹತ್ಯೆ, ಊರು ಬಿಟ್ಟು ಹೋಗುವ ಘಟನೆಗಳು ನಡೆದಿವೆ. ಇದಕ್ಕೆಲ್ಲ ಕಡಿವಾಣ ಹಾಕಲು ಸುಗ್ರೀವಾಜ್ಞೆ ತಂದಿದ್ದೇವೆ. ರಾಜ್ಯಪಾಲರು ಕೆಲವು ಸೂಚನೆಗಳನ್ನು ಕೊಟ್ಟಿದ್ದಾರೆ' ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.